ADVERTISEMENT

ಕಾರ್ಮಿಕರ ಬೇಡಿಕೆ; ಸರ್ಕಾರದ ಗಮನಕ್ಕೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 8:30 IST
Last Updated 13 ಫೆಬ್ರುವರಿ 2011, 8:30 IST

ದಾವಣಗೆರೆ: ಹಾಸಿಗೆ ತಯಾರಿಸುವ ಕಾರ್ಮಿಕರ ಬೇಡಿಕೆಗಳನ್ನು ಕಾರ್ಮಿಕ ಸಚಿವರ ಗಮನಕ್ಕೆ ತಂದು, ಈಡೇರಿಸುವಂತೆ ಒತ್ತಡ ಹೇರಲಾಗುವುದು ಎಂದು ಅಫಜಲ್‌ಪುರ ಶಾಸಕ ಮಾಲೀಕಯ್ಯ ವಿ. ಗುತ್ತೇದಾರ್ ಭರವಸೆ ನೀಡಿದರು.

ನಗರದ ರೋಟರಿಕ್ಲಬ್ ರಂಗಮಂದಿರದಲ್ಲಿ ಶನಿವಾರ ಜಿಲ್ಲಾ ನದಾಫ್/ಪಿಂಜಾರ್ ಹಾಸಿಗೆ ತಯಾರಿಸುವವರ ಸಂಘ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಹಾಸಿಗೆ ತಯಾರಿಸುವ ಕಾರ್ಮಿಕರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಮಿಕರಿಗೆ ಪ್ರತ್ಯೇಕ ಹಣಕಾಸು ನಿಗಮ, ಸಂಘಕ್ಕೆ ನ್ಯಾಯಬೆಲೆ ಅಂಗಡಿ, ಇಎಸ್‌ಐ, ಬಿಪಿಎಲ್ ಪಡಿತರ ಕಾರ್ಡ್ ಸೌಲಭ್ಯ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಫೆ.24ರಂದು ಆರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಕಾರ್ಮಿಕ ಸಚಿವರ ಗಮನಕ್ಕೂ ತರಲಾಗುವುದು ಎಂದು ಹೇಳಿದರು.

ಎಚ್.ಡಿ. ದೇವೇಗೌಡ ಪ್ರಧಾನಮಂತ್ರಿಯಾಗಿದ್ದ ಸಂದರ್ಭ ರಾಜ್ಯ ಹಾಸಿಗೆ ತಯಾರಕರ ಕಾರ್ಮಿಕರ ಅಭಿವೃದ್ಧಿಗೆ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ` 65ಕೋಟಿ ಬಿಡುಗಡೆ ಮಾಡಲಾಗಿತ್ತು. ಅಲ್ಲದೇ, ಶೇ. 4ರ ಬಡ್ಡಿ ದರದಲ್ಲಿ ನೇರ ಸಾಲದ ಮೊತ್ತವನ್ನು ` 25ಸಾವಿರದಿಂದ ಐದು ಲಕ್ಷದವರೆಗೆ ಏರಿಕೆ ಮಾಡಲಾಗಿತ್ತು ಎಂದು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ರಾಜ್ಯದ ಅಭಿವೃದ್ಧಿಗೆ ಅಲ್ಪಸಂಖ್ಯಾತರ ಕೊಡುಗೆ ಬಹಳಷ್ಟಿದೆ. ಆದರೂ ಅಲಕ್ಷ್ಯದಿಂದ ಹಿಂದುಳಿದಿದ್ದೇವೆ. ಸಾಲದ್ದಕ್ಕೆ, ಸರ್ಕಾರದ ಸೌಲಭ್ಯಗಳೂ ಸಮರ್ಪಕವಾಗಿ ಸಿಗುತ್ತಿಲ್ಲ. ಸರ್ಕಾರ ಮತ್ತು ಸಂಸ್ಥೆಗಳ ಮೇಲೆ ಅವಲಂಬಿತವಾಗದೆ, ಬೇಡಿಕೆ ಈಡೇರಿಸಿಕೊಳ್ಳಲು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ರಾಜೀನಾಮೆ ನೀಡಲಿ: ಪ್ರಸ್ತುತ ರಾಜಕಾರಣಿಗಳು ಜನರ ದೃಷ್ಟಿಯಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ. ಸರ್ಕಾರದ ಭೂಮಿಯನ್ನು ಕುಟುಂಬದ ಸದಸ್ಯರ ಹೆಸರಿಗೆ ಮಾಡಿಕೊಂಡ ಆಪಾದನೆ ಸಾಬೀತಾಗಿದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡದೇ, ಭಂಡತನದಿಂದ ಅಧಿಕಾರದಲ್ಲಿ ಮುಂದುವರಿದ್ದಾರೆ. ಅವರಿಗೆ ಸ್ವಾಭಿಮಾನ ವಿದ್ದರೆ, ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ಅಂಜುಂ-ಎ-ಇಸ್ಲಾಂ ಅಧ್ಯಕ್ಷ ಸೈಯದ್ ಸೈಫುಲ್ಲಾ, ಪಾಲಿಕೆ ವಿರೋಧ ಪಕ್ಷದ ನಾಯಕ ದಿನೇಶ್ ಶೆಟ್ಟಿ, ವಕೀಲ ಮೌಲಾಸಾಬ್, ನಿವೃತ್ತ ಪ್ರಾಂಶುಪಾಲ ಡಾ.ಮಲ್ಲಿಕ್ ಸಾಬ್ ಇಂಗಳಗಿ, ಮುಮ್ತಾಜ್, ಗಿರಿಜಮ್ಮ, ಡಿ.ಬಿ. ಹಸನ್ ಪೀರ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಹಾಸಿಗೆ ತಯಾರಿಸುವವರ ಸಂಘದ ಅಧ್ಯಕ್ಷ ಎ.ಆರ್. ಅಯಾಜ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು.
ಇಂದು ಕಾರ್ಯಕಾರಿಣಿ ಸಭೆ

ನಗರದ ಹೊಸ ಅಪೂರ್ವ ಸಭಾಂಗಣದಲ್ಲಿ ಫೆ. 13ರಂದು ಬೆಳಿಗ್ಗೆ 11.30ಕ್ಕೆ ರಾಜ್ಯ ಮಾದಿಗ ದಂಡೋರ ಸಮಿತಿಯ ಕಾರ್ಯಕಾರಿಣಿ ಸಭೆ ಕರೆಯಲಾಗಿದೆ.ರಾಜ್ಯ ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಪಾವಗಡ ಶ್ರೀರಾಮ್ ಸಭೆ ಉದ್ಘಾಟಿಸುವರು. ಬೆಳಿಗ್ಗೆ 11.30ಕ್ಕೆ ಆರಂಭವಾಗುವ ಸಭೆ ಸಂಜೆ 7.30ರವರೆಗೆ ನಡೆಯಲಿದ್ದು, ಸಭೆಯಲ್ಲಿ ಒಳ ಮೀಸಲಾತಿ ವರ್ಗೀಕರಣ ವಿಚಾರವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಆದ್ದರಿಂದ ಎಲ್ಲಾ ಜಿಲ್ಲೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಬೇಕು ಎಂದು ಸಮಿತಿಯ ಜಿಲ್ಲಾ ಅಧ್ಯಕ್ಷ ಎಚ್.ಸಿ. ಗುಡ್ಡಪ್ಪ ಪ್ರಕಟಣೆಯಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.