ADVERTISEMENT

ಕಳಪೆ ಕಾಮಗಾರಿಯಿಂದ ತುಂಬಿದ್ದ ಕೆರೆ ಖಾಲಿ: ಸಿದ್ದೇಶ್ವರ ಆರೋಪ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 7:16 IST
Last Updated 5 ಅಕ್ಟೋಬರ್ 2017, 7:16 IST

ಜಗಳೂರು: ತಾಲ್ಲೂಕಿನ ಚಿಕ್ಕ ಅರಕೆರೆ ಸಮೀಪ ₹ 1.50 ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಿರುವ ಇಂಗುಕೆರೆ ಕಳಪೆಯಾಗಿದ್ದು, ಅಮೂಲ್ಯ ನೀರು ಸೋರಿಕೆಯಾಗುತ್ತಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಆರೋಪಿಸಿದರು.

ತಾಲ್ಲೂಕಿನ ವಿವಿಧ ಚೆಕ್‌ಡ್ಯಾಂ ಹಾಗೂ ಇಂಗುಕೆರೆಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಎರಡು ವರ್ಷ ಬರಗಾಲದಿಂದ ತತ್ತರಿಸಿದ್ದ ತಾಲ್ಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದೆ. ಸಣ್ಣ ನೀರಾವರಿ ಇಲಾಖೆಯಿಂದ ತಾಲ್ಲೂಕಿನ ವಿವಿಧೆಡೆ ಕೋಟ್ಯಂತರ ರೂಪಾಯಿ ವೆಚ್ಚದ ಬಹುತೇಕ ಕೆರೆ ಮತ್ತು ಚೆಕ್‌ಡ್ಯಾಂ ಕಾಮಗಾರಿಗಳು ಅತ್ಯಂತ ಕಳಪೆಯಾಗಿವೆ. ಚಿಕ್ಕ ಅರಕೆರೆ ಸಮೀಪ ಹೊಸದಾಗಿ ನಿರ್ಮಿಸಿರುವ ಇಂಗುಕೆರೆ ಒಂದು ತಿಂಗಳಲ್ಲಿ ಮೂರು ಸಲ ತುಂಬಿ ಹರಿದಿದೆ. ಆದರೆ, ಕಳಪೆ ಕಾಮಗಾರಿಯ ಕಾರಣ ಕೋಡಿಯ ತಳಭಾಗದಲ್ಲಿ ಬಿರುಕುಬಿಟ್ಟಿದ್ದು, ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಪೋಲಾಗುತ್ತಿದೆ. ಇದಕ್ಕೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೇ ಕಾರಣ. ಕಳಪೆ ಕಾಮಗಾರಿಗೆ ಕಾರಣವಾದ ಸಹಾಯಕ ಎಂಜಿನಿಯರ್‌ ತಿಪ್ಪೇಸ್ವಾಮಿ ಅವರು ನಾನು ಇಲ್ಲಿಗೆ ಆಗಮಿಸುವ ವಿಷಯ ತಿಳಿದು ಸ್ಥಳದಿಂದ ಪರಾರಿಯಾಗಿದ್ದಾರೆ’ ಎಂದು ದೂರಿದರು.

ADVERTISEMENT

ಕಾರ್ಯಪಾಲಕ ಎಂಜಿನಿಯರ್‌ ಸೋಮಶೇಖರ್ ಅವರನ್ನು ದೂರವಾಣಿಯ ಮೂಲಕ ತರಾಟೆಗೆ ತೆಗೆದುಕೊಂಡರು.

ಮಾಜಿ ಶಾಸಕ ಎಸ್‌.ವಿ. ರಾಮಚಂದ್ರ ಮಾತನಾಡಿ, ‘ಸಣ್ಣ ನೀರಾವರಿ ಇಲಾಖೆ ವತಿಯಿಂದ ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ₹ 35ಕೋಟಿಗೂ ಹೆಚ್ಚು ವೆಚ್ಚದ ಚೆಕ್‌ಡ್ಯಾಂ ಮತ್ತು ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ. ಅವ್ಯವಹಾರದಲ್ಲಿ ಇಲಾಖೆಯ ಎಂಜಿನಿಯರ್‌ಗಳು ಭಾಗಿಯಾಗಿದ್ದು, ತನಿಖೆಗೆ ಒತ್ತಾಯಿಸಿ ಸದನ ಸಮಿತಿಗೆ ದೂರು ನೀಡಲಾಗುವುದು’ ಎಂದರು.

ತಹಶೀಲ್ದಾರ್‌ ಶ್ರೀಧರಮೂರ್ತಿ, ಎಡಿಎ ಕೆ.ಟಿ. ಬಸಣ್ಣ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಸ್‌.ಕೆ. ಮಂಜುನಾಥ್‌, ಸವಿತಾ ಕಲ್ಲೇಶಪ್ಪ, ಮಾಜಿ ಸದಸ್ಯ ಎಚ್‌. ನಾಗರಾಜ್‌, ಡಿ.ವಿ. ನಾಗಪ್ಪ, ಚಟ್ನಳ್ಳಿ ರಾಜಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.