ADVERTISEMENT

‘ಜಾಗತಿಕ ಸವಾಲು ಎದುರಿಸುವ ಶಿಕ್ಷಣವಿರಲಿ’

​ಪ್ರಜಾವಾಣಿ ವಾರ್ತೆ
Published 21 ಮೇ 2018, 6:17 IST
Last Updated 21 ಮೇ 2018, 6:17 IST

ಸಂತೇಬೆನ್ನೂರು: ಜಾಗತಿಕ ಸವಾಲನ್ನು ಎದುರಿಸಿ ಉದ್ಯಮಶೀಲರನ್ನಾಗಿಸುವ ಶಿಕ್ಷಣ ಅಗತ್ಯ ಎಂದು ವ್ಯಂಗ್ಯ ಚಿತ್ರಕಾರ ಎಚ್‍.ಬಿ.ಮಂಜುನಾಥ್ ಹೇಳಿದರು.

ಸಮೀಪದ ಹಿರೇಕೋಗಲೂರಿನಲ್ಲಿ ಭಾನುವಾರ ಹಿರಿಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದಿನ ಶಿಕ್ಷಣದಲ್ಲಿ ಬದುಕಿನಲ್ಲಿ ಬರುವ ಸಾಮಾಜಿಕ ಸಮಸ್ಯೆ ಎದುರಿಸುವ ಜ್ಞಾನಾರ್ಜನೆ ಇತ್ತು. ಇಂದಿನ ಶಿಕ್ಷಣದಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಅಂಕಗಳಿಸುವ ತಂತ್ರಗಾರಿಕೆ ಇದೆ. ವ್ಯವಸ್ಥೆಯ ನಿರೀಕ್ಷೆ ಈ ಸ್ಥಿತಿಗೆ ಕಾರಣ. ಶಿಕ್ಷಣದ ಉದ್ದೇಶವೇ ಉದ್ಯೋಗ ಪ್ರಾಪ್ತಿ ಎನ್ನುವಂತಾಗಿದೆ ಎಂದು ವಿಷಾದಿಸಿದರು.

ADVERTISEMENT

ಸಿರಿಗೆರೆ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ಎಸ್‍.ಬಿ.ರಂಗನಾಥ್ ಮಾತನಾಡಿ, ‘ಶಿಕ್ಷಣದಿಂದ ಶಾಂತಿ, ಸಮೃದ್ಧಿ ಹೆಚ್ಚಬೇಕು. ಇಂದು ಎಲ್ಲೆಡೆ ಅಶಾಂತಿ, ಕ್ಷೋಭೆ, ಹಿಂಸೆ ಕಾಣುತ್ತಿವೆ. ಹಳ್ಳಿಗಳು ಪ್ರತಿರೋಧ ಮನೋಭಾವದಿಂದ ಕಳಾಹೀನವಾಗಿವೆ. ಸುಶಿಕ್ಷಿತರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಂದಿನ ಯುವ ಪೀಳಿಗೆ ಸ್ವಾರ್ಥ, ವಿದೇಶದ ಹಪಾಹಪಿ, ಹಿರಿಯರನ್ನು ವೃದ್ಧಾಶ್ರಮ ಸೇರಿಸುವ ಸ್ವಾರ್ಥ ಮೈಗೂಡಿಸಿಕೊಂಡಿದ್ದಾರೆ’ ಎಂದು ಹೇಳಿದರು.

ಸಾಹಿತಿ ಶಾಂತ ಗಂಗಾಧರ್ ಅಭಿನಂದನಾ ಭಾಷಣ ಮಾಡಿದರು. ಎಚ್.ಬಿ.ವೆಂಕಟೇಶ್ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಡಾ. ಎಚ್‍.ವಿ.ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು.

ಅಬ್ದುಲ್ ರಜಾಕ್, ಎಂ.ವಿ.ಮುರುಗೇಶ್, ಎಂ.ಎಸ್‍.ಶೋಭಾ ಹಳೆ ನೆನಪುಗಳನ್ನು ಬಿಚ್ಚಿಟ್ಟರು. ಗ್ರಾಮದ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಶ್ರೀನಿವಾಸ್ ಸ್ವಾಗತಿಸಿದರು. ಶಿವಲಿಂಗಸ್ವಾಮಿ ವಂದಿಸಿದರು. ಎಸ್‍.ಆರ್‍.ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.