ADVERTISEMENT

ಕನಸು ಇದ್ದಲ್ಲಿ ಸೃಜನಶೀಲತೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 5:40 IST
Last Updated 20 ಫೆಬ್ರುವರಿ 2012, 5:40 IST
ಕನಸು ಇದ್ದಲ್ಲಿ ಸೃಜನಶೀಲತೆ
ಕನಸು ಇದ್ದಲ್ಲಿ ಸೃಜನಶೀಲತೆ   

ದಾವಣಗೆರೆ: ವ್ಯಕ್ತಿಯ ಹುದ್ದೆಗಿಂತ ಆತನ ಸೃಜನಶೀಲತೆ ಜೀವಮಾನದ ಕೊನೆಯವರೆಗೂ ಬರುತ್ತದೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಚ್. ಕೃಷ್ಣಯ್ಯ ಹೇಳಿದರು.

ನಗರದಲ್ಲಿ ಭಾನುವಾರ ಕಲಾಭವನ ಎಜುಕೇಷನಲ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾದ ಖ್ಯಾತ ಕಲಾವಿದರಾದ ಬೆಂಗಳೂರಿನ ಚಂದ್ರನಾಥ ಆಚಾರ್ಯ ಹಾಗೂ ಗುಲ್ಬರ್ಗದ ವಿ.ಜಿ. ಅಂದಾನಿ ಅವರಿಗೆ ಶಂಕರ ಪಾಟೀಲ ಕಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಂಕರ ಪಾಟೀಲರು ಒಬ್ಬ ಕನಸುಗಾರ, ಆಶಾವಾದಿ ಆಗದೇ ಇರುತ್ತಿದ್ದಲ್ಲಿ ಸೃಜನಶೀಲ ಸಾಧ್ಯತೆಗಳಲ್ಲಿ ತೊಡಗಿಸಿಕೊಳ್ಳಲು ಆಗುತ್ತಿರಲಿಲ್ಲ. ದಾವಣಗೆರೆಯಲ್ಲಿ ಒಂದು ಸಂಸ್ಕೃತಿ ಭವನ ಮತ್ತು ಕಲಾ ಗ್ಯಾಲರಿ ನಿರ್ಮಿಸಬೇಕೆಂಬ ಆಸೆಯೂ ಇತ್ತು. ಅದಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಹೇಳಿದರು.

ಪ್ರಶಸ್ತಿ ವಿತರಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್, ಕಲಾವಿದರು ಮತ್ತು ಸಾಹಿತಿಗಳು ತಮ್ಮ ಆರೋಗ್ಯ ಚೆನ್ನಾಗಿಟ್ಟುಕೊಳ್ಳಬೇಕು. ಕಲೆ ಸಂಸ್ಕೃತಿ ವಿಚಾರದ ಕಾರ್ಯಕ್ರಮ  ಹಮ್ಮಿಕೊಳ್ಳಲು ಯಾವುದೇ ನೋಂದಾಯಿತ ಸಂಸ್ಥೆ ಮುಂದೆ ಬಂದರೆ ಅವರಿಗೆ ಇಲಾಖೆ ನೆರವಾಗುತ್ತದೆ. ಶಂಕರ ಪಾಟೀಲರ ಹುಟ್ಟುಹಬ್ಬದ ಸಲುವಾಗಿ ವಿಚಾರ ಸಂಕಿರಣ ಏರ್ಪಡಿಸುವುದಾದರೆ ಅದಕ್ಕೆ ಇಲಾಖೆ ವತಿಯಿಂದ ಆರ್ಥಿಕ ನೆರವು ಕೊಡಲಾಗುವುದು ಎಂದರು.

ಪ್ರಶಸ್ತಿ ಸ್ವೀಕರಿಸಿದ ಚಂದ್ರನಾಥ ಆಚಾರ್ಯ ಮಾತನಾಡಿ, ಶಂಕರ ಪಾಟೀಲ ಮತ್ತು ತಮ್ಮ ಒಡನಾಟ 4 ದಶಕಗಳಷ್ಟು ಹಳೆಯದು. `ಪ್ರಜಾವಾಣಿ~ಯಲ್ಲಿ ಸೇವೆಯಲ್ಲಿದ್ದಾಗ ಪತ್ರಿಕಾ ಕಚೇರಿ  ಒಂದು ಬೌದ್ಧಿಕ ಕೇಂದ್ರವಾಗಿತ್ತು. ಎಲ್ಲ ಸಾಹಿತಿ, ಕಲಾವಿದರು ಬಂದು ಸೇರಿ ವಿಚಾರ ವಿನಿಮಯ ಮಾಡುತ್ತಿದ್ದರು. ಹಾಗೇ ಬರುತ್ತಿದ್ದ ಪಾಟೀಲರು ಒಬ್ಬ ಒಳ್ಳೆಯ ಛಾಯಾಗ್ರಾಹಕ ಕೂಡಾ ಆಗಿದ್ದರು. ಅವರ ಹೆಸರಿನ ಈ ಪ್ರಶಸ್ತಿ ನನ್ನೊಳಗಿನ ನನ್ನನ್ನು ಎತ್ತರಿಸಿದೆ ಎಂದರು. ಇನ್ನೊಬ್ಬ ಪುರಸ್ಕೃತ ವಿ.ಜಿ. ಅಂದಾನಿ ಅವರು ಪ್ರಶಸ್ತಿಗೆ ಕೃತಜ್ಞತೆ ಸಲ್ಲಿಸಿದರು.

 ಜಾನಪದ ವಿದ್ವಾಂಸ ಡಾ.ಎಂ.ಜಿ. ಈಶ್ವರಪ್ಪ ಪ್ರಶಸ್ತಿ ವಾಚನ ಮಾಡಿದರು. ಕವಿ, ನಾಡೋಜ ಡಾ.ಚನ್ನವೀರ ಕಣವಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಜೆ.ಎಸ್. ಖಂಡೇರಾವ್, ರೋಟರಿ ಕ್ಲಬ್ ಕಾರ್ಯದರ್ಶಿ ಬಿ.ಜಿ. ಶಂಕರ ಪಾಟೀಲ, ಡಾ.ಕಿಶೋರ ಎನ್. ದಾತನಾಳ, ಡಾ.ಸಿದ್ದಲಿಂಗಸ್ವಾಮಿ ಹಿರೇಮಠ ಉಪಸ್ಥಿತರಿದ್ದರು. ನಯನ ಎಸ್. ಪಾಟೀಲ ಸ್ವಾಗತಿಸಿದರು. ಜೆ. ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.