ADVERTISEMENT

ಗಾಳಿ-ಸೌರ ವ್ಯವಸ್ಥೆಯಲ್ಲಿ ವಿದ್ಯುತ್ ಉತ್ಪಾದನೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2012, 5:45 IST
Last Updated 23 ಜೂನ್ 2012, 5:45 IST

ದಾವಣಗೆರೆ: ನಗರದ ಜಿ.ಎಂ. ಹಾಲಮ್ಮ ತಾಂತ್ರಿಕ ಮಹಾವಿದ್ಯಾಲಯದ ಯಾಂತ್ರಿಕ ವಿಭಾಗದ 5ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳು ಸಣ್ಣ ಹಾಗೂ ಅತಿ ಸಣ್ಣ ಬೇಡಿಕೆಗಳಿಗೆ ಅನುಗುಣವಾಗಿ ರೂಪ್‌ಟಾಪ್ ಹೈಬ್ರಿಡ್ ವಿದ್ಯುತ್ ಸಿಸ್ಟಂ (ಗಾಳಿ-ಸೌರ ವ್ಯವಸ್ಥೆ) ಅಭಿವೃದ್ಧಿಪಡಿಸಿದ್ದಾರೆ.

ಈ ಘಟಕವು, ಲಂಬವಾಗಿರುವ ರೇಖಾ ಗಾಳಿ ಯಂತ್ರ ಮತ್ತು ಸೌರ ಫೋಟೊ ವೊಲ್ಟಾಯಿಕ್ (ಪಿ.ವಿ.- ಸೌರಶಕ್ತಿಯನ್ನು ಗ್ರಹಿಸುವ ಸಾಧನ) ಫಲಕ ಹೊಂದಿರುತ್ತದೆ. ಇದರಿಂದ 1-3 ಯೂನಿಟ್‌ನಷ್ಟು ವಿದ್ಯುತ್ ಉತ್ಪಾದಿಸಬಹುದು.

ಗಾಳಿಯಂತ್ರದಿಂದ 1ರಿಂದ 2 ಯೂನಿಟ್‌ನಷ್ಟು ವಿದ್ಯುತ್ ಉತ್ಪಾದಿಸಬಹುದು. ಇದಕ್ಕೆ ಕನಿಷ್ಠ ವಾಯುವಿನ ವೇಗ 3.5 ಮೀಟರ್/ಸೆಕೆಂಡ್‌ಗಳಷ್ಟು ಬೇಕಾಗುತ್ತದೆ. ಸಾಮಾನ್ಯವಾಗಿ ಗಾಳಿಯ ಸರಾಸರಿ ವೇಗ 3ರಿಂದ 5 ಮೀಟರ್/ಸೆಕೆಂಡ್‌ಗಳು ಆಗಿರುತ್ತದೆ. ಸೌರ ಕಿರಣಗಳು ದಿನಕ್ಕೆ ಕನಿಷ್ಠ 3ರಿಂದ 4ಗಂಟೆಗಳ ಕಾಲ ಪಿ.ವಿ. ಫಲಕದ ಮೇಲೆ ಬಿದ್ದರೆ ಇದರಿಂದಲೂ ಸಹ 2ರಿಂದ 3 ಯೂನಿಟ್‌ಗಳಷ್ಟು ವಿದ್ಯುತ್ ಉತ್ಪಾದಿಸಬಹುದು.
ಈ ಘಟಕವನ್ನು 25 ಅಡಿ ಕನಿಷ್ಠ ಎತ್ತರದ ಕಟ್ಟಡಗಳ ಮೇಲ್ಛಾವಣಿ ಮೇಲೆ ಅಳವಡಿಸಲು ವಿನ್ಯಾಸಗೊಳಿಸಲಾಗಿದೆ.

ಇದರಿಂದ ದೊರೆಯುವ ವಿದ್ಯುತ್ ಅನ್ನು ಸಣ್ಣ ಹಾಗೂ ಅತಿ ಸಣ್ಣ ಗೃಹಬಳಕೆಯಲ್ಲಿ ಹಾಗೂ ಬೀದಿದೀಪಗಳಿಗೆ ಬಳಸಬಹುದಾಗಿದೆ. ಸರಾಸರಿ 0.5ರಿಂದ 1 ಟನ್‌ಗಳಷ್ಟು ವಾರ್ಷಿಕ ಗ್ರೀನ್ ಹೌಸ್ ಗ್ಯಾಸಸ್ (ಹಸಿರು ಮನೆ ಅನಿಲ) ಕಡಿತಗೊಳಿಸಬಹುದು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಈ ಘಟಕವನ್ನು ಸಹಾಯಕ ಪ್ರಾಧ್ಯಾಪಕ ಡಿ.ಜಿ. ರಾಜಕುಮಾರ್ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.