ADVERTISEMENT

ಕೊಂಡಜ್ಜಿ ರಸ್ತೆ ಅವ್ಯವಸ್ಥೆಗೆ ಪ್ರಯಾಣಿಕರ ಅಸಮಾಧಾನ:ಕಬ್ಬು ಸಾಗಣೆ ಟ್ರ್ಯಾಕ್ಟರ್ ಪಲ್ಟಿ ನಿರಂತರ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 9:20 IST
Last Updated 17 ಅಕ್ಟೋಬರ್ 2012, 9:20 IST

ದಾವಣಗೆರೆ: ಹದಿನೆಂಟು ಕಿ.ಮೀ. ಉದ್ದದ ರಸ್ತೆಯಲ್ಲಿ ದಿನಕ್ಕೆ ಹತ್ತಾರು ಟನ್‌ನಷ್ಟು ಕಬ್ಬು ತುಂಬಿಕೊಂಡು ಸಾಗಿಸುವ ಕನಿಷ್ಠ ಎರಡಾದರೂ ಟ್ರ್ಯಾಕ್ಟರ್‌ಗಳು ಪಲ್ಟಿಯಾಗುತ್ತವೆ. ಚಾಲಕರು ಪ್ರಾಣ ಕೈಯಲ್ಲಿ ಹಿಡಿದೇ ಗಾಡಿ ಚಾಲನೆ ಮಾಡಬೇಕು. ಇದರ ಮಧ್ಯೆ ಹೆಚ್ಚಿನ ಭಾರ ಹೊತ್ತು ಮಿತಿಮೀರಿದ ವೇಗದಲ್ಲಿ ಸಾಗುವ ಮರಳು ತುಂಬಿದ ಲಾರಿಗಳು...

-ಇದು ದಾವಣಗೆರೆಯಿಂದ ಹರಿಹರ ತಾಲ್ಲೂಕಿನ ಕುರುಬರಹಳ್ಳಿವರೆಗಿನ 18 ಕಿ.ಮೀ. ಉದ್ದದ ಕೊಂಡಜ್ಜಿ ರಸ್ತೆಯಲ್ಲಿನ ನರಕಯಾತನೆಯ ಪ್ರಯಾಣದ ಒಂದು ಪರಿಚಯ.ರಸ್ತೆ ಹಾಳಾಗಿ, ಗುಂಡಿಗಳಿಂದ ಕೂಡಿದ್ದರೂ ಲೋಕೋಪಯೋಗಿ ಇಲಾಖೆ ಕಂಡೂ ಕಾಣದಂತೆ ಇದೆ.
 
ಇಲ್ಲಿಯವರೆಗೆ ಗುಣಮಟ್ಟದ ದುರಸ್ತಿಗೆ ಮುಂದಾಗಿಲ್ಲ. ಆಗಾಗ ಡಾಂಬರು ರಸ್ತೆಯ ಗುಂಡಿಗಳಿಗೆ ಮಣ್ಣಿನ ತೇಪೆ! ಹಾಕುವ ಕೆಲಸ ಮಾಡಿದೆ. ಈ ಮಣ್ಣು ಒಂದು ವಾರದಲ್ಲಿ ಕಿತ್ತು ಹೋಗುವ ಜತೆಗೆ, ದೂಳು ಹೆಚ್ಚುವಂತೆ ಮಾಡಿ, ಸಂಚಾರಕ್ಕೆ ತೊಂದರೆಯಾಗಿದೆ ಎಂದು ದೂರುತ್ತಾರೆ ಪ್ರಯಾಣಿಕ ರಮೇಶ್.

ದ್ವಿಪಥ ರಸ್ತೆಗೆ ಒತ್ತಾಯ
ಈ ರಸ್ತೆಯಲ್ಲಿ ನಿತ್ಯ ನೂರಾರು ಮರಳು ತುಂಬಿದ ಲಾರಿಗಳು, ದುಗ್ಗಾವತಿಯ ಶಾಮನೂರು ಷುಗರ್ಸ್‌ಗೆ ನಿತ್ಯ ಕಬ್ಬು ಸಾಗಿಸಲು ನೂರಾರು ಟ್ರ್ಯಾಕ್ಟರ್, ಲಾರಿಗಳು ಗುಂಡಿಗಳ ಮಧ್ಯೆಯೇ ಸಂಚರಿಸುತ್ತಿವೆ. ಅದು ಅಪಾಯಕಾರಿ ಪ್ರಯಾಣ. ಕಾರ್ಖಾನೆಗೆ ರೈತರು ಬೆಳೆದ ಕಬ್ಬು ಬೇಕು ಎಂದು ಬಯಸುವ ಕಾರ್ಖಾನೆ ಮಾಲೀಕರು, ಕಬ್ಬು ಸಾಗಾಟದ ವೇಳೆ ರಸ್ತೆಯ ಅವ್ಯವಸ್ಥೆಯಿಂದ ರೈತರು ಎದುರಿಸುವ, ಅಪಾಯ, ತೊಂದರೆ ಬಗ್ಗೆ ಯೋಚಿಸುತ್ತಿಲ್ಲ ಎಂದು ಆರೋಪಿಸುತ್ತಾರೆ ಕಡ್ಲೆಬಾಳು, ಬಸವಾಪುರ, ಹಾಲೂರು, ಕಕ್ಕರಗೊಳ್ಳದ ರೈತರು.

ಕಳೆದ ವರ್ಷ ರೈತರೇ ಸ್ವಂತ ಖರ್ಚಿನಲ್ಲಿ ರಸ್ತೆಯ ಗುಂಡಿಗಳಿಗೆ ಮಣ್ಣು ಹಾಕಿಕೊಂಡು ಕಬ್ಬು ಸಾಗಿಸಿದ್ದರು. ಪ್ರಸಕ್ತ ವರ್ಷ ರಸ್ತೆ ಮತ್ತಷ್ಟು ಹಾಳಾಗಿದೆ. ಆದರೂ, ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಂಡಿಲ್ಲ. ನಿತ್ಯ ಒಂದೆರೆಡು ಕಬ್ಬು ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗುತ್ತಿವೆ.

ಟ್ರ್ಯಾಕ್ಟರ್‌ಗಳ ಹಬ್‌ಗಳು, ಆಕ್ಸಲ್ ಬ್ಲೇಡ್, ಬೇರಿಂಗ್, ಹುಕ್ಕುಗಳು ತುಂಡಾಗಿ ನಡುರಸ್ತೆಯಲ್ಲಿ ನಿಲ್ಲುತ್ತಿವೆ. ಇತರ ವಾಹನ ಸಂಚಾರಕ್ಕೆ ಎಲ್ಲಿಲ್ಲದ ತೊಂದರೆಯಾಗುತ್ತಿದೆ. ಇದು ರೈತರಿಗೆ ಆರ್ಥಿಕ ತೊಂದರೆಯ ಜತೆಗೆ, ಪ್ರಾಣಕ್ಕೂ ಕುತ್ತು ತರುತ್ತಿದೆ ಎಂದು ಸಮಸ್ಯೆ ತೋಡಿಕೊಳ್ಳುವ ರೈತರು, ಪ್ರಯಾಣಿಕರು, ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಮೇಲ್ದೆರ್ಜೆಗೇರಿಸಿ ಎಂದು ಒತ್ತಾಯಿಸಿದ್ದಾರೆ.

ಕಬ್ಬು ಸಾಗಾಟಕ್ಕೆ ತಡೆ: ರೈತರ ಎಚ್ಚರಿಕೆ
ಜಿಲ್ಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಪಿ. ಹರೀಶ್ ಹಾಗೂ ಜಿಲ್ಲೆಯ ಹಿರಿಯ ಶಾಸಕರು ಹಾಗೂ ಶಾಮನೂರು ಷುಗರ್ಸ್‌ನ ಮಾಲೀಕತ್ವದ ಕುಟುಂಬದವರೇ ಆದ ಶಾಮನೂರು ಶಿವಶಂಕರಪ್ಪ ಅವರು ರಸ್ತೆಯನ್ನು ಮೇಲ್ದರ್ಜೆಗೇರಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿ ಜನರ ಹಿತ ಕಾಯಲು ಮುಂದಾಗಬೇಕು.
 
ಮರಳು ತುಂಬಿದ ಲಾರಿಗಳ ಅತಿ ವೇಗದ ಸಂಚಾರಕ್ಕೆ ಕಡಿವಾಣ ಹಾಕಬೇಕು. ರೈತರ ಪ್ರಾಣಕ್ಕೆ ಕುತ್ತು ತರುವ ರಸ್ತೆಯ ಇದೇ ಪರಿಸ್ಥಿತಿ ಮುಂದುವರಿದರೆ ಕಾರ್ಖಾನೆಗೆ ಕಬ್ಬು ಸಾಗಾಟಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸುತ್ತೇವೆ ಎಂದು ರೈತರು ಹಾಗೂ ಪ್ರಯಾಣಿಕರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.