ADVERTISEMENT

ಜನತೆಯ ಬಾಳು ಬೆಳಗಿಸಿದ ಮಹಾನುಭಾವ ಕನಕದಾಸ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 6:14 IST
Last Updated 3 ಡಿಸೆಂಬರ್ 2012, 6:14 IST

ಹೊನ್ನಾಳಿ: ತಮ್ಮ ಕೀರ್ತನೆಗಳ ಮೂಲಕ ನಾಡಿನ ಜನತೆಯ ಬಾಳು ಬೆಳಗಿಸಿದ ಮಹಾನುಭಾವರು ಕನಕದಾಸರು ಎಂದು ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದರು.

ತಾಲ್ಲೂಕಿನ ಕೋಟೆಮಲ್ಲೂರು ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡ ಕನಕದಾಸ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸರು ಇಡೀ ನಾಡನ್ನು ಸುತ್ತಿ ಜನರಲ್ಲಿದ್ದ ಮೂಢನಂಬಿಕೆ, ಅಜ್ಞಾನ ತೊಲಗಿಸಿದರು. ತಮ್ಮ ಅನನ್ಯ ಭಕ್ತಿಯಿಂದ ಉಡುಪಿಯ ಕೃಷ್ಣನನ್ನು ಒಲಿಸಿಕೊಂಡರು. ಮಾನವ ಜನ್ಮವನ್ನು ಸದ್ಬಳಕೆ ಮಾಡಿಕೊಂಡು ಮೋಕ್ಷ ಹೊಂದಲು ಎಲ್ಲರನ್ನೂ ಅವರು ಪ್ರೇರೇಪಿಸಿದರು. ನಾವೆಲ್ಲಾ ಅವರ ಮಾರ್ಗದರ್ಶನದಲ್ಲಿ ಸಾಗಿ ಉತ್ತಮವಾಗಿ ಬದುಕೋಣ ಎಂದು ತಿಳಿಸಿದರು.

ಕನಕದಾಸ ಜಯಂತ್ಯುತ್ಸವವನ್ನು ಹಬ್ಬದೋಪಾದಿಯಲ್ಲಿ ಆಚರಿಸಬೇಕಿದೆ. ಮನೆಗಳಲ್ಲಿ ಸಿಹಿ ಅಡುಗೆ ತಯಾರಿಸಿ ಊಟ ಮಾಡಿ ಎಲ್ಲರೂ ಸಂತೋಷದಿಂದ, ಸಹಬಾಳ್ವೆ ನಡೆಸೋಣ ಎಂದು ಕರೆಯಿತ್ತರು.

ರಾಜಕೀಯ ಅಧಿಕಾರ, ಇತರ ಸೌಲಭ್ಯಗಳನ್ನು ಪಡೆಯಲು ಸಮಾಜದ ಎಲ್ಲಾ ಜನಾಂಗದವರು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗುತ್ತಾರೆ. ಅದರಂತೆ, ಹಾಲುಮತ ಸಮಾಜದವರು, ಹಿಂದುಳಿದ ವರ್ಗಗಳ ಎಲ್ಲಾ ಜನಾಂಗದವರು ಒಂದಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕೋಟೆಮಲ್ಲೂರು ಗ್ರಾಮ ಪಂಚಾಯ್ತಿ ಸದಸ್ಯ ಸಿ.ಎಚ್. ಹಾಲೇಶ್ ಮಾತನಾಡಿ, ತಮಗೆ ದೊರೆತ ಅಪಾರ ಕನಕ ನಿಧಿಯನ್ನು ಸ್ವಾರ್ಥಕ್ಕೆ ಬಳಸದೇ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ದಾನವಾಗಿ ನೀಡಿದ ಮಹಾನುಭಾವ ಕನಕದಾಸರು. ಮನುಷ್ಯ ಜಾತಿ ಭೇದ ಎಣಿಸಬಾರದು. ಮನುಷ್ಯ ಕುಲವೆಲ್ಲಾ ಒಂದೇ ಜಾತಿ ಎಂಬ ಸಂದೇಶ ನೀಡಿದ ಅವರು ವಿಶ್ವಭ್ರಾತೃತ್ವದ ಮಹತ್ವ ತಿಳಿಸಿದರು ಎಂದು ನುಡಿದರು.

ಕೋಟೆಮಲ್ಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಳದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದಸ್ಯರಾದ ಎಸ್. ಮಹೇಶ್ವರಪ್ಪ, ಸವಿತಾ ನಾಗರಾಜ್, ಲಲಿತಮ್ಮ ಅಣ್ಣಪ್ಪ, ಮುಖಂಡರಾದ ಹಾಲಸಿದ್ದಪ್ಪ, ಬಸಪ್ಪ, ಕರಿಸಿದ್ದಪ್ಪ, ಬಸವರಾಜಪ್ಪ ಇದ್ದರು.

ರಮ್ಯಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್ವರಪ್ಪ ಸ್ವಾಗತಿಸಿದರು. ವೀರೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.