ADVERTISEMENT

ಗಟ್ಟಿಯಾಗೇ ಉಳಿದ ಜಾತಿಯತೆ: ಕಳವಳ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 9:10 IST
Last Updated 15 ಏಪ್ರಿಲ್ 2012, 9:10 IST

ದಾವಣಗೆರೆ: ಸಂವಿಧಾನ ಜಾರಿಗೆ ಬಂದು ಆರು ದಶಕ ಕಳೆದರೂ ಜಾತಿಯತೆ ಹೆಚ್ಚಾಗುತ್ತಿರುವುದು ಆತಂಕದ ವಿಚಾರ ಎಂದು ಜಿಲ್ಲಾ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಗಳ ವಸತಿಹೀನರ ಸಂಘದ ಅಧ್ಯಕ್ಷ ಸಿ. ಅಂಜಿನಪ್ಪ ಕಡತಿ ಕಳವಳ ವ್ಯಕ್ತಪಡಿಸಿದರು.

 ಜಿಲ್ಲಾ ಪರಿಶಿಷ್ಟ ಜಾತಿ- ಪಂಗಡಗಳ ವಸತಿಹೀನರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಂಧತ್ವ ನಿಯಂತ್ರಣ ಸಮಿತಿ ವತಿಯಿಂದ ಬಾಷಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಉಚಿತ ನೇತ್ರ ಪರೀಕ್ಷೆ ಮತ್ತು ಉಚಿತ ಮಸೂರ ಅಳವಡಿಕೆ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆರೋಗ್ಯ ಶಿಬಿರಗಳಲ್ಲೂ ಜಾತಿ ನುಸುಳುತ್ತದೆ. ಸಮಾಜದಲ್ಲಿ ಜಾತಿಯತೆ ಹೋಗಲಾಡಿಸಲು ಏನೆಲ್ಲಾ ಪ್ರಯತ್ನಿಸಿದರೂ ಅದು ಇನ್ನಷ್ಟು ಹೆಚ್ಚುತ್ತಿದೆ. ಜನರ ಮನೋಭಾವಗಳು ಬದಲಾಗದ ಹೊರತು ಸಮಾನತೆಯ ಸಮಾಜ ಅಸಾಧ್ಯ ಎಂದು ಪ್ರತಿಪಾದಿಸಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಟಿ. ದಾಸಕರಿಯಪ್ಪ ಮಾತನಾಡಿ, ಪರಿಶಿಷ್ಟರು ನೋವಾಗಿದೆ ಎಂದು ಮೂಲೆ ಸೇರಬಾರದು. ಶೋಷಣೆಯ ವಿರುದ್ಧ ಗಟ್ಟಿಧ್ವನಿ ಎತ್ತಬೇಕು. ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಕನ್ನಡಪರ ಹೋರಾಟಗಾರ ಬಂಕಾಪುರ ಚನ್ನಬಸಪ್ಪ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಜನರಿಗೆ ಆರೋಗ್ಯ ಶಿಬಿರಗಳು ವರದಾನವಾಗಿದೆ. ಇಂತಹ ಶಿಬಿರಗಳ ಸದುಪಯೋಗ ಆಗಬೇಕು ಎಂದು ಸಲಹೆ ನೀಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಗುಡ್ಡಪ್ಪ 8 ವರ್ಷಗಳಿಂದ ಸಂಘ ನಡೆಸುತ್ತಿರುವ ಆರೋಗ್ಯ ಶಿಬಿರಗಳ ಮಾಹಿತಿ ನೀಡಿದರು.ಮಲೇಷಿಯಾ ಐಸಿಟಿ ಕಂಪೆನಿಯ ಮುಖ್ಯಸ್ಥ ವೈ.ಕೆ. ಚೆಂಗ್ ಕಾರ್ಯಕ್ರಮ ಉದ್ಘಾಟಿಸಿದರು. ಪಾಲಿಕೆ ಸದಸ್ಯರಾದ ಎಸ್. ನಿಂಗಪ್ಪ, ಜಹೀದಾಬಿ ಎಕ್ಬಾಲ್‌ಸಾಬ್, ಡಾ.ಮಹಮದ್  ಸಲಾವುದ್ದೀನ್, ಕುಕ್ಕುವಾಡ  ನಿಂಗರಾಜ್, ದೇವರಬೆಳಕೆರೆ ಹೊನ್ನಮ್ಮ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.