ADVERTISEMENT

ಕ್ಷೇತ್ರಕ್ಕೆ ರೂ800ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 5:25 IST
Last Updated 9 ಅಕ್ಟೋಬರ್ 2012, 5:25 IST

ಹೊನ್ನಾಳಿ: ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ವಿತರಿಸುವ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ತಾಲ್ಲೂಕಿನ ಹುಣಸಘಟ್ಟ ಗ್ರಾಮದಲ್ಲಿ ಸೋಮವಾರ ಸಾಸ್ವೆಹಳ್ಳಿ 1ನೇ ಹೋಬಳಿಮಟ್ಟದ 39ನೇ ಜನಸ್ಪಂದನ ಸಭೆ ಉದ್ಘಾಟಿಸಿ, ಸುವರ್ಣ ಗ್ರಾಮೋದಯ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರಕ್ಕೆ ರೂ  800ಕೋಟಿ ಅನುದಾನ ದೊರಕಿಸಿದ್ದೇನೆ. ಒಂದೇ ಒಂದು ಬಿಪಿಎಲ್ ಪಡಿತರ ಚೀಟಿ ರದ್ದತಿಗೆ ತಾವು ಅವಕಾಶ ನೀಡುವುದಿಲ್ಲ. ಇದು ಸಾಧ್ಯವಾಗದಿದ್ದರೆ, ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಹೇಳಿದ್ದೆ. ಅದರಂತೆ ಬಿಪಿಎಲ್ ಕಾರ್ಡಿಗೆ ಆದಾಯ ಪ್ರಮಾಣಪತ್ರದಿಂದ ವಿನಾಯ್ತಿ ನೀಡಲಾಗಿದೆ. ತಾಲ್ಲೂಕಿನ ಹುಣಸಘಟ್ಟ ಗ್ರಾಮದಲ್ಲಿ ಇದೀಗ 350 ಶಾಶ್ವತ ಕಾರ್ಡ್‌ಗಳನ್ನು ನೀಡಲಾಗುತ್ತಿದೆ ಎಂದರು.

ಎಲ್ಲಾ ಬಡ ವಸತಿರಹಿತರಿಗೆ ಮನೆಗಳು ಲಭಿಸಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಸರ್ಕಾರ ತಾಲ್ಲೂಕಿಗೆ ಈಗಾಗಲೇ 14 ಸಾವಿರ ಮನೆಗಳನ್ನು ಮಂಜೂರು ಮಾಡಿದೆ. ಹೆಚ್ಚುವರಿಯಾಗಿ ಮತ್ತೆ 4 ಸಾವಿರ ಮನೆಗಳನ್ನು ನೀಡಲಿದೆ.  ಅಧಿಕಾರಿಗಳು ನೈಜ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು. ಬರದ ಹಿನ್ನೆಲೆಯಲ್ಲಿ ರೂ 25 ಸಾವಿರದವರೆಗಿನ ಸಾಲ ಮನ್ನಾ ಮಾಡುವ ಮೂಲಕ ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸಿದೆ. ಮುಂದೆಯೂ ಯಾವುದೇ ಪರಿಸ್ಥಿತಿಯಲ್ಲೂ ಸರ್ಕಾರ ರೈತರ ಕೈ ಬಿಡುವುದಿಲ್ಲ ಎಂದು ಭರವಸೆ ನೀಡಿದರು.

ಭಾಗ್ಯಲಕ್ಷ್ಮೀ ಯೋಜನೆ, ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನ ಸೇರಿದಂತೆ ಅನೇಕ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ತನ್ಮೂಲಕ ಬಡವರಿಗೆ ನೆರವಾಗುತ್ತಿದೆ. ಅರ್ಹರು ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು. ದುರ್ಬಳಕೆ ಮಾಡಿಕೊಳ್ಳಬಾರದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಚಿದಾನಂದ ಐಗೂರು, ಸದಸ್ಯೆ ಶೀಲಾ ಗದ್ದಿಗೇಶ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರತ್ನಮ್ಮ ರಾಜಪ್ಪ, ಹುಣಸಘಟ್ಟ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹನುಮಂತಪ್ಪ ಮಾತನಾಡಿದರು.

ಕೆ.ಸಿ. ಮಲ್ಲಿಕಾರ್ಜುನ್, ಕೋಮೇಶ್ವರಪ್ಪ,  ಕೆ.ಎಲ್. ರಂಗನಾಥ್, ಗಣೇಶಪ್ಪ, ಬಸಮ್ಮ ಇದ್ದರು.
ಸಾಸ್ವೆಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ನಾಡಗೀತೆ ಹಾಡಿದರು. ನ್ಯಾಮತಿ ನಾಗರಾಜ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ತಹಶೀಲ್ದಾರ್ ಶೈಲಜಾ ಪ್ರಿಯದರ್ಶಿನಿ ಮಾತನಾಡಿದರು.

ನಾಳೆ ಧರಣಿ
ಟ್ಟಣದ ಎಸ್‌ಬಿಎಂ ಶಾಖೆಯ ವ್ಯವಸ್ಥಾಪಕ, ಲೆಕ್ಕಾಧಿಕಾರಿ, ಕ್ಷೇತ್ರಾಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ. ಸೇವೆಗಳಲ್ಲಿನ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಅ. 10ರಂದು ಬೆಳಿಗ್ಗೆ 10.30ಕ್ಕೆ ಬ್ಯಾಂಕ್ ಎದುರು ಧರಣಿ ನಡೆಸಲಾಗುವುದು ಎಂದು ಜಾಗೃತ ವಿದ್ಯಾರ್ಥಿ ವೇದಿಕೆ ಅಧ್ಯಕ್ಷ ಎಂ. ಗುರುಪಾದಯ್ಯ ಹೇಳಿದರು. 

ಬ್ಯಾಂಕ್‌ಗೆ ಸಾರ್ವಜನಿಕರನ್ನು ಅಲೆದಾಡಿಸುವುದು ಸೇರಿದಂತೆ ಗ್ರಾಹಕರಿಗೆ ಅನೇಕ ರೀತಿಯ ತೊಂದರೆ ನೀಡಲಾಗುತ್ತಿದೆ. ಇದನ್ನು ಪ್ರತಿಭಟಿಸಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ತಿಂಗಳಿಗೆ 25ಸಾವಿರ ವೇತನ ಪಡೆಯುವ ನೌಕರರಿಗೆ ಮಾತ್ರ ಬ್ಯಾಂಕ್‌ನಲ್ಲಿ ಸಾಲ ನೀಡುವುದಾಗಿ ಅಧಿಕಾರಿಗಳು ತಿಳಿಸುತ್ತಾರೆ. ಹಾಗಾದರೆ, ಇದಕ್ಕಿಂತ ಕಡಿಮೆ ವೇತನ ಪಡೆಯುವ ನೌಕರರು ಶೇ 80ರಷ್ಟಿದ್ದಾರೆ. ಇವರು ಎಲ್ಲಿ ಸಾಲ ಪಡೆಯಬೇಕು ಎಂದು ಪ್ರಶ್ನಿಸಿದರು. ಅಜಿತ್‌ಕುಮಾರ್, ಬಾಷಾ, ಜಬೀವುಲ್ಲಾ, ಫಾಜಿಲ್ ಅಹಮ್ಮದ್, ನರಸಿಂಹಪ್ಪ, ಕಲ್ಕೇರಿ ಚನ್ನೇಶ್, ಅಶೋಕ್, ಅರುಣ್, ಸೊರಟೂರು ಹನುಮಂತಪ್ಪ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.