ADVERTISEMENT

ಚಿಲ್ಲರೆ ವ್ಯಾಪಾರಕ್ಕೆ ವಿದೇಶಿ ಬಂಡವಾಳ ಹೂಡಿಕೆ ಮಾರಕ

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 11:15 IST
Last Updated 1 ಜನವರಿ 2012, 11:15 IST

ದಾವಣಗೆರೆ: ಭಾರತದಲ್ಲಿ ಸಣ್ಣ ವ್ಯಾಪಾರ ಕ್ಷೇತ್ರವನ್ನು ಕೇಂದ್ರೀಕೃತ ಮಾಡುವ ನಿಟ್ಟಿನಲ್ಲಿ ವಿದೇಶಿ ಕಂಪೆನಿಗಳು ಮುಖವಾಡ ಹಾಕಿದ್ದು, ಕೇಂದ್ರ ಸರ್ಕಾರ ವಿದೇಶಿ ಕಂಪೆನಿಗಳಿಗೆ ಮಣೆಹಾಕಿದರೆ ಭಾರತದ ಆರ್ಥಿಕ ವ್ಯವಸ್ಥೆ ಬುಡಮೇಲಾಗುವ ಸಂಭವ ಇದೆ ಎಂದು ಅರ್ಥಶಾಸ್ತ್ರಜ್ಞ ಬಿ.ಎಂ. ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಭಾರತ್ ವಿಕಾಸ್ ಪರಿಷತ್ ಗೌತಮ ಶಾಖೆ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ `ಚಿಲ್ಲರೆ ವ್ಯಾಪಾರಕ್ಕೆ ವಿದೇಶಿ ಬಂಡವಾಳ ವರವೋ? ಶಾಪವೋ?~  ಕುರಿತು ಅವರು ಮಾತನಾಡಿದರು.

ಜಾಗತೀಕರಣದ ದುಃಸ್ಥಿತಿಯಲ್ಲಿ ಭಾರತ ನರಳುತ್ತಿದ್ದರೂ, ಯೋಚಿಸದ ಕೇಂದ್ರ ಸರ್ಕಾರ ಚಿಲ್ಲರೆ ವ್ಯಾಪಾರ ಕ್ಷೇತ್ರದ ಮೇಲೆ ವಕ್ರದೃಷ್ಟಿ ನೆಟ್ಟಿದೆ ಎಂದರು.

ಹಾಗೆ ನೋಡಿದರೆ ಚಿಲ್ಲರೆ ವ್ಯಾಪಾರ ಕ್ಷೇತ್ರದ ಮೇಲೆ ಭಾರತದ ಆರ್ಥಿಕ ವ್ಯವಸ್ಥೆ ನಿಂತಿದೆ. ವಾರ್ಷಿಕ 25ಲಕ್ಷ ಕೋಟಿ ಭಾರತದ ಚಿಲ್ಲರೆ ವ್ಯಾಪಾರ ಕ್ಷೇತ್ರದ ವಹಿವಾಟಿದೆ. ದೇಶದಲ್ಲಿ 4 ಕೋಟಿ ಬಡ ಕುಟುಂಬಗಳಿಗೆ ಅದು ಬದುಕು ನೀಡಿದೆ.

20 ಕೋಟಿ ಜನರಿಗೆ ಎರಡು ಹೊತ್ತಿನ ಅನ್ನ ನೀಡುತ್ತಿದೆ. ಇಡೀ ದೇಶದಲ್ಲಿ ಶೇ 51ರಷ್ಟು ಜನರಿಗೆ ಉದ್ಯೋಗ ಕಲ್ಪಿಸಿದೆ. ಕೃಷಿಯ ನಂತರ ಈ ಕ್ಷೇತ್ರ ಹೆಚ್ಚಿನ ಜನರಿಗೆ ಸ್ವ ಉದ್ಯೋಗ ನೀಡಿದೆ. ದೇಶಕ್ಕೆ ಚಿಲ್ಲರೆ ವ್ಯಾಪಾರ ಕ್ಷೇತ್ರ ಹೆಚ್ಚಿನ ಆದಾಯ ತಂದುಕೊಡುತ್ತಿದೆ. ಇಂತಹ ಭಾರತದ ವಿಶಿಷ್ಟ ಆರ್ಥಿಕ ವ್ಯವಸ್ಥೆಯನ್ನು ನುಂಗಿ ಹಾಕಲು ವಿದೇಶಿ ಕಂಪೆನಿಗಳಾದ ವಾಲ್‌ಮಾರ್ಟ್ ಅಮೆರಿಕದ ಹೊಂ ಡಿಪೋ, ಕ್ರೋಗರ್, ಫ್ರಾನ್ಸ್‌ನ ಕ್ಯಾರಿಫೋರ್, ನೆದರ್‌ಲ್ಯಾಂಡ್‌ನ ರಾಯಲ್ ಅಹೋಲ್ಡ್ ಕಂಪೆನಿಗಳು ಉತ್ಸುಕವಾಗಿವೆ. ಅಂತಹ ಕಂಪೆನಿಗಳಿಗೆ ಯುಪಿಎ ಸರ್ಕಾರ ಸ್ವಾಗತಿಸಲು ಸಿದ್ಧತೆ ನಡೆಸುತ್ತಿದೆ ಎಂದು ವಿವರಿಸಿದರು.

ಪಾಶ್ಚಾತ್ಯ ಕಂಪೆನಿಗಳು ರೈತರ ಉತ್ಪನ್ನಗಳನ್ನು ಅತ್ಯಂತ ಕಡಿಮೆ ಬೆಲೆಗೆ ಕೊಂಡು, ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಹೇಳುತ್ತಿವೆ. ಇದರಿಂದ ಸಣ್ಣ ವ್ಯಾಪಾರ ವಹಿವಾಟು ಸುಗಮವಾಗಲಿದೆ ಎನುತ್ತಿವೆ. `ಲಾಭ~ ವ್ಯಾಪಾರ ಮೂಲ ಧರ್ಮವಾಗಿದೆ. ಅತ್ಯಂತ ಕಡಿಮೆ ಬೆಲೆಗೆ ಕೊಂಡು ಮತ್ತಷ್ಟೂ ಕಡಿಮೆ ಬೆಲೆಗೆ ಮಾರಾಟ ಮಾಡುವುದು ಸಾಧ್ಯವೇ? ಇದು ಯಾವ ಆರ್ಥಿಕ ವ್ಯವಸ್ಥೆಯ ನೀತಿ. ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.

ಭಾರತ ವಿಕಾಸ್ ಗೌತಮ ಶಾಖೆ ಅಧ್ಯಕ್ಷ ಎಸ್.ಟಿ. ಕುಸುಮ ಶ್ರೇಷ್ಠಿ  ಅಧ್ಯಕ್ಷತೆ ವಹಿಸಿದ್ದರು. ಪ್ರೊ.ನರಸಿಂಹಪ್ಪ, ಶಿವಶರಣಪ್ಪ, ಜಗದೀಶ್, ಪ್ರದೀಪ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT