ADVERTISEMENT

ಕನಿಷ್ಠ ವೇತನ ನಿಗದಿಪಡಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 11:25 IST
Last Updated 18 ಜನವರಿ 2011, 11:25 IST

ಹರಿಹರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ತಾಲ್ಲೂಕು ಘಟಕದ ಕಾರ್ಯಕರ್ತೆಯರು ಸೋಮವಾರ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದರು.ನೀರಾವರಿ ಇಲಾಖೆ ಆವರಣದ ಗಣೇಶ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಗೊಂಡಿತು. ಶಿವಮೊಗ್ಗ ರಸ್ತೆ, ಚನ್ನಮ್ಮ ವೃತ್ತ, ಮುಖ್ಯರಸ್ತೆ, ಮಹಾತ್ಮ ಗಾಂಧಿ ವೃತ್ತ, ಹರಪನಹಳ್ಳಿ ರಸ್ತೆಯ ಮೂಲಕ ತಾಲ್ಲೂಕು ಪಂಚಾಯ್ತಿ ಕಚೇರಿ ಆವರಣವನ್ನು ತಲುಪಿತು.

ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿ, ‘ಗೌರವಧನ ಬೇಡ. ಸಂಬಳ ನೀಡಿ’ ಎಂದು ಘೋಷಣೆಗಳನ್ನು ಕೂಗಿದರು. ಸುಮಾರು 20ನಿಮಿಷಗಳ ಕಾಲ ಸಂಚಾರಿ ವ್ಯವಸ್ಥೆ ಸ್ಥಗಿತಗೊಂಡಿತ್ತು.ತಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಹುದ್ದೆಗಳನ್ನು ಕಾಯಂ ಗೊಳಿಸಬೇಕು. ಆರೋಗ್ಯ ಭತ್ಯೆಯನ್ನು ಕೂಡಲೇ ಬಿಡುಗಡೆ ಮಾಡಬೇಕು.
 
ಉರುವಲಿಗಾಗಿ ಮಾಸಿಕ ನೀಡುತ್ತಿರುವ`ರೂ 100 ಅನ್ನು 500ಕ್ಕೆ ಹೆಚ್ಚಿಸಬೇಕು. ಅಂಗನವಾಡಿ ಕಟ್ಟಡ ಬಾಡಿಗೆಯನ್ನು `ರೂ500 ರಿಂದ ` ರೂ1,000ಕ್ಕೆ ಹೆಚ್ಚಿಸಬೇಕು. ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕು. ಅಪಘಾತ ಅಥವಾ ದೀರ್ಘಕಾಲ ಆಸ್ಪತ್ರೆಯಲ್ಲಿ ಇರಬೇಕಾದ ಸಂದರ್ಭದಲ್ಲಿ ಸಂಬಳಸಹಿತ ರಜಾ ನೀಡಬೇಕು. ಅಂಗನವಾಡಿ ಮಕ್ಕಳಿಗೂ ಸಮವಸ್ತ್ರ ನೀಡಬೇಕು ಎಂದು ಆಗ್ರಹಿಸಿದರು.

ನಂತರ ತಾ.ಪಂ. ಇಒ ಎಚ್.ಎನ್. ರಾಜ್ ಅವರಿಗೆ ಮನವಿ ಸಲ್ಲಿಸಿದರು.ಸಂಘದ ಜಿಲ್ಲಾ ಸಂಚಾಲಕ ಎಚ್.ಬಿ. ರುದ್ರಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷೆ ಬಿ.ಎಸ್. ನಿರ್ಮಲಾ, ಕಾರ್ಯದರ್ಶಿ ಎಚ್.ವೈ. ಸುನಿತಾ, ಖಜಾಂಚಿ ಕೆ. ಸರೋಜಾ, ಉಪಾಧ್ಯಕ್ಷೆ ಎಚ್.ಡಿ. ಜ್ಯೋತಿ, ಆರ್.ಎಂ. ನಾಗರತ್ನಾ, ಎಚ್.ಎಂ. ಸಾವಿತ್ರಿ, ಕೆ.ವಿ. ಬಸಮ್ಮ, ಕೆ.ಎಚ್. ವೀಣಾ ಹಾಗೂ ನೂರಾರು ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.