ADVERTISEMENT

ಕಾನೂನು ಕೈಗೆ ತೆಗೆದುಕೊಳ್ಳದಿರಿ; ಎಸ್‌ಪಿ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಮೇ 2012, 9:50 IST
Last Updated 28 ಮೇ 2012, 9:50 IST

ದಾವಣಗೆರೆ: ಹೋರಾಟ ಮಾಡುವುದು ತಪ್ಪಲ್ಲ. ಆದರೆ, ಹೋರಾಟದ ಹೆಸರಿನಲ್ಲಿ ಕಾನೂನು ಕೈಗೆ ತೆಗೆದುಕೊಳ್ಳುವುದು ತಪ್ಪು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಲಿತ ಮುಖಂಡರಿಗೆ ಎಚ್ಚರಿಕೆ ನೀಡಿದರು.

ಭಾನುವಾರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕುಂದುಕೊರತೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ತಮ್ಮ ಪರಿಮಿತಿಯೊಳಗೆ ಬರುವ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸಲಾಗುವುದು. ಉಳಿದಂತೆ ಇತರ ಇಲಾಖೆಗಳ ಜತೆಗೆ ಸಮಾಲೋಚನೆ ನಡೆಸಿ ಪರಿಹಾರಕ್ಕೆ ಯತ್ನಿಸಲಾಗುವುದು ಎಂದು ತಿಳಿಸಿದರು.

ಪ್ರಮುಖ ಚರ್ಚೆಗಳು: ಕೆಟಿಜೆ ನಗರಕ್ಕೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಿಸಬೇಕು. ಅಥವಾ ಕೆಟಿಜೆ ನಗರಕ್ಕಷ್ಟೇ ಪತ್ಯೇಕ ಠಾಣೆ ನಿರ್ಮಿಸಬೇಕು ಎಂದು ದಲಿತ ಮುಖಂಡರೊಬ್ಬರು ತಿಳಿಸಿದರು. ಇದೇ ರೀತಿ ವಿನೋಬನಗರಕ್ಕೂ ಪ್ರತ್ಯೇಕ ಠಾಣೆ ಸ್ಥಾಪಿಸಬೇಕು ಎಂದು ವಕೀಲ ಮಂಜಪ್ಪ ಅವರು ಕೋರಿದರು.

ಈ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ, ಹೊಸ ಠಾಣೆ ಸ್ಥಾಪಿಸಲು ದೀರ್ಘ ಪ್ರಕ್ರಿಯೆ ಆಗಬೇಕು. ಹೆಚ್ಚುವರಿ ಸಿಬ್ಬಂದಿ ಹಾಗೂ ಗಸ್ತು ಏರ್ಪಡಿಸುವುದಾಗಿ ತಿಳಿಸಿದರು. ದಲಿತ ಕಾಲೊನಿ ಹಾಗೂ ವಸತಿ ಪ್ರದೇಶದಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕು ಎಂದು ಕುಕ್ಕವಾಡ ಮಲ್ಲೇಶ್,  ಮಂಜಪ್ಪ, ತಿಪ್ಪೇಸ್ವಾಮಿ, ಮಂಜುನಾಥ್ ಕೋರಿದರು.

ಮದ್ಯದಂಗಡಿಗೆ ಅಬಕಾರಿ ಇಲಾಖೆ ಪರವಾನಗಿ ನೀಡುತ್ತದೆ. ಅವರೊಂದಿಗೆ ಚರ್ಚಿಸಬೇಕು. ಉಳಿದಂತೆ ಸಾರ್ವಜನಿಕರಿಗೆ ತೊಂದರೆ ಆಗಿದ್ದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಜಾದ್‌ನಗರ ಹಾಗೂ ಅತ್ತಿಗೆರೆ ಗ್ರಾಮಗಳಲ್ಲಿ ದಲಿತ ವ್ಯಕ್ತಿಗಳ ಹತ್ಯೆ ಸಂಬಂಧಿಸಿದಂತೆ ಸರಿಯಾದ ತನಿಖೆ ಆಗಬೇಕು. ಅಲ್ಲದೇ ಸಾವಿಗೀಡಾದವರ ಕುಟುಂಬಕ್ಕೆ ನೆರವು ದೊರೆಯಬೇಕು ಎಂದು ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್ ಒತ್ತಾಯಿಸಿದರು.

ಚರ್ಚೆಯಾದ ವಿಶ್ವಚೇತನ:  ನಗರದ ಪ್ರತಿಷ್ಠಿತ ವಿಶ್ವಚೇತನ ವಸತಿ ಶಾಲೆಯಲ್ಲಿ ಊಟ ಸರಿಯಿಲ್ಲ. ಅನ್ನದಲ್ಲಿ ಹುಳು ಇದೆ. ಈ ಬಗ್ಗೆ ದಲಿತ ಮುಖಂಡರು ಹೋರಾಟ ನಡೆಸಿದಾಗ ಅವರ ಮೇಲೆ ಪ್ರಕರಣ ದಾಖಲಿಸಿ ಚಾರ್ಜ್‌ಷೀಟ್ ಹಾಕಲಾಗಿದೆ. ಅಲ್ಲಿನ ಅವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳೂ ಪ್ರತಿಭಟನೆ ಮಾಡಿದ್ದಾರೆ. ಬೇರೆ ಸಂಘಟನೆಗಳೂ ಹೋರಾಟ ನಡೆಸಿವೆ. ಆದರೆ,  ನಮ್ಮ ದೂರನ್ನು ಪರಿಶೀಲಿಸದೇ ಅವರ ದೂರಿನ ಮೇರೆಗೆ ತಮ್ಮ ಮೇಲೆ ಪ್ರಕರಣ ದಾಖಲಿಸಿ ಅನ್ಯಾಯ ಮಾಡಲಾಗಿದೆ ಎಂದು ದಲಿತ ಮುಖಂಡರಾದ ಹೂವಿನಮಡು ಆಂಜಿನಪ್ಪ, ಬಿ. ದುಗ್ಗಪ್ಪ  ಇತರರು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟದ ಹೆಸರಿನಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಖಾಸಗಿ ಸಂಸ್ಥೆಯ ಆವರಣದಲ್ಲಿ ಹೋಗಿ ಗಲಾಟೆ ಮಾಡಿರುವುದು ತಪ್ಪು. ಏನಿದ್ದರೂ ಈ ಪ್ರಕರಣವನ್ನು ತಾವೇ ಖುದ್ದಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಅಸ್ಪೃಶ್ಯತೆ ಆಚರಣೆಯಲ್ಲಿದೆ. ಕೆಲವೆಡೆ ಮಾದಿಗ ಜನಾಂಗಕ್ಕೆ ಕ್ಷೌರ ಮಾಡುವುದಿಲ್ಲ ಎಂದು ಮಂಜುನಾಥ್ ದೂರಿದರು.

ಯಾವುದೇ ದೂರು ಇದ್ದಲ್ಲಿ ಸ್ಪಷ್ಟವಾಗಿ ತಿಳಿಸಬೇಕು ಸುಮ್ಮನೆ ಆರೋಪಿಸುವುದು ಸಲ್ಲದು ಎಂದು ಎಸ್‌ಪಿ ಹೇಳಿದರು.

ಸಭಾತ್ಯಾಗ ಪ್ರಹಸನ
ಬೆಳಿಗ್ಗೆ 11ಕ್ಕೆ  ಆರಂಭವಾಗಬೇಕಿದ್ದ ಸಭೆ 11.45 ಆದರೂ ಆರಂಭವಾಗಲಿಲ್ಲ. ಇದರಿಂದ ಬೇಸರಗೊಂಡ ಮುಖಂಡರು ಸಭೆಯಿಂದ ಹೊರನಡೆದರು. ಕೊನೆಗೆ ಹಿರಿಯ ಮುಖಂಡರು ಮತ್ತು ಪೊಲೀಸ್ ಅಧಿಕಾರಿಗಳು ಸಮಾಧಾನಪಡಿಸಿ ಮತ್ತೆ ಸಭಾಂಗಣಕ್ಕೆ ಕರೆತಂದರು.

ಹೆಚ್ಚುವರಿ ಎಸ್‌ಪಿ ಬಿ.ಟಿ.ಚವಾಣ್, ಗ್ರಾಮಾಂತರ ಡಿವೈಎಸ್‌ಪಿ ಕವಳಪ್ಪ, ರಾಧಾಮಣಿ, ಸಿಪಿಐ ಎಚ್.ಕೆ. ರೇವಣ್ಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.