ADVERTISEMENT

ಕಳಪೆ ಕಾಮಗಾರಿ: ಭಾರಿ ಅವ್ಯವಹಾರ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 6:00 IST
Last Updated 10 ಅಕ್ಟೋಬರ್ 2017, 6:00 IST
ಜಗಳೂರು ತಾಲ್ಲೂಕಿನ ದಿಬ್ಬದಹಳ್ಳಿ ಸಮೀಪ ₹ 2 ಕೋಟಿ ವೆಚ್ಚದಲ್ಲಿ ಜಿನಿಗಿ ಹಳ್ಳಕ್ಕೆ ನಿರ್ಮಿಸಿರುವ ಬ್ಯಾರೇಜ್‌ನಲ್ಲಿ ನೀರು ಸೋರಿ ಹೋಗಿರುವುದನ್ನು ಮಾಜಿ ಶಾಸಕ ಎಸ್‌.ವಿ. ರಾಮಚಂದ್ರ ವೀಕ್ಷಿಸಿದರು.
ಜಗಳೂರು ತಾಲ್ಲೂಕಿನ ದಿಬ್ಬದಹಳ್ಳಿ ಸಮೀಪ ₹ 2 ಕೋಟಿ ವೆಚ್ಚದಲ್ಲಿ ಜಿನಿಗಿ ಹಳ್ಳಕ್ಕೆ ನಿರ್ಮಿಸಿರುವ ಬ್ಯಾರೇಜ್‌ನಲ್ಲಿ ನೀರು ಸೋರಿ ಹೋಗಿರುವುದನ್ನು ಮಾಜಿ ಶಾಸಕ ಎಸ್‌.ವಿ. ರಾಮಚಂದ್ರ ವೀಕ್ಷಿಸಿದರು.   

ಜಗಳೂರು: ‘ಸಣ್ಣ ನೀರಾವರಿ ಇಲಾಖೆ ತಾಲ್ಲೂಕಿನಲ್ಲಿ ನಿರ್ಮಿಸಿರುವ ಹಲವು ಕೆರೆ, ಚೆಕ್‌ಡ್ಯಾಂ ಕಾಮಗಾರಿಗಳು ಕಳಪೆಯಾಗಿವೆ. ಹೀಗಾಗಿ ಅಪಾರ ಪ್ರಮಾಣದ ಮಳೆ ನೀರು ವ್ಯರ್ಥವಾಗಿ ಸೋರಿ ಹೋಗುತ್ತಿದೆ’ ಎಂದು ಮಾಜಿ ಶಾಸಕ ಎಸ್‌.ವಿ. ರಾಮಚಂದ್ರ ಆರೋಪಿಸಿದರು. ಸಣ್ಣ ನೀರಾವರಿ ಇಲಾಖೆಯಿಂದ ತಾಲ್ಲೂಕಿನ ದಿಬ್ಬದಹಳ್ಳಿ ಸಮೀಪ
₹ 2 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಬ್ಯಾರೇಜ್‌ ಹಾಗೂ ಜಗಳೂರು ಕೆರೆ ವಾಕ್‌ಪಾಥ್‌ ಕಾಮಗಾರಿ ಸ್ಥಳಗಳಿಗೆ ಸೋಮವಾರ ಪತ್ರಕರ್ತರ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.

‘ತೊರೆಸಾಲು ಪ್ರದೇಶದ ಜೀವನಾಡಿಯಾದ ಜಿನಿಗಿ ಹಳ್ಳಕ್ಕೆ ನಿರ್ಮಿಸಿರುವ ಸೇತುವೆ ಕಮ್‌ ಬ್ಯಾರೇಜ್‌ ಸಂಪೂರ್ಣ ಕಳಪೆಯಾಗಿದೆ. ಇಲ್ಲಿ ಹನಿ ನೀರೂ ಇಲ್ಲದಂತೆ ಸೋರಿ ಹೋಗಿದೆ. ಇಲ್ಲಿ ಒಂದು ಕಿ.ಮೀ ಹಿನ್ನೀರು ಸಂಗ್ರಹವಾಗುತ್ತಿತ್ತು. ಈ ಭಾಗದ ಹತ್ತಾರು ಹಳ್ಳಿಗಳಲ್ಲಿ ಅಂತರ್ಜಲ ಹೆಚ್ಚಳವಾಗುತ್ತಿತ್ತು. ನೀರಾವರಿ ಇಲಾಖೆ ಅಧಿಕಾರಿಗಳ ಲೂಟಿಗೆ ಇದು ತಾಜಾ ಸಾಕ್ಷಿಯಾಗಿದೆ’ ಎಂದು ಅವರು ದೂರಿದರು.

‘ಕೆಲವು ತಿಂಗಳ ಹಿಂದೆ ನಿರ್ಮಿಸಿರುವ ಬ್ಯಾರೇಜ್‌ಗೆ ಅಳವಡಿಸಿರುವ 38 ಕಬ್ಬಿಣದ ಕಳಪೆ ಗೇಟ್‌ಗಳ ತಳಭಾಗದಲ್ಲಿ ನೀರು ಸರಾಗವಾಗಿ ಹರಿದು ಪೋಲಾಗುತ್ತಿದೆ. ಬೇಸಿಗೆ ಸಮಯದಲ್ಲಿ ಇಲ್ಲಿನ ರೈತರು ತಮ್ಮ ತೋಟಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ನೀರಿಗೆ ಮೊರೆಹೋಗಿ ಸಾಕಷ್ಟು ನಷ್ಟ ಅನುಭವಿಸಿದ್ದರು. ಹಳ್ಳ ಹರಿಯುವುದೇ ಅಪರೂಪವಾಗಿರುವ ಈ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಸಂಗ್ರಹವಾಗಿದ್ದ ನೀರು ಬೊಗಸೆಯಷ್ಟೂ ನಿಲ್ಲದೆ ಸೋರಿ ಹೋಗಿದೆ’ ಎಂದು ಅವರು ಆರೋಪಿಸಿದರು.

ADVERTISEMENT

‘ಐತಿಹಾಸಿಕ ಜಗಳೂರು ಕೆರೆಯಲ್ಲಿ ನಾಲ್ಕು ಈಗ ವಾಕ್‌ ಪಾಥ್‌ ಹೆಸರಿನಲ್ಲಿ ಕೆರೆಯ ಸುತ್ತಲೂ ದಾರಿ ಮಾಡಲಾಗಿದೆ. ಇದರಿಂದ ಕೆರೆ ಒತ್ತುವರಿದಾರರಿಗೆ ಅನುಕೂಲವಾಗಿದ್ದು, ಮಳೆ ನೀರು ಕೆರೆಗೆ ಹರಿದು ಬರಲು ಪಾಥ್ ಕಾಮಗಾರಿ ಅಡ್ಡಿಯಾಗಿದೆ.

ಪಟ್ಟಣದ ಕೊಳಚೆ ತ್ಯಾಜ್ಯ ದೊಡ್ಡ ಕಾಲುವೆಯ ಮೂಲಕ ಕೆರೆಗೆ ಹರಿಸಲಾಗುತ್ತಿದೆ. ಕೆರೆ ಗಬ್ಬೆದ್ದು ನಾರುತ್ತಿದೆ. ಅಂತರ್ಜಲವೂ ಕಲುಷಿತವಾಗಿದ್ದು, ಕೊಳವೆಬಾವಿಗಳ ಮೂಲಕ ಪಟ್ಟಣದ ಜನರು ಕೊಳಚೆ ನೀರನ್ನು ಕುಡಿಯುವ ಸ್ಥಿತಿ ನಿರ್ಮಿಸಲಾಗಿದೆ. 500 ಎಕೆರೆ ಪ್ರದೇಶದ ಕೊಳಚೆ ಸರೋವರ ಮಾಡಿದ ಕೀರ್ತಿ ಶಾಸಕರಿಗೆ ಸಲ್ಲಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನೀರಾವರಿ ಇಲಾಖೆ ಎಂಜಿನಿಯರ್‌ಗಳು ನಾಲ್ಕು ವರ್ಷಗಳಲ್ಲಿ ₹ 4.5 ಕೋಟಿಯನ್ನು ಈ ಕೆರೆಯ ಹೆಸರಿನಲ್ಲಿ ಲೂಟಿ ಮಾಡಿದ್ದಾರೆ’ ಎಂದು ರಾಮಚಂದ್ರ ಆರೋಪಿಸಿದರು.
‘ಚಿಕ್ಕಅರಕೆರೆ ಸಮೀಪ ₹ 1.50 ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಿರುವ ಇಂಗುಕೆರೆ ಭರ್ತಿಯಾಗಿದ್ದು, ಕೆಲವೇ ತಾಸುಗಳಲ್ಲಿ ಸಂಪೂರ್ಣ ಖಾಲಿಯಾಗಿದೆ.

ಪಾಲನಾಯಕನ ಕೋಟೆ ಸಮೀಪ ₹ 70 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಚೆಕ್‌ಡ್ಯಾಂನಲ್ಲೂ ಹನಿ ನೀರು ನಿಲ್ಲುತ್ತಿಲ್ಲ. ಕಳಪೆ ಕಾಮಗಾರಿ ಕಾರಣ ತಳಭಾಗದಲ್ಲಿ ಸೋರಿಕೆಯಾಗಿ ಅಮೂಲ್ಯ ಜಲ ವ್ಯರ್ಥವಾಗಿದೆ. ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗಳು ಸರ್ಕಾರಿ ಹಣದ ದರೋಡೆಗೆ ಇಳಿದಿದ್ದಾರೆ. ಇವರ ಜೊತೆಗೆ ಜನಪ್ರತಿನಿಧಿಗಳು ಶಾಮೀಲಾಗಿದ್ದಾರೆ’ ಎಂದು ಮಾಜಿ ಶಾಸಕರು ಗಂಭೀರ ಆರೋಪ ಮಾಡಿದರು.

ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಶಂಕ್ರನಾಯ್ಕ, ತಿಮ್ಮಾಭೋವಿ, ಮರೇನಹಳ್ಳಿ ಬಸವರಾಜ್‌ ಹಾಗೂ ಕಾನನಕಟ್ಟೆ ತಿಪ್ಪೇಸ್ವಾಮಿ ಈಶ್ವರಪ್ಪ, ಲಕ್ಷ್ಮಣ್‌, ಸೂರಡ್ಡಿಹಳ್ಳಿ ಶರಣಪ್ಪ, ಡಿ.ವಿ. ನಾಗಪ್ಪ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.