ADVERTISEMENT

ಕುಟುಂಬದ ಜತೆ ಬಂದು ಮತ ಹಾಕಿದರು

ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಅಭ್ಯರ್ಥಿಗಳು; ಬಿಜೆಪಿ, ಕಾಂಗ್ರೆಸ್‌ ಪರಸ್ಪರ ಆರೋಪ

​ಪ್ರಜಾವಾಣಿ ವಾರ್ತೆ
Published 13 ಮೇ 2018, 6:20 IST
Last Updated 13 ಮೇ 2018, 6:20 IST
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಎ. ರವೀಂದ್ರನಾಥ್‌ ಹಾಗೂ ಅವರ ಪತ್ನಿ ರತ್ನಮ್ಮ ಶಿರಮಗೊಂಡನಹಳ್ಳಿಯಲ್ಲಿ ಶನಿವಾರ ಮತ ಚಲಾಯಿಸಿದ ನಂತರ ಬೆರಳಿಗೆ ಹಚ್ಚಿದ ಶಾಯಿಯನ್ನು ತೋರಿಸಿದ್ದು ಹೀಗೆ
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಎ. ರವೀಂದ್ರನಾಥ್‌ ಹಾಗೂ ಅವರ ಪತ್ನಿ ರತ್ನಮ್ಮ ಶಿರಮಗೊಂಡನಹಳ್ಳಿಯಲ್ಲಿ ಶನಿವಾರ ಮತ ಚಲಾಯಿಸಿದ ನಂತರ ಬೆರಳಿಗೆ ಹಚ್ಚಿದ ಶಾಯಿಯನ್ನು ತೋರಿಸಿದ್ದು ಹೀಗೆ   

ದಾವಣಗೆರೆ: ಶನಿವಾರ ಕುಟಂಬದೊಂದಿಗೆ ಮತಗಟ್ಟೆಗಳಿಗೆ ಬಂದ ಮುಖಂಡರು ಹಕ್ಕು ಚಲಾಯಿಸಿದರು.

ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಎ. ರವೀಂದ್ರನಾಥ್‌ ಶಿರಮಗೊಂಡನಹಳ್ಳಿಯ ಸರ್ಕಾರಿ ಶಾಲೆಯ ಮತಗಟ್ಟೆಗೆ ಬೆಳಿಗ್ಗೆ 7 ಗಂಟೆಗೇ ಬಂದಿದ್ದರು. ಸಿಬ್ಬಂದಿ ಇನ್ನೂ ಸಿದ್ಧತೆ ನಡೆಸುತ್ತಿದ್ದರಿಂದ ಹತ್ತು ನಿಮಿಷ ಕಾದು ಮತ ಚಲಾಯಿಸಿದರು.

ರವೀಂದ್ರನಾಥ್‌ ಅವರೊಂದಿಗೆ ಪತ್ನಿ ರತ್ನಮ್ಮ ಕೂಡ ಮತ ಹಾಕಿದರು. ಈ ಮತಗಟ್ಟೆಯಲ್ಲಿ ಮೊದಲನೇ ಮತ ಹಾಕಿದ್ದು ರವೀಂದ್ರನಾಥ್‌ ದಂಪತಿ.

ADVERTISEMENT

ಕೆಲಸ ಮಾಡಿ ತೋರಿಸುತ್ತೇವೆ: ‘ಪ್ರಧಾನಿ ಮೋದಿ ಅಲೆ, ಅಮಿತ್‌ ಶಾ ಕಾರ್ಯತಂತ್ರ ಹಾಗೂ ಯಡಿಯೂರಪ್ಪ ಅವರ ಅವಧಿಯಲ್ಲಿ ಆದ ಕೆಲಸಗಳೇ ಬಿಜೆಪಿ ಗೆಲುವಿಗೆ ರಹದಾರಿ ಆಗಲಿವೆ. ಕಾಂಗ್ರೆಸ್‌ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಸಮಸ್ಯೆಗಳಿಂದ ಜನ ಪರದಾಡುವಂತಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಅಭಿವೃದ್ಧಿ ಕೆಲಸಗಳನ್ನು ತ್ವರಿತವಾಗಿ ಮಾಡಿ ತೋರಿಸುತ್ತೇವೆ’ ಎಂದು ರವೀಂದ್ರನಾಥ್‌ ಹೇಳಿದರು.

ಮೋದಿ ಅಲೆಯಲ್ಲಿ ಗೆಲುವು: ತರಳಬಾಳು ಬಡಾವಣೆಯ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಪತ್ನಿ ಗಾಯತ್ರಿ ಅವರೊಂದಿಗೆ ಮತ ಚಲಾಯಿಸಿದರು.

‘ಯುವ ಸಮೂಹ ‘ಮೋದಿ, ಮೋದಿ’ ಎಂದು ಸಂಭ್ರಮದಿಂದ ಕುಣಿಯುತ್ತಿದೆ. ಜಿಲ್ಲೆಯ ಎಂಟೂ ಕ್ಷೇತ್ರಗಳಲ್ಲೂ ಬಿಜೆಪಿಗೆ ವಾತಾವರಣವಿದೆ. ವೀರಶೈವ–ಲಿಂಗಾಯತ ಸ್ವತಂತ್ರ ಧರ್ಮದ ವಿಚಾರ ದಾವಣಗೆರೆ ಚುನಾವಣೆ ಮೇಲೆ ಪರಿಣಾಮ ಬೀರದು. ಹೀಗಾಗಿ, ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ’ ಎಂದು ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

ಕಣ್ಣೀರಿಟ್ಟ ಜಾಧವ್‌: ಪತ್ನಿ ಶೀಲಾಬಾಯಿ ಜತೆಗೆ ದೇವರಾಜ ಅರಸ್‌ ಬಡಾವಣೆಯ ಮತಗಟ್ಟೆಗೆ ಬಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶವಂತರಾವ್‌ ಜಾಧವ್‌ ಹಕ್ಕು ಚಲಾಯಿಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡುವಾಗ ಭಾವುಕರಾಗಿ ಗಳಗಳನೆ ಅತ್ತರು. ‘ಮೂರು ಬಾರಿ ಕ್ಷೇತ್ರದಲ್ಲಿ ಸೋತಿದ್ದೇನೆ. ಈ ಬಾರಿಯಾದರೂ ಮತದಾರರು ಕೈ ಹಿಡಿಯಲಿದ್ದಾರೆಂದು ನಂಬಿದ್ದೇನೆ. ಗೆಲ್ಲುವ ವಿಶ್ವಾಸವಿದೆ’ ಎಂದು ಹೇಳಿದರು. ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್‌. ಶಿವಯೋಗಿಸ್ವಾಮಿ ಅವರು ಮೋತಿ ವೀರಪ್ಪ ಶಾಲೆಯ ಮತಗಟ್ಟೆಗೆ ಬಂದು ಮತ ಹಾಕಿದರು.

ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಇಲ್ಲಿನ ಪಾತಾಳ ಲಿಂಗೇಶ್ವರ ದೇಗುಲ ಸಮೀಪದ ಮಾತಾ ಜೀಜಾಬಾಯಿ ಶಾಲೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಅಭಿವೃದ್ಧಿಗೆ ಮತ: ಎಸ್ಸೆಸ್ಸೆಂ ವಿಶ್ವಾಸ:

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಐಎಂಎ ಭವನ ಮತಗಟ್ಟೆ ಸಂಖ್ಯೆ 175ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಶನಿವಾರ ಮತ ಚಲಾಯಿಸಿದರು.

ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರೂ ಮತದಾರರ ಪಟ್ಟಿಯಲ್ಲಿ ಉತ್ತರ ಕ್ಷೇತ್ರದಲ್ಲಿ ಹೆಸರಿರುವ ಕಾರಣ ಶಾಸಕ ಶಾಮನೂರು ಶಿವಶಂಕರಪ್ಪ ಐಎಂಎ ಭವನದಲ್ಲಿ ಮತ ಹಾಕಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಎಂದಿನ ಜವಾರಿ ಮಾತಿನ ಶೈಲಿಯಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದರು. ‘ಈ ಬಾರಿ ಗೆಲುವು ಕಾಂಗ್ರೆಸ್‌ನದ್ದು. ಜಿಲ್ಲೆಯ ಎಂಟೂ ಕ್ಷೇತ್ರಗಳನ್ನು ನಾವೇ ಗೆಲ್ಲುತ್ತೇವೆ’ ಎಂದರು.

ಬಳಿಕ ಮಧ್ಯಾಹ್ನ 1ಕ್ಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅವರು ಪತ್ನಿ ಪ್ರಭಾ ಮಲ್ಲಿಕಾರ್ಜುನ ಅವರೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

‘ಜನಪ್ರತಿನಿಧಿಗಳ ಕೆಲಸ ರೊಕ್ಕ ಮಾಡುವುದಾ?’

‘ಜಿಲ್ಲೆಯಲ್ಲಿ ಜನಾಭಿಪ್ರಾಯ ಕಾಂಗ್ರೆಸ್‌ ಪರವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮತದಾರರು ಉತ್ಸಾಹದಿಂದ ಕಾಂಗ್ರೆಸ್‌ ಪರ ಮತ ಚಲಾಯಿಸುತ್ತಿದ್ದಾರೆ. ಅಭಿವೃದ್ಧಿಗೆ ಜನ ಮತ ಚಲಾಯಿಸಿದ್ದಾರೆ ಎಂಬ ನಂಬಿಕೆ ಇದೆ. ಅಧಿಕಾರ ಸಿಕ್ಕರೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಮಾಡುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಹೇಳಿದರು.

‘ವಿರೋಧ ಪಕ್ಷಗಳು ಅಭಿವೃದ್ಧಿಯೇ ಗೆಲುವಿನ ಮಾನದಂಡವಲ್ಲ ಎಂದು ಹೇಳಿದ್ದಾರೆ. ಆದರೆ, ನಾನು ಅಭಿವೃದ್ಧಿ ಮೇಲೆಯೇ ಚುನಾವಣೆ ಎದುರಿಸಿದ್ದೇನೆ. ಜನಪ್ರತಿನಿಧಿಗಳು ಅಭಿವೃದ್ಧಿ ಮರೆತು ರೊಕ್ಕ ಮಾಡಿಕೊಂಡು ಕೂರಬೇಕೇ’ ಎಂದು ಸಚಿವರು ಹರಿಹಾಯ್ದರು.

‘ಬಿಜೆಪಿಯವರು ಸುಳ್ಳುಗಾರರು’

‘ದಾವಣಗೆರೆ ದಕ್ಷಿಣ ಹಾಗೂ ಉತ್ತರ ಕ್ಷೇತ್ರ ಸೇರಿದಂತೆ ಎಂಟೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಖಚಿತ. ಮತದಾರರಿಗೆ ಮುಂಚಿತವಾಗಿ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಶಾಮನೂರು ಶಿವಶಂಕರಪ್ಪ ಮತ ಚಲಾವಣೆ ಬಳಿಕ ಹೇಳಿದರು.

ಕಾಂಗ್ರೆಸ್‌ ಹಣ ಹಂಚುತ್ತಿದೆ ಎಂಬ ಆರೋಪ ಸುಳ್ಳು. ಬಿಜೆಪಿ ಮುಖಂಡರು ಬರೀ ಸುಳ್ಳು ಹೇಳಿಕೊಂಡೇ ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಂತೆ ಜಿಲ್ಲಾ ನಾಯಕರೂ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಶಾಮನೂರು ವಾಗ್ದಾಳಿ ನಡೆಸಿದರು.

‘ಮಾಧ್ಯಮಗಳಲ್ಲಿ ಬಂದಿದ್ದೆಲ್ಲವೂ ನಿಜವಲ್ಲ. ಶಾಮನೂರು ಶಿವಶಂಕರಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವಾಹಿನಿಯೊಂದು ಸುಳ್ಳು ಸುದ್ದಿ ಪ್ರಸಾರ ಮಾಡಿತ್ತು’ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

ಸಂವಿಧಾನ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅದೆಲ್ಲಾ ಮಾಧ್ಯಮಗಳಲ್ಲಿ ಮಹತ್ವ ಪಡೆದ ವಿಚಾರ. ಅದಕ್ಕೆ ಬೆಲೆ ಇಲ್ಲ 
– ಜಿ.ಎಂ. ಸಿದ್ದೇಶ್ವರ, ಬಿಜೆಪಿ ಸಂಸದ

**

ಜಿಲ್ಲೆಯ ಎಲ್ಲೆಡೆ ಬಿಜೆಪಿ ಪರವಾಗಿ ಜನ ಬೆಂಬಲ ವ್ಯಕ್ತವಾಗಿದೆ. ಎಂಟೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ 
– ಯಶವಂತರಾವ್‌ ಜಾಧವ್‌, ಬಿಜೆಪಿ ಅಭ್ಯರ್ಥಿ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ

**

ಹೊಲಗಳಿಗೆ ನೀರು ಹರಿಯದೇ ಬೆಳೆ ಬೆಳೆಯಲಾಗಿಲ್ಲ. ಕ್ಷೇತ್ರದಲ್ಲಿ ನೀರಾವರಿ ಸಮಸ್ಯೆ ಪರಿಹರಿಸಿ, ತೋರಿಸುತ್ತೇವೆ. ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ
– ಎಸ್‌.ಎ. ರವೀಂದ್ರನಾಥ್, ಬಿಜೆಪಿ ಅಭ್ಯರ್ಥಿ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ

**

‘ಯುವಕ, ಕೆಲಸ ಮಾಡುತ್ತಾನೆಂಬ ಭಾವನೆಯನ್ನು ಮತದಾರರು ವ್ಯಕ್ತಪಡಿಸಿದ್ದಾರೆ. ನನಗೆ ಗೆಲುವಿನ ವಿಶ್ವಾಸ ಇದೆ’
– ಕೆ.ಎಸ್‌. ಬಸವರಾಜ್‌, ಕಾಂಗ್ರೆಸ್‌ ಅಭ್ಯರ್ಥಿ, ಮಾಯಕೊಂಡ

**
ಸಂವಿಧಾನ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅದೆಲ್ಲಾ ಮಾಧ್ಯಮಗಳಲ್ಲಿ ಮಹತ್ವ ಪಡೆದ ವಿಚಾರ. ಅದಕ್ಕೆ ಬೆಲೆ ಇಲ್ಲ
– ಜಿ.ಎಂ. ಸಿದ್ದೇಶ್ವರ, ಬಿಜೆಪಿ ಸಂಸದ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.