ADVERTISEMENT

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರಿಶಿಷ್ಟರ ಕುಂದುಕೊರತೆ ಸಭೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 4:35 IST
Last Updated 22 ಮಾರ್ಚ್ 2012, 4:35 IST

ದಾವಣಗೆರೆ: ಪರಿಶಿಷ್ಟರಿಗೆ ಸರ್ಕಾರದ ಸೌಲಭ್ಯ ಸಂಪೂರ್ಣವಾಗಿ ತಲುಪುವವರೆಗೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಕುಂದುಕೊರತೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯಲ್ಲಿ ನಡೆದ ಚರ್ಚೆ: ಮಂಡಕ್ಕಿ ಭಟ್ಟಿ ಪ್ರದೇಶದ ಜನರಿಗೆ ಹೊಗೆರಹಿತ ಒಲೆ ವಿತರಿಸಬೇಕು. ಅಲ್ಲಿ ಹೊಗೆಯಿಂದ ಪರಿಸರ ಮಾಲಿನ್ಯವಾಗುತ್ತಿರುವುದು ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಬಗ್ಗೆ ಸಮಿತಿ ಸದಸ್ಯ ರಮೇಶ್ ಸಭೆಯ ಗಮನಕ್ಕೆ ತಂದರು.

ಸಮಸ್ಯೆ ತಮ್ಮ ಗಮನದಲ್ಲಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಕಾಲಾವಕಾಶ ಕೋರಿಕೆ: ಕುಂದುವಾಡದಲ್ಲಿ ರೈತರು ಬೆಳೆದ ಬೆಳೆಯನ್ನು ನೋಟಿಸ್ ನೀಡದೆ ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ. ನೀರು ಸಂಸ್ಕರಣ ಘಟಕ ಸ್ಥಾಪನೆಗೆ ಅಲ್ಲಿ ಸಿದ್ಧತೆ ನಡೆದಿದೆ. ನೋಟಿಸ್ ನೀಡದೇ ಬೆಳೆ ತೆರವುಗೊಳಿಸುತ್ತಿರುವುದು ಸರಿಯಲ್ಲ. ಈ ಕ್ರಮವನ್ನು ತಡೆಹಿಡಿಯಬೇಕು ಎಂದು ಕುಂದುವಾಡ ಮಂಜುನಾಥ್ ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಆ ಜಮೀನು ಸರ್ಕಾರಕ್ಕೆ ಸೇರಿದ್ದು, ನೀರು ಸಂಸ್ಕರಣ ಘಟಕ ತೆರೆಯಲು ರೈತರು ಭೂಮಿಯನ್ನು ತೆರವುಗೊಳಿಸಲೇಬೇಕು ಎಂದು ಡಿಸಿ ಸ್ಪಷ್ಟಪಡಿಸಿದರು.ತೆರವುಗೊಳಿಸಬೇಕಾದರೆ ಆ ಸ್ಥಳದಲ್ಲಿ ಈಗಾಗಲೇ ನಾಟಿ ಕೆಲಸ ಮುಗಿದಿದ್ದು. ಈ ಬೆಳೆ ಅವಧಿ ಮುಗಿಯುವವರೆಗೆ ಕಾಲಾವಕಾಶ ಕೊಡಬೇಕು ಎಂದು ಮಂಜುನಾಥ್ ಒತ್ತಾಯಿಸಿದರು.

ಪಾಲಿಕೆಯ ಶೇ. 22.75ರ ಅನುದಾನದ ಮೊತ್ತ ಸರಿಯಾಗಿ ವಿತರಣೆಯಾಗುತ್ತಿಲ್ಲ. ಅದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರುದ್ರಮುನಿ ಎಂಬುವರು ಒತ್ತಾಯಿಸಿದರು.

ತಹಶೀಲ್ದಾರ್ ಕಚೇರಿಯಿಂದ ನೀಡುವ ಜಾತಿ ಹಾಗೂ ಆದಾಯ ಪ್ರಮಾಣಪತ್ರ ವಿತರಣೆ ವಿಳಂಬವಾಗುತ್ತಿದೆ. ಒಮ್ಮಮ್ಮೆ 4 ತಿಂಗಳ ಕಾಲ ವಿಳಂಬವಾದದ್ದೂ ಇದೆ. ಇದರಿಂದ ತಮಗೆ ತೀವ್ರ ತೊಂದರೆ ಅಗುತ್ತಿದ್ದು, ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಆಲೂರು ನಿಂಗರಾಜ್ ಒತ್ತಾಯಿಸಿದರು.

ಈ ವಿಳಂಬಕ್ಕೆ ಕಾರಣರಾದವರಿಗೆ ನೋಟಿಸ್ ನೀಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.ಈ ಸಂದರ್ಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಭವನ ನಿರ್ಮಾಣ, ನೆಮ್ಮದಿ ಕೇಂದ್ರಗಳ ಕಾರ್ಯವಿಧಾನ, ಪ.ಜಾತಿ ಹಾಗೂ ಪ.ಪಂಗಡದವರಿಗೆ ಬೋರ್‌ವೆಲ್ ಕೊರೆಸಿಕೊಡುವುದು ಸೇರಿದಂತೆ ಹಲವು ವಿಷಯದ ಚರ್ಚೆ ನಡೆಯಿತು. 

 ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪಿ.ಕೆ. ಮಹಾಂತೇಶ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುತ್ತಿ ಜಂಬುನಾಥ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿ.ಎಸ್. ಪ್ರದೀಪ್, ಜಿಲ್ಲಾ ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ. ಚವಾಣ್ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.