ADVERTISEMENT

ಚರಂಡಿ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 9:20 IST
Last Updated 10 ಫೆಬ್ರುವರಿ 2012, 9:20 IST

ಹೊನ್ನಾಳಿ:  ತಾಲ್ಲೂಕಿನ ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ರಸ್ತೆ ವಿಸ್ತರಣೆಗೆ ಮನೆಗಳನ್ನು ಭಾಗಶಃ ಒಡೆದು ಹಾಕಿರುವುದರಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಂ.ಆರ್. ಮಹೇಶ್ ಹೇಳಿದರು.

ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ರಸ್ತೆ ವಿಸ್ತರಣೆಗೆ ಮನೆಗಳನ್ನು ಭಾಗಶಃ ಒಡೆದುಹಾಕಿದ ನಂತರ ಚರಂಡಿ ನಿರ್ಮಾಣ ಕಾಮಗಾರಿ ನಡೆಸದಿರುವ ಕ್ರಮ ಖಂಡಿಸಿ ಈಚೆಗೆ ಗ್ರಾಮಸ್ಥರೊಂದಿಗೆ ರಸ್ತೆತಡೆ ನಡೆಸಿ ಮಾತನಾಡಿದರು.
ಮನೆಗಳನ್ನು ಭಾಗಶಃ ಒಡೆದುಹಾಕಿ ಈಗಾಗಲೇ ಮೂರು ತಿಂಗಳು ಕಳೆದಿದ್ದರೂ ಗ್ರಾಮದಲ್ಲಿ ಚರಂಡಿ ನಿರ್ಮಿಸಿಲ್ಲ.
 
ಇದರಿಂದಾಗಿ ಕುಡಿಯುವ ನೀರಿನ ಪೈಪ್‌ನಲ್ಲಿ ಚರಂಡಿ ನೀರು ಬೆರಕೆಯಾಗಿ ಪೂರೈಕೆಯಾಗುತ್ತಿದೆ. ಇದೇ ನೀರನ್ನು ಸೇವಿಸುವುದರಿಂದ ಆರೋಗ್ಯ ಹದಗೆಡುತ್ತಿದೆ. ಗ್ರಾಮದ ಮೂರ‌್ನಾಲ್ಕು ಮಂದಿ ವಾಂತಿ-ಭೇದಿಯಿಂದ ಆಸ್ಪತ್ರೆ ಸೇರಿದ್ದಾರೆ ಎಂದು ದೂರಿದರು.

ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಮಾತ್ರ ರಸ್ತೆ ವಿಸ್ತರಣೆಗೆ ಮುಂದಾಗಿರುವ ಕ್ಷೇತ್ರದ ಶಾಸಕರೂ ಆಗಿರುವ ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಪಕ್ಕದ ಬೆಳಗುತ್ತಿ ಗ್ರಾಮದಲ್ಲಿ ರಸ್ತೆ ವಿಸ್ತರಣೆ ಮಾಡಲು ಏಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿದರು.

ತೀರ್ಥರಾಮೇಶ್ವರ ಕ್ಷೇತ್ರಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ರಸ್ತೆ ವಿಸ್ತರಣೆ ಅನಿವಾರ್ಯ ಎನ್ನುವ ಸಚಿವರು ಬೆಳಗುತ್ತಿಯಲ್ಲಿ ಏಕೆ ರಸ್ತೆ ವಿಸ್ತರಣೆ ಮಾಡುತ್ತಿಲ್ಲ. ಈ ಪಕ್ಷಪಾತದ ವರ್ತನೆ ಗ್ರಾಮಸ್ಥರನ್ನು ಕೆರಳಿಸಿದೆ ಎಂದರು.

ಗ್ರಾಮದ ಉಮೇಶ್ ಮಾತನಾಡಿ, ಗ್ರಾಮದ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಯನ್ನು ಪೂರ್ತಿಯಾಗಿ ಒಡೆದಿಲ್ಲ. ತಾಲ್ಲೂಕು ಆಡಳಿತ ಗುರುತು ಮಾಡಿರುವುದಕ್ಕಿಂತ ಕಡಿಮೆ ವಿಸ್ತೀರ್ಣದವರೆಗೆ ಒಡೆಯಲಾಗಿದೆ. ಈ ಬಗ್ಗೆ  ರೇಣುಕಾಚಾರ್ಯ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಸ್ತೆ ವಿಸ್ತರಣೆಗೆ ಮುಂದಾಗಿರುವುದಾಗಿ ಹೇಳುವ ಸಚಿವರ ಹೇಳಿಕೆ ಸತ್ಯಕ್ಕೆ ದೂರವಾದುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯ್ತಿ ವೈಫಲ್ಯ: ಜನರಿಗೆ ಮೂಲ ಸೌಲಭ್ಯ ಒದಗಿಸಲು ಶ್ರಮಿಸಬೇಕಾದ ಗ್ರಾ.ಪಂ. ಸಂಪೂರ್ಣ ವಿಫಲವಾಗಿದೆ. ರಸ್ತೆ ವಿಸ್ತರಣೆಗೆ ಮನೆಗಳನ್ನು ತೆರವುಗೊಳಿಸಿ ಮೂರು ತಿಂಗಳಾದರೂ ಚರಂಡಿ-ಉತ್ತಮ ರಸ್ತೆ ನಿರ್ಮಿಸಲು ಮುಂದಾಗಿಲ್ಲ.
 
ವಿಶೇಷವಾಗಿ ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರಣವಾಗಿ ಪೂರೈಕೆಯಾಗುತ್ತಿದ್ದರೂ ಗ್ರಾ.ಪಂ. ಗಮನಹರಿಸಿಲ್ಲ. ಚರಂಡಿಯಲ್ಲಿ ನೀರು ನಿಂತಿರುವುದರಿಂದ ಸೊಳ್ಳೆಗಳು ಹೆಚ್ಚಾಗಿ ಜನರಿಗೆ ವಿವಿಧ ಕಾಯಿಲೆಗಳು ಹರಡುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದರು.

ಬಿ.ಎಸ್. ಆನಂದ್, ತುಮ್ಮಿನಕಟ್ಟಿ ನಾಗರಾಜ್, ಸಂತೋಷ್, ತೀರ್ಥಪ್ಪ, ಕುಬೇರಪ್ಪ, ಲಿಂಗಪ್ಪ, ಕಾಡಪ್ಳರ ಮಂಜಪ್ಪ, ಸೋಮಶೇಖರ್, ಸಂದೀಪ್, ಮಂಜುನಾಥ್, ಈಶ್ವರಪ್ಪ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.