ADVERTISEMENT

ಕಳಪೆ ಹತ್ತಿಬೀಜ: ಮುಂದುವರಿದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 8:07 IST
Last Updated 24 ಸೆಪ್ಟೆಂಬರ್ 2013, 8:07 IST

ದಾವಣಗೆರೆ: ಕನಕ ಹತ್ತಿ ಬೀಜ ಕಂಪೆನಿ ವಿರುದ್ಧ ನಗರದಲ್ಲಿ ಸೋಮವಾರ ರೈತರು ಪ್ರತಿಭಟನೆ ನಡೆಸಿ, ಕೃತಕವಾಗಿ ಹತ್ತಿ ಬೀಜದ ಕೊರತೆ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಲಾಗುತ್ತಿದೆ ಎಂದು ಆರೋಪಿಸಿದರು.

ಕಳಪೆ ಹತ್ತಿ ಬೀಜ ಹಾಗೂ ಗೊಬ್ಬರ ಮಾರಾಟ ಮಾಡಲಾಗುತ್ತಿದ್ದ ಮಳಿಗೆಗಳನ್ನು ಮುಚ್ಚಿಸಿದ ರೈತರು ಬಳಿಕ ಜಯದೇವ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಬೈಕ್‌ ರಾ್ಯಲಿಯಲ್ಲಿ ತೆರಳಿ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್‌ ಮಾತನಾಡಿ, ಕಳೆದ ವರ್ಷ ಕನಕ ಕಂಪೆನಿಯ ಬಿತ್ತನೆ ಬೀಜದಿಂದ ಇಳುವರಿ ಉತ್ತಮವಾಗಿದ್ದ ಕಾರಣ ಈ ಬಾರಿಯೂ ರೈತರು ಇದೇ ಕಂಪೆನಿಯ ಬೀಜ ಬಿತ್ತನೆ ಮಾಡಿದ್ದರು. ₨ 730ಕ್ಕೆ ಸಿಗಬೇಕಿದ್ದ ಪ್ರತಿ ಪ್ಯಾಕೆಟ್‌ ಬೀಜವನ್ನು ₨ 1,200ಗಳಿಗೆ ಕಂಪೆನಿಯವರು ಮಾರಾಟ ಮಾಡಿದರು.

ಆದರೆ, ಈ ಬಾರಿ ಗಿಡಗಳು ಮೂರೂವರೆಯಿಂದ ನಾಲ್ಕೂವರೆ ಅಡಿ ಬೆಳೆದಿದ್ದರೂ ಕಾಯಿ ಬಿಟ್ಟಿಲ್ಲ. ಇದರಿಂದಾಗಿ ರೈತರಿಗೆ ಸಾಕಷ್ಟು ನಷ್ಟವಾಗಿದ್ದು, ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಲು ನಿರ್ಧರಿಸಲಾಗಿದ್ದು, ಜಿಲ್ಲೆಯಲ್ಲಿ ಹತ್ತಿ ಬೆಳೆದಿರುವ ಪ್ರದೇಶಗಳಲ್ಲಿ ಬುಧವಾರ ರಸ್ತೆ ತಡೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಕೈದಾಳೆ ವಸಂತ ಕುಮಾರ್‌, ಕೈದಾಳೆ ರವಿಕುಮಾರ್‌, ಕಾನಕಟ್ಟಿ ತಿಪ್ಪೇಸ್ವಾಮಿ, ಗಡಿಮಾಕುಂಟಿ ಬಸವರಾಜಪ್ಪ, ಪಾಮೇನಹಳ್ಳಿ ಗೌಡ್ರ ಶೇಖರಪ್ಪ, ಹೊನ್ನೂರು ಮಂಜಪ್ಪ, ಫಣಿಯಾಪುರ ಲಿಂಗರಾಜ್‌, ಆವರಗೆರೆ ಬಸವರಾಜ್‌, ಹರಪನಹಳ್ಳಿ ಹನುಮಂತಪ್ಪ ಹಾಗೂ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.