ಹೊನ್ನಾಳಿ: ಸರ್ಕಾರಗಳು ಜಾರಿಗೊಳಿಸುವ ಯೋಜನೆಗಳ ಪ್ರಯೋಜನ ನೈಜ ಫಲಾನುಭವಿಗಳಿಗೆ ದೊರೆಯ ದಿದ್ದರೆ ಏನಾಗುತ್ತದೆ ಎಂಬುದಕ್ಕೆ ತಾಜಾ ಉದಾಹರಣೆ ಇಲ್ಲಿದೆ.
ತಾಲ್ಲೂಕಿನ ಎಚ್.ಕಡದಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿದರಗಡ್ಡೆ ಗ್ರಾಮದ ಮಹಿಳೆ ಬೆಂಕಿಗೌಡರ ಗಂಗಮ್ಮ ಬಿ.ಜಿ.ಕರಿಬಸಪ್ಪ ಅವರು ವರ್ಷದ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಿಸಿಕೊಂಡರು. ಆದರೆ, ಈವರೆಗೂ ಅವರಿಗೆ ಹಣ ಲಭಿಸಿಲ್ಲ. ಅವರಿಗೆ ಯೋಜನಯಡಿ ₨ 35 ಸಾವಿರದಷ್ಟು ನೀಡಲು ಅವಕಾಶ ಇದೆ. ಆದರೆ, ಆ ಹಣ ನೀಡಲು ಏಕೋ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮನಸ್ಸು ಮಾಡುತ್ತಿಲ್ಲ.
ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಗಂಗಮ್ಮ, ‘ಮೊದಲು ಮನೆಯ ಪಕ್ಕದ ಜಾಗದಲ್ಲಿ ಸಿಮೆಂಟ್ ಬೆಡ್ ಹಾಕಿ ಕೊಟ್ಟಿಗೆ ನಿರ್ಮಿಸಿಕೊಂಡೆ. ಅದರ ಸ್ಥಳ ಪರಿಶೀಲನೆ ನಡೆಸಿದ ಎಚ್.ಕಡದಕಟ್ಟೆ ಗ್ರಾಮ ಪಂಚಾಯ್ತಿ ಅಧಿಕಾರಿಗಳು–ಸಿಬ್ಬಂದಿ, ಈ ರೀತಿ ಕೊಟ್ಟಿಗೆ ನಿರ್ಮಾಣ ಮಾಡಬಾರದು. ಕಡಪಾ ಕಲ್ಲುಗಳನ್ನು ಹಾಕಿಸಿದರೆ ಮಾತ್ರ ಉದ್ಯೋಗ ಖಾತ್ರಿ ಯೋಜನೆಯಡಿ ಹಣ ನೀಡಲು ಅವಕಾಶ ಇದೆ ಎಂದು ಹೇಳಿದರು. ಆಗ ನಾನು ಹಾಲು ಕರೆಯುವ ಎರಡು ಎಮ್ಮೆಗಳನ್ನು ಮಾರಾಟ ಮಾಡಿ ನೆಲಕ್ಕೆ ಕಲ್ಲು ಹಾಸು ಹಾಕಿಸಿದೆ.
ಆದರೆ, ಈವರೆಗೂ ಹಣ ನೀಡಿಲ್ಲ’ ಎನ್ನುವಾಗ ಅವರ ಕಣ್ಣಾಲಿಗಳು ತೇವಗೊಂಡವು.
ಅರ್ಜಿ ಸಲ್ಲಿಸಬೇಕು: ಈ ಬಗ್ಗೆ ಎಚ್.ಕಡದಕಟ್ಟೆ ಗ್ರಾಮ ಪಂಚಾಯ್ತಿ ಪ್ರಭಾರ ಪಿಡಿಒ ರವಿ ಅವರನ್ನು ವಿಚಾರಿಸಿದಾಗ, ‘ನಾನು ಅಧಿಕಾರ ಸ್ವೀಕರಿಸಿ 15 ದಿನ ಆಗಿದೆ. ಬಿದರಗಡ್ಡೆ ಗ್ರಾಮದ ಗಂಗಮ್ಮ ಅವರ ಕೊಟ್ಟಿಗೆ ನಿರ್ಮಾಣ ಕುರಿತು ಮಾಹಿತಿಯಿಲ್ಲ. ಕಾನೂನು ಪ್ರಕಾರವಾಗಿ ಎಲ್ಲವೂ ಸರಿ ಇದ್ದರೆ, ಹಣ ನೀಡಲಾಗುವುದು’ ಎಂದರು.
ಸಣ್ಣ, ಅತಿ ಸಣ್ಣ, ಭೂರಹಿತ ಫಲಾನುಭವಿ ಎಂಬ ಪ್ರಮಾಣಪತ್ರ ಸಲ್ಲಿಸಬೇಕು. ಬಳಿಕ ಎಂಜಿನಿಯರ್ ಮತ್ತು ಪಿಡಿಒ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಆದೇಶ ಜಾರಿಗೊಂಡ ನಂತರ ಕೊಟ್ಟಿಗೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಬೇಕು. ಪೂರ್ಣಗೊಂಡ ಕಾಮಗಾರಿ ಪರಿಶೀಲಿಸಿ ಹಣ ಬಿಡುಗಡೆ ಮಾಡಲಾಗುವುದು ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.