ದಾವಣಗೆರೆ: ಮುಂಬರುವ ಚುನಾವಣಾ ಪ್ರಕ್ರಿಯೆ ನಂತರ 10ಕ್ಕಿಂತಲೂ ಹೆಚ್ಚು ಭಾಗವಾಗಿ ಹಂಚಿಹೋಗಿರುವ ಭೋವಿ ಸಂಘಗಳನ್ನು ಒಂದೇ ವೇದಿಕೆಯಡಿ ಸಂಘಟಿಸುವುದಾಗಿ ಭೋವಿ ಮಹಾಸಂಸ್ಥಾನ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.
ಜ. 14, 2013ರಲ್ಲಿ ನಡೆಯಲಿರುವ ಸಿದ್ದರಾಮೇಶ್ವರ ಜಯಂತಿ ಸಂದರ್ಭದಲ್ಲಿ ಸಾಧ್ಯವಾದಲ್ಲಿ ಭೋವಿ ಸಂಘಗಳನ್ನು ಒಂದುಗೂಡಿಸಿ, ಪ್ರಕಟಿಸುವ ವಿಚಾರ ಇದೆ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಚುನಾವಣಾ ಪೂರ್ವದಲ್ಲಿ ಅಸಂಘಟಿತರಾಗಿದ್ದ ಸಮಾಜವನ್ನು ಮುಖಂಡರ ಅಪೇಕ್ಷೆ ಮೇರೆಗೆ ಒಂದುಗೂಡಿಸಲಾಗಿತ್ತು. ಅದರ ಫಲವಾಗಿ ಭೋವಿ ಸಮಾಜದಿಂದ 11 ಶಾಸಕರು, ಒಬ್ಬ ಸಂಸತ್ ಸದಸ್ಯರು ರಾಜಕೀಯ ಸ್ಥಾನಮಾನ ಪಡೆದರು.
ಮುಂದಿನ ದಿನಗಳಲ್ಲಿ ಸಮಾಜ ಮತ್ತಷ್ಟು ಬಲಿಷ್ಠವಾಗಿ ಬೆಳೆಯಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದ 20 ಜಿಲ್ಲೆಗಳ ವಿವಿಧ ಹಳ್ಳಿಗಳಲ್ಲಿ ಪ್ರವಾಸ ಮಾಡಲಾಗಿದೆ. ಭೋವಿ ಗುರುಪೀಠದ ಆದೇಶದ ಮೇರೆಗೆ ಜಿಲ್ಲಾವಾರು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಮುಖ್ಯವಾಗಿ ಪ್ರತಿ ತಾಲ್ಲೂಕಿಗೆ ಮೂವರು ಸದಸ್ಯರನ್ನು ಒಳಗೊಂಡಂತೆ ಸಮಾಜದ ಸರ್ವಸದಸ್ಯರ ಸಭೆಯಲ್ಲಿ ಜಿಲ್ಲಾಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಕರ್ನಾಟಕ ರಾಜ್ಯ ಭೋವಿ ಸಂಘದ ಮಾರ್ಗದರ್ಶಕ ಡಾ.ವೈ. ರಾಮಪ್ಪ ಅವರ ನೇತೃತ್ವದಲ್ಲಿ ಈ ಕಾರ್ಯ ನಡೆದಿದೆ ಎಂದು ಸ್ವಾಮೀಜಿ ವಿವರಿಸಿದರು. ಭೋವಿ ಸಮಾಜದ ಓದೋಗಂಗಣ್ಣ, ಅರಸೀಕೆರೆ ತಿಮ್ಮಣ್ಣ, ಅಂಜನಪ್ಪ, ಚೌಡಪ್ಪ, ಶ್ರೀನಿವಾಸ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.