ADVERTISEMENT

ಜಾಮೀನು ನಿರಾಕರಣೆ ಹಿಂದೆ ಕೈವಾಡ ಇಲ್ಲ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 4:30 IST
Last Updated 12 ಅಕ್ಟೋಬರ್ 2011, 4:30 IST

ಹರಪನಹಳ್ಳಿ: ಅಕ್ರಮ ಗಣಿಗಾರಿಕೆಗೆ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಜಿ. ಜನಾರ್ದನರೆಡ್ಡಿ ಅವರಿಗೆ ಸಿಬಿಐ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸುತ್ತಿರುವುದರ ಹಿಂದೆ, ಕಾಂಗ್ರೆಸ್ ಇಲ್ಲವೇ; ಯಾವುದೇ ಪ್ರಭಾವಿ ವ್ಯಕ್ತಿಗಳ ಕೈವಾಡ ಇದೆ ಎಂದು ತಾವು ಭಾವಿಸುವುದಿಲ್ಲ ಎಂದು ಮಾಜಿ ಸಚಿವ ಜಿ. ಕರುಣಾಕರರೆಡ್ಡಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಸಿಬಿಐ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಕಾರಣ ಇದರಲ್ಲಿ ಯಾವುದೇ ವ್ಯಕ್ತಿ ಇಲ್ಲವೇ ಪಕ್ಷದ ಕುಮ್ಮಕ್ಕು ಇದೆ ಎಂದು ಹೇಳುವುದು ಸಮಂಜಸವಲ್ಲ. ತಮ್ಮ ಸಹೋದರ ಜನಾರ್ದನರೆಡ್ಡಿ ಅವರಿಗೆ ಜಾಮೀನು ನೀಡುವುದು ಇಲ್ಲವೇ; ನಿರಾಕರಿಸುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ. ಆದರೂ, ಜಾಮೀನು ಕೋರಿ ನ್ಯಾಯಾಲಯದಲ್ಲಿ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ ಎಂದರು.

ರಾಜ್ಯದಲ್ಲನ ಅಕ್ರಮ ಗಣಿಗಾರಿಕೆಗೆ ಸಂಬಂಧ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿರುವುದನ್ನು ಸ್ವಾಗತಿಸುವ ಇಲ್ಲವೇ; ಅಕ್ಷೇಪಿಸುವ ಪ್ರಮೇಯವೇ ಬರುವುದಿಲ್ಲ ಎಂದಷ್ಟೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಳ್ಳಾರಿ ಜಿಲ್ಲೆಯ ಕೆಲ ಶಾಸಕರು, ಸಂಸದರು ಹಾಗೂ ರಾಯಚೂರು ಸಂಸದ ನೇತೃತ್ವದ ನಿಯೋಗ ಇತ್ತೀಚೆಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಶಾಸಕ ಶ್ರೀರಾಮುಲು ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಒತ್ತಾಯಿಸಿಲ್ಲ. ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಂಡಿದೆ. ಅಭಿವೃದ್ಧಿಗಾಗಿ ಸಮರ್ಪಕ ಅನುದಾನ ಒದಗಿಸುವಂತೆ ಒತ್ತಾಯಿಸಿದೆ. ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಮಂತ್ರಿಗಿರಿಗಾಗಿ ನಾನಾಗಲಿ, ಶ್ರೀರಾಮುಲು ಅವರಾಗಲಿ ಯಾವುದೇ ಲಾಬಿ ಇಲ್ಲವೇ; ಬ್ಲಾಕ್‌ಮೇಲ್ ಮಾಡುವುದಿಲ್ಲ. ಮಂತ್ರಿಗಳ ನೇಮಕಾತಿ ವಿಚಾರ ಮುಖ್ಯಮಂತಿ  ವಿವೇಚನೆಗೆ ಬಿಟ್ಟ ವಿಚಾರ ಎಂದರು.

ತಾ.ಪಂ. ಅಧ್ಯಕ್ಷೆ ಜಯಮಾಲಾ, ಪುರಸಭಾ ಅಧ್ಯಕ್ಷ ಬಿ. ಮಹಬೂಬ್ ಸಾಹೇಬ್, ಮುಖಂಡರಾದ ಆರುಂಡಿ ನಾಗರಾಜ್, ಜಿ. ನಂಜನಗೌಡ, ಗಿರಿರಾಜರೆಡ್ಡಿ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.