ADVERTISEMENT

ಚನ್ನಗಿರಿ: ಬೆಳಕಿನ ಹಬ್ಬಆಚರಣೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 9:05 IST
Last Updated 28 ಅಕ್ಟೋಬರ್ 2011, 9:05 IST

ಚನ್ನಗಿರಿ: ತಾಲ್ಲೂಕಿನಾದ್ಯಂತ ಮೂರು ದಿನಗಳ ಕಾಲ ಅತ್ಯಂತ ಸಂಭ್ರಮ, ಸಡಗರದಿಂದ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲಾಯಿತು.

ಮಂಗಳವಾರ ನರಕ ಚತುದರ್ಶಿ ಆಚರಿಸಿದರೆ, ಬುಧವಾರ ಅಮಾವಾಸ್ಯೆ ದಿನ ವೈಭವದಿಂದ ಲಕ್ಷ್ಮೀಪೂಜೆಯನ್ನು ನೆರವೇರಿಸಲಾಯಿತು.

ಬಲಿಪಾಡ್ಯಮಿ ದಿನವಾದ ಗುರುವಾರ ಎಲ್ಲರ ಮನೆಗಳಲ್ಲೂ ಬೆಳಗಿನಿಂದಲೇ ಸಂಭ್ರಮ. ಬೆಳಿಗ್ಗೆ ಎದ್ದು ಎಣ್ಣೆ ಸ್ನಾನ ಮುಗಿಸಿ ಹೊಸ ಬಟ್ಟೆಗಳನ್ನು ಧರಿಸಿ ಹಬ್ಬದ ಆಚರಣೆಗೆ ಸಿದ್ದಗೊಳ್ಳಲಾಯಿತು.

ಮಧ್ಯಾಹ್ನದ ನಂತರ ಮನೆಗಳ ಮುಂದೆ ಹಟ್ಟಿ ಹಾಕುವ ಮೂಲಕ ವಿವಿಧ ಬಣ್ಣದ ಹೂವು, ಕವಚಿ ಹುಲ್ಲಿನ ಕಟ್ಟು ಹಾಗೂ ಸಗಣಿಯಿಂದ ಮಾಡಿದ ಬೆನಕನನ್ನು ಇಟ್ಟು ಪೂಜೆ ಸಲ್ಲಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು.

ನಂತರ ಮನೆಗಳ ಮುಂದೆ ಸಾಲು ಸಾಲು ಹಣತೆಗಳನ್ನು ಹಚ್ಚಿಟ್ಟು, ಅದರ ಬೆಳಕಿನಲ್ಲಿ ಹಬ್ಬದ ಸಂಭ್ರಮವನ್ನು ಆಚರಿಸಲಾಯಿತು. ಬೆಳಗುವ ಹಣತೆಗಳ ಬೆಳಕಲ್ಲಿ ಮನೆ, ಮನಗಳ ಕತ್ತಲನ್ನು ಓಡಿಸಿ ಎಲ್ಲೆಡೆ ಬೆಳಕು ಮೂಡಿಸಿ ಈ ಹಬ್ಬವನ್ನು ಸಂಭ್ರಮಿಸಲಾಯಿತು. ಸಂಜೆ ಬಣ್ಣ ಬಣ್ಣದ ಪಟಾಕಿಗಳನ್ನು ಸಿಡಿಸಿ ಹಬ್ಬಕ್ಕೆ ಕಳೆ ನೀಡಲಾಯಿತು.

ರಾತ್ರಿ ಹಿರಿಯರ ಪೂಜೆ ಮಾಡಿ ಹೋಳಿಗೆ ಮುಂತಾದ ಭಕ್ಷ್ಯ ಭೋಜನಗಳನ್ನು ಸೇವಿಸಿ ಕಿರಿಯರು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳಲಾಯಿತು. ಕಳೆದ ಎರಡು ದಿನಗಳಿಂದ ಸಂಜೆಯ ಹೊತ್ತು ಬೀಳುತ್ತಿರುವ ಮಳೆ ಒಂದಿಷ್ಟು ಹಬ್ಬದ ಅಬ್ಬರವನ್ನು ಅಡಗಿಸಿತ್ತು.

 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.