ADVERTISEMENT

ಗಡಿ ಭಾಗದ ಆಸ್ಪತ್ರೆಗೆ ಔಷಧಿ ಪೂರೈಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 8:55 IST
Last Updated 8 ಮಾರ್ಚ್ 2012, 8:55 IST

ಚಳ್ಳಕೆರೆ: ತಾಲ್ಲೂಕಿನ ಪರಶುರಾಂಪುರ, ಜಾಜೂರು ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಯಾವ ಕಾಯಿಲೆಗಳಿಗೂ ಔಷಧಿ ವಿತರಿಸುತ್ತಿಲ್ಲ. ಬದಲಾಗಿ ಔಷಧಿ ಅಂಗಡಿಗೆ ಚೀಟಿ ಬರೆದು ಕೊಡುತ್ತಾರೆ. ಅದ್ದರಿಂದ, ಬಡರೋಗಿಗಳಿಗೆ ಅನುಕೂಲ ಆಗುವಂತೆ ಔಷಧಿ ವಿತರಣೆ ಆಗಬೇಕು ಎಂದು ಜಾಜೂರು ಮತ್ತು ಸಿದ್ದೇಶ್ವರನ ದುರ್ಗ ತಾಲ್ಲೂಕು ಪಂಚಾಯ್ತಿ ಸದಸ್ಯರು ತಾಲ್ಲೂಕು ಆರೋಗ್ಯಾಧಿಕಾರಿಗೆ ಒತ್ತಾಯಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಆರೋಗ್ಯ ಇಲಾಖೆ ಪ್ರಗತಿ ವರದಿ ವಿವರಿಸುತ್ತಿದ್ದ ವೇಳೆ ಸದಸ್ಯರು ಈ ವಿಷಯದ ಕುರಿತು ಸಭೆಯ ಗಮನ ಸೆಳೆದರು.
ಆಂಧ್ರದ ಗಡಿಭಾಗದ ಆಸ್ಪತ್ರೆಗಳಿಗೆ ಸಾವಿರಾರು ಜನರು ಬಂದು ಹೋಗುತ್ತಿದ್ದು, ಔಷಧಿ, ವೈದ್ಯರು ಇಲ್ಲದೇ ಸಾಕಷ್ಟು ಸಮಸ್ಯೆ ಆಗುತ್ತಿದೆ.

ಈಗಾಗಲೇ ಬೇಸಿಗೆ ಸಮೀಪಿಸುತ್ತಿರುವ ಇಂತಹ ಸಮಯದಲ್ಲಿ ಸಾಮಾನ್ಯ ಜ್ವರ ಬಂದರೂ ಆಸ್ಪತ್ರೆಗಳಲ್ಲಿ ಔಷಧಿಗಳು ಲಭ್ಯವಿಲ್ಲದಿದ್ದರೆ ಹೇಗೆ ಎಂದು ಸದಸ್ಯ ನರಸಿಂಹಯ್ಯ ಪ್ರಶ್ನಿಸಿದರು.

ಇದಕ್ಕೆ ಆರೋಗ್ಯ ಅಧಿಕಾರಿ ಡಾ.ಸಿ.ಎಲ್. ಪಾಲಾಕ್ಷ ಪ್ರತಿಕ್ರಿಯಿಸಿ, ಔಷಧಿ ಕೊರತೆ ಕಂಡುಬಂದಾಗ ಬಳ್ಳಾರಿಯಿಂದ ತರಿಸಿಕೊಳ್ಳುವಂತೆ ಆಯಾ ಆಸ್ಪತ್ರೆಯ ವೈದ್ಯರಿಗೆ ಸೂಚಿಸಲಾಗಿದೆ. ಆಸ್ಪತ್ರೆಗಳಲ್ಲಿ ಲಭ್ಯವಿರುವ ಔಷಧಿಯನ್ನು ಸಿಬ್ಬಂದಿ ವಿತರಿಸುತ್ತಿದ್ದಾರೆ. ಕೊರತೆ ಕಂಡು ಬಂದಾಗ ಒಂದೆರೆಡು ದಿನಗಳು ಮಾತ್ರ ತೊಂದರೆ ಆಗಬಹುದು ಎಂದರು.

ಕಾಲುವೇಹಳ್ಳಿಯಲ್ಲಿ ಶಾಲಾ ಕಟ್ಟಡ ಸಂಪೂರ್ಣ ಮುಗಿಯದಿದ್ದರೂ, ಬಿಡುಗಡೆಯಾದ ಹಣ ಮಾತ್ರ ಡ್ರಾ ಆಗಿದೆ. ಇದಕ್ಕೆ ಶಿಕ್ಷಣ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎಂದು ಚಿತ್ರನಾಯಕನ ಹಳ್ಳಿ ಕ್ಷೇತ್ರದ ಸದಸ್ಯ ಸಿ.ಟಿ. ಶ್ರೀನಿವಾಸ್ ಪ್ರಶ್ನಿಸಿದರು.

ಈ ಕುರಿತು ಪರಿಶೀಲನೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಆರ್‌ಸಿ ಸುರೇಶ್ ಸಭೆಗೆ ತಿಳಿಸಿದರು.

ಅಧ್ಯಕ್ಷೆ ಎಸ್. ಹೇಮಲತಾ, ಉಪಾಧ್ಯಕ್ಷ ಜೆ. ತಿಪ್ಪೇಶ್‌ಕುಮಾರ್, ಇಒ ತಿಪ್ಪೇಸ್ವಾಮಿ ಹಾಗೂ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.