ADVERTISEMENT

ಜಯಂತಿ ಆಚರಣೆಗೆ ಸರ್ಕಾರಿ ರಜೆ ಸಲ್ಲ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 6:35 IST
Last Updated 25 ಏಪ್ರಿಲ್ 2012, 6:35 IST

ಚನ್ನಗಿರಿ: ನಾಡಿನ ಎಲ್ಲಾ ವರ್ಗದ ಮಹಾನ್ ಪುಣ್ಯ ಪುರುಷರ ಸ್ಮರಣೆಗಾಗಿ ಸರ್ಕಾರ ಜಯಂತಿ ಆಚರಣೆ ಮಾಡಲು ನಿರ್ಧರಿಸುವುದು ಸ್ವಾಗತಾರ್ಹವಾದ ವಿಷಯವಾಗಿದೆ. ಆದರೆ, ಜಯಂತಿ ಆಚರಣೆ ಮಾಡಲು ಸರ್ಕಾರ ರಜೆ ಘೋಷಿಸಿರುವುದನ್ನು ರದ್ದುಗೊಳಿಸಿದರೆ ಉತ್ತಮ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ವಿವಿಧ ಸಂಘ- ಸಂಸ್ಥೆ ಆಶ್ರಯದಲ್ಲಿ ಮಂಗಳವಾರ ನಡೆದ ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರಜೆ ಘೋಷಿಸಿರುವುದನ್ನು ರದ್ದುಗೊಳಿಸಲು ಮುಂಬರುವ ಅಧಿವೇಶನದಲ್ಲಿ  ಚರ್ಚೆ ನಡೆಸಲಾಗುವುದು. ಮಹಾನ್ ಪುರುಷರ ಜಯಂತಿ ಆಚರಣೆ ದಿನ ಒಂದು ಗಂಟೆ ಹೆಚ್ಚಾಗಿ ಕಾರ್ಯ ನಿರ್ವಹಿಸಿದರೆ ಬಸವಣ್ಣ ಅವರು ಜಗತ್ತಿಗೆ ಸಾರಿದ ಕಾಯಕವೇ ಕೈಲಾಸ ಎಂಬುದಕ್ಕೆ ಅರ್ಥ ಸಿಗುತ್ತದೆ. ಸರ್ವರಿಗೂ ಸಮಪಾಲು, ಸಮಬಾಳು ಎಂಬ ಬಸವಣ್ಣ ಅವರ ಧ್ಯೇಯ ವಾಕ್ಯವನ್ನು ಅರ್ಥ ಮಾಡಿಕೊಂಡು ಜೀವನ ನಡೆಸಬೇಕು ಎಂದರು.

ತಾ.ಪಂ. ಅಧ್ಯಕ್ಷೆ ಈ. ಸುಧಾ ಕುಮಾರಸ್ವಾಮಿ, ಉಪಾಧ್ಯಕ್ಷ ಎನ್. ಗಣೇಶ್‌ನಾಯ್ಕ, ಪ.ಪಂ. ಅಧ್ಯಕ್ಷೆ ಪುಷ್ಪಲತಾ, ಉಪಾಧ್ಯಕ್ಷ ಎಂ.ಬಿ. ರಾಜಪ್ಪ, ಜಿ.ಪಂ. ಸದಸ್ಯ ಎಚ್.ವಿ. ರುದ್ರಪ್ಪ, ವೀರಶೈವ ಸಮಾಜದ ಅಧ್ಯಕ್ಷ ಸಾಗರದ ಶಿವಲಿಂಗಪ್ಪ, ಸಾಧು ಸಮಾಜದ ಕೆ. ಶಿವಲಿಂಗಪ್ಪ, ಉಪ್ಪಾರ ಸಮಾಜದ ಎ.ಎಸ್. ಬಸವರಾಜಪ್ಪ, ಮುಸ್ಲಿಂ ಸಮಾಜದ ಕೆ. ಸಿರಾಜ್‌ವುದ್ದೀನ್, ದೇವಾಂಗ ಸಮಾಜದ ಉಮಾಪತಿ, ಬಂಜಾರ ಸಮಾಜದ ಶಿವಗನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಎಂ.ಯು. ಚನ್ನಬಸಪ್ಪ ಉಪನ್ಯಾಸ ನೀಡಿದರು.

ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಹಾಗೂ ಚನ್ನಗಿರಿ ವಿರಕ್ತ ಮಠದ ಜಯದೇವ ಸ್ವಾಮೀಜಿ ನೇತೃತ್ವ ವಹಿಸಿದ್ದರು.ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎ. ಬಸವಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಚೈತ್ರಾ ಪ್ರಾರ್ಥಿಸಿದರು. ತಹಶೀಲ್ದಾರ್ ಎಚ್.ಎಂ. ರೇವಣಸಿದ್ದಪ್ಪ ಸ್ವಾಗತಿಸಿದರು. ಎಂ.ಬಿ. ನಾಗರಾಜ್ ನಿರೂಪಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.