ಹರಪನಹಳ್ಳಿ: ಹೊಸ ಪಡಿತರ ಚೀಟಿ ಪಡೆಯುವ ಹಾಗೂ ಹಾಲಿ ಪಡಿತರ ಚೀಟಿಯನ್ನು ನವೀಕರಿಸಿಕೊಳ್ಳುವ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅನುಷ್ಠಾನಕ್ಕಾಗಿ ಆರಂಭಿಸಿರುವ ಆನ್‌ಲೈನ್ ಅರ್ಜಿ ಸಲ್ಲಿಕೆಯ ವಿನೂತನ ಯೋಜನೆ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿ ಆಕಾಂಕ್ಷಿತ ಕುಟುಂಬಗಳ ಮೇಲೆ ತಣ್ಣೀರು ಎರಚಿದೆ.
ಪಡಿತರ ಚೀಟಿ ವಿತರಣೆಯಲ್ಲಿನ ಅವ್ಯವಹಾರ ನಿಯಂತ್ರಿಸುವ ಹಿನ್ನೆಲೆಯಲ್ಲಿ ಇಲಾಖೆ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿದೆ. ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ ಪಟ್ಟಣ ಪ್ರದೇಶದ ಆಕಾಂಕ್ಷಿಗಳಿಗೆ ಇಲಾಖೆ ಅನುಮತಿ ನೀಡಿದ ಫ್ರಾಂಚೈಸಿ ಕೇಂದ್ರ ಹಾಗೂ ಗ್ರಾಮೀಣ ಪ್ರದೇಶದ ಆಕಾಂಕ್ಷಿತರಿಗೆ ಆಯ ಗ್ರಾಮ ಪಂಚಾಯ್ತಿ ಕೇಂದ್ರದಲ್ಲಿ ಪಡಿತರ ಚೀಟಿ ನೋಂದಣಿ ಹಾಗೂ ನವೀಕೃತ ಆನ್‌ಲೈನ್ ಅರ್ಜಿ ಸಲ್ಲಿಸಲು ಇಲಾಖೆ ಸುತ್ತೋಲೆ ಹೊರಡಿಸಿದೆ.
ತಾಲ್ಲೂಕಿನ 35ಗ್ರಾಮ ಪಂಚಾಯ್ತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್‌ಗಳು ಪಂಚಾಯ್ತಿಯಲ್ಲಿ ನಿತ್ಯದ ಕಾರ್ಯಭಾರ ಒತ್ತಡದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅನುಷ್ಠಾನಗೊಳಿಸಲು ಮುಂದಾಗಿರುವ ಆನ್‌ಲೈನ್ ಅರ್ಜಿ ಸಲ್ಲಿಕೆಯಿಂದ ಪ್ರಕ್ರಿಯೆಯಿಂದ ದೂರ ಸರಿದಿದ್ದಾರೆ.
ವಿಧಾನಸಭಾ ಚುನಾವಣೆ ನೀತಿಸಂಹಿತೆ ಮುಕ್ತಾಯವಾದ ತಕ್ಷಣ ಪಟ್ಟಣದ ನಿವಾಸಿಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಗ್ರಾಮ ಪಂಚಾಯ್ತಿಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭ ಆಗದಿರುವ ಹಿನ್ನೆಲೆಯಲ್ಲಿ ಹಾಗೂ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನದ ಪರಿಣಾಮ ಗ್ರಾಮೀಣ ಪ್ರದೇಶದ ಪಡಿತರ ಚೀಟಿ ಆಕಾಂಕ್ಷಿತ ಬಡ ಹಾಗೂ ನಿರ್ಗತಿಕ ಕುಟುಂಬಗಳು ಮಾತ್ರ ಪಡಿತರ ಚೀಟಿ ಸೌಲಭ್ಯದಿಂದ ವಂಚನೆಗೆ ಒಳಗಾಗಿದ್ದಾರೆ.
ತಾಲ್ಲೂಕಿನ 34ಗ್ರಾಮ ಪಂಚಾಯ್ತಿಗಳಲ್ಲಿ ಕಂಪ್ಯೂಟರ್ ಇವೆ. ಆದರೆ, ಕೆಲ ಪಂಚಾಯ್ತಿಗಳಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅಗತ್ಯವಾದ ಇಂಟರ್‌ನೆಟ್ ಸೌಲಭ್ಯ ಇಲ್ಲ. ಇದ್ದರೂ, ಸಕಾಲ, ನರೇಗಾ, ಶೌಚಾಲಯ, ವರ್ಗ 1ರ ಶಾಸನಬದ್ಧ ಅನುದಾನದ ದಿನವಹಿ ಮಾಹಿತಿ, ಕಂದಾಯ, ಗ್ರಾಮಸ್ವರಾಜ್, ವಸತಿ ಸೇರಿದಂತೆ ಪಂಚಾಯ್ತಿ ವ್ಯಾಪ್ತಿಯ 11ವಿವಿಧ ಸೇವೆಗಳ ದೈನಂದಿನ ಮಾಹಿತಿಯನ್ನು ಕಂಪ್ಯೂಟರ್ ಆಪರೇಟರ್‌ಗಳು ನಿತ್ಯವೂ ಅಪ್‌ಲೋಡ್ ಮಾಡಬೇಕಾಗಿದೆ.
ಇದರಲ್ಲಿಯೇ ಇಡೀ ದಿನ ಮುಗಿದುಹೋಗುತ್ತಿದೆ. ಇನ್ನೂ ಆಹಾರ ಇಲಾಖೆಯ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಹೇಗೆ ನಿರ್ವಹಿಸಬೇಕು. ಒಂದು ವೇಳೆ ಅದಕ್ಕೆ ಕೈಹಾಕಿದರೆ, ಹಳ್ಳಿಗಳಲ್ಲಿ ವಿದ್ಯುತ್ ಹಾಗೂ ಇಂಟರ್‌ನೆಟ್ ಸಮಸ್ಯೆ, ಸ್ಕ್ಯಾನರ್ ಹಾಗೂ ಯುಪಿಎಸ್ ಸರಿಯಾಗಿ ಕಾರ್ಯನಿರ್ವಹಿಸದಿರುವುದು ಹಾಗೂ ಯೋಜನೆ ಅನುಷ್ಠಾನದಲ್ಲಿನ ಕೆಲ ಕ್ಲಿಷ್ಟ ನಿಯಮಾವಳಿ ಆಪರೇಟರ್‌ಗಳಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಆಹಾರ ಇಲಾಖೆಯ ಪ್ರಕ್ರಿಯೆಯಿಂದ ದೂರ ಉಳಿದಿದ್ದೇವೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಕಂಪ್ಯೂಟರ್ ಆಪರೇಟರ್.
ಇನ್ನೂ ಪಟ್ಟಣದ ಪ್ರದೇಶದ ಪಡಿತರ ಚೀಟಿ ನೋಂದಣಿಗಾಗಿ 2ಫ್ರಾಂಚೈಸಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಆದರೆ, 18ಸಾವಿರಕ್ಕೂ ಅಧಿಕ ಕುಟುಂಬ ಹೊಂದಿರುವ ಪಟ್ಟಣಕ್ಕೆ ಕೇವಲ 2ಫ್ರಾಂಚೈಸಿ ಆರಂಭಿಸಲಾಗಿದೆ. ಹೀಗಾಗಿ ಎರಡು ಕೇಂದ್ರಗಳ ಮುಂದೆ ಬೆಳ್ಳಂಬೆಳಿಗ್ಗೆ 6ಕ್ಕೆ ಪಡಿತರ ಚೀಟಿ ಆಕಾಂಕ್ಷಿತರು ನೋಂದಣಿಗೆ ಕ್ಯೂ ನಿಲ್ಲುತ್ತಾರೆ. ಹೆಚ್ಚುತ್ತಿರುವ ಜನಸಂಖ್ಯೆ ನೋಡಿದ ಫ್ರಾಂಚೈಸಿಗಳು ಟೋಕನ್ ಪದ್ಧತಿ ಮೂಲಕ ದಿನಕ್ಕೆ 25ಟೋಕನ್ ವಿತರಿಸುತ್ತಾರೆ.
ಈ ಟೋಕನ್ ಪಡೆಯಲೆಂದೆ ಜನ ಮುಗಿಬೀಳುತ್ತಾರೆ. ಹೀಗಾಗಿ ಇನ್ನೂ ಕನಿಷ್ಠ 3ಫ್ರಾಂಚೈಸಿಗಳ ಅಗತ್ಯ ಇದೆ ಎನ್ನುತ್ತಾರೆ ಕುರುಬರಗೇರಿ ಹನುಮಂತಪ್ಪ. ಗ್ರಾಮ ಪಂಚಾಯ್ತಿ ಕಾರ್ಯಭಾರ ಲೆಕ್ಕಿಸದೇ ತರಾತುರಿಯಲ್ಲಿ ಸುತ್ತೋಲೆ ಹೊರಡಿಸಿರುವ ಇಲಾಖೆ ಬಡ ಹಾಗೂ ನಿರ್ಗತಿಕ ಕುಟುಂಬಗಳ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಲು ಮುಂದಾಗಿದೆ.
ನಿಗದಿತ ಸಮಯದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಸಿಗದಿದ್ದರೇ ಎಲ್ಲಿ ಪಡಿತರ ಚೀಟಿ ದೊರಕುವುದಿಲ್ಲವೋ ಎಂಬ ಆತಂಕ ಗ್ರಾಮೀಣ ಪ್ರದೇಶದ ಕುಟುಂಬಗಳಲ್ಲಿ ಮನೆಮಾಡಿದೆ. ಈಗಲಾದರೂ ಸಂಬಂಧಿಸಿದ ಇಲಾಖೆ ಗ್ರಾಮೀಣ ಜನರಿಗೆ ವಂಚಿಸುವ ಬದಲು ಪರ್ಯಾಯ ವ್ಯವಸ್ಥೆ ಮಾಡಲು ಮುಂದಾಗಬೇಕಿದೆ ಎಂದು ಸಾರ್ವಜನಿಕರ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.