ADVERTISEMENT

ಜಿಲ್ಲೆಯಲ್ಲಿ ಬಂದ್‌ಗೆ ಸಿಗದ ಜನ ಬೆಂಬಲ

ರೈತರ ಸಾಲ ಮನ್ನಾ ಮಾಡಲು ಒತ್ತಾಯಿಸಿ ಪ್ರತಿಭಟನೆ; ಬಿಜೆಪಿ ಕಾರ್ಯಕರ್ತರ ಬಂಧನ– ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 29 ಮೇ 2018, 7:07 IST
Last Updated 29 ಮೇ 2018, 7:07 IST
ಸಂಸದ ಜಿ.ಎಂ. ಸಿದ್ದೇಶ್ವರ ಅವರನ್ನು ಪೊಲೀಸರು ಬಂಧಿಸಿ ಬಸ್‌ನಲ್ಲಿ ಕರೆದೊಯ್ದರು
ಸಂಸದ ಜಿ.ಎಂ. ಸಿದ್ದೇಶ್ವರ ಅವರನ್ನು ಪೊಲೀಸರು ಬಂಧಿಸಿ ಬಸ್‌ನಲ್ಲಿ ಕರೆದೊಯ್ದರು   

ದಾವಣಗೆರೆ: ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯಿಸಿ ಬಿಜೆಪಿ ಸೋಮವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜನ ಬೆಂಬಲ ದೊರೆಯಲಿಲ್ಲ. ರೈತ ಸಂಘಟನೆಗಳ ಸದಸ್ಯರೂ ಹೋರಾಟದಿಂದ ದೂರ ಉಳಿದಿದ್ದರು. ಜನಜೀವನ ಬಹುತೇಕ ಎಂದಿನಂತೆ ಇತ್ತು. ಯಾವುದೇ ಅಹಿತಕರ ಘಟನೆ ನಡೆದಿಲ್ಲ.

ನಗರದಲ್ಲಿ ಬಸ್‌, ಆಟೊ ಸಂಚಾರ ಸಹಜವಾಗಿತ್ತು. ಶಾಲಾ– ಕಾಲೇಜು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಕಾರ್ಯನಿರ್ವಹಿಸಿದವು. ಪೆಟ್ರೋಲ್‌ ಬಂಕ್‌, ಹೋಟೆಲ್‌, ಅಂಗಡಿಗಳು ಎಂದಿನಂತೆ ವಹಿವಾಟು ನಡೆಸಿದವು.

ಸಂಸದ, ಶಾಸಕರ ಬಂಧನ:
ಬಿಜೆಪಿ ಕಾರ್ಯಕರ್ತರು ನಗರದ ವಿವಿಧೆಡೆ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಳೆ ಬಸ್‌ನಿಲ್ದಾಣದಲ್ಲಿ ಬಸ್‌ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಬೆಳಿಗ್ಗೆ 11 ಗಂಟೆ ಹೊತ್ತಿಗೆ ಸಂಸದ ಜಿ.ಎಂ. ಸಿದ್ದೇಶ್ವರ, ದಾವಣಗೆರೆ ಉತ್ತರ ಶಾಸಕ ಎಸ್‌.ಎ. ರವೀಂದ್ರನಾಥ್‌, ಮಾಯಕೊಂಡ ಶಾಸಕ ಪ್ರೊ. ಎನ್‌. ಲಿಂಗಣ್ಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಹಾಗೂ 40ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಸ್‌ನಲ್ಲಿ ಕರೆದುಕೊಂಡು ಹೋಗಿ ಬಳಿಕ ಬಿಡುಗಡೆಗೊಳಿಸಿದರು.

ADVERTISEMENT

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಎಂ. ಸಿದ್ದೇಶ್ವರ, ‘ಅಧಿಕಾರ ಸ್ವೀಕರಿಸಿದ 24 ಗಂಟೆಯೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದರು. ಆದರೆ, ಈಗ ಸಾಲ ಮನ್ನಾ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ರೈತರ ಹಿತ ಕಾಪಾಡುವ ದೃಷ್ಟಿಯಿಂದ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಿದ್ದೇವೆ’ ಎಂದು ಹೇಳಿದರು.

ಯಶವಂತರಾವ್‌ ಜಾಧವ್‌ ಮಾತನಾಡಿ, ‘ರೈತರ ಸಂಕಷ್ಟ ಪರಿಹಾರಕ್ಕಾಗಿ ಬಂದ್‌ಗೆ ಸಹಕಾರ ನೀಡುವಂತೆ ಮಾಲೀಕರಲ್ಲಿ ಕೈಮುಗಿದು ಮನವಿ ಮಾಡಿ ಅಂಗಡಿಗಳನ್ನು ಮುಚ್ಚುವಂತೆ ಕೋರುತ್ತಿದ್ದೇವೆ. ಕುಮಾರಸ್ವಾಮಿ ಮಾತಿಗೆ ತಪ್ಪಿದ್ದರಿಂದ ನಾವು ಹೋರಾಟಕ್ಕೆ ಇಳಿದಿದ್ದೇವೆ. ಇದು ಯಾವುದೇ ಒಂದು ಪಕ್ಷದ ವಿರುದ್ಧದ ಹೋರಾಟವಲ್ಲ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್‌, ‘ಎಚ್‌.ಡಿ. ದೇವೇಗೌಡ ಹಾಗೂ ಕುಮಾರ
ಸ್ವಾಮಿ ಅವರು ಮೊಸಳೆ ಕಣ್ಣೀರು ಸುರಿಸುತ್ತಾರೆ. ಇವರು ಸ್ವಾರ್ಥಕ್ಕಾಗಿ ಸೂಟ್‌ಕೇಸ್‌ ರಾಜಕಾರಣ ಮಾಡುತ್ತಾರೆ. ನುಡಿದಂತೆ ನಡೆದುಕೊಳ್ಳಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಲಿ’ ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡರಾದ ಡಾ. ಎ.ಎಚ್‌. ಶಿವಯೋಗಿ ಸ್ವಾಮಿ, ವೈ. ಮಲ್ಲೇಶ್‌, ರಾಜನಹಳ್ಳಿ ಶಿವಕುಮಾರ್‌, ಎಚ್‌.ಎನ್‌. ಶಿವಕುಮಾರ್‌, ಎನ್‌. ರಾಜಶೇಖರ್‌ ಸೇರಿ ಹಲವು ಮುಖಂಡರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬೈಕ್‌ ರ‍್ಯಾಲಿ: ಬೆಳಿಗ್ಗೆ 7ರಿಂದಲೇ ಕಾರ್ಯಕರ್ತರು ನಗರದಲ್ಲಿ ಬೈಕ್‌ ರ‍್ಯಾಲಿ ನಡೆಸಿ, ಅಂಗಡಿಗಳನ್ನು ತೆರೆಯದೇ ಬಂದ್‌ಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಕೆ.ಎಸ್‌.ಆರ್‌.ಟಿ. ಬಸ್‌ ನಿಲ್ದಾಣ, ಹಳೇ ಬಸ್‌ನಿಲ್ದಾಣಕ್ಕೆ ತೆರಳಿ ಬಸ್‌ ಸಂಚಾರವನ್ನು ತಡೆಯಲು ಯತ್ನಿಸಿದರೂ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ.

ಅಶೋಕ ರಸ್ತೆ, ಜಯದೇವ ವೃತ್ತ, ನಿಟುವಳ್ಳಿ ಮುಖ್ಯ ರಸ್ತೆ, ಕೆ.ಟಿ.ಜೆ ನಗರ, ಹದಡಿ ರಸ್ತೆ, ಮಾಮಾಸ್‌ ಜಾಯಿಂಟ್‌ ರಸ್ತೆ, ಗುಂಡಿ ಸರ್ಕಲ್‌ಗೆ ತೆರಳಿ ಅಂಗಡಿಗಳನ್ನು ಮುಚ್ಚುವಂತೆ ಕಾರ್ಯಕರ್ತರು ಮನವಿ ಮಾಡಿದರು. ಶಾಮನೂರು ರಸ್ತೆಯಲ್ಲಿ ರ‍್ಯಾಲಿ ಹೋಗುತ್ತಿದ್ದಾಗ ತಡೆದ ಪೊಲೀಸ್‌ ಅಧಿಕಾರಿಗಳು, ‘ಬೈಕ್‌ ರ‍್ಯಾಲಿ ನಡೆಸಲು ಅನುಮತಿ ನೀಡಬಾರದು ಎಂದು ನಮಗೆ ಪೊಲೀಸ್‌ ಮಹಾನಿರ್ದೇಶಕರಿಂದ ಸೂಚನೆ ಬಂದಿದೆ. ಪಾದಯಾತ್ರೆಯಲ್ಲಿ ಮೆರವಣಿಗೆ ನಡೆಸಿ’ ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಪೊಲೀಸರ ಹಾಗೂ ಪಕ್ಷದ ಮುಖಂಡರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು. ಬಳಿಕ ವಿನೋಬನಗರ ಮಾರ್ಗವಾಗಿ ಹಳೇ ಬಸ್‌ನಿಲ್ದಾಣದಲ್ಲಿ ಬೈಕ್‌ಗಳನ್ನು ತೆಗೆದುಕೊಂಡು ಹೋಗಿ ನಿಲ್ಲಿಸಲು ಪೊಲೀಸರು ಅವಕಾಶ ಮಾಡಿಕೊಟ್ಟರು.

ನಂತರ ಎಸ್‌.ಎ. ರವೀಂದ್ರನಾಥ್‌ ನೇತೃತ್ವದಲ್ಲಿ ಕಾರ್ಯಕರ್ತರು ಮಂಡಿಪೇಟೆ, ಚಾಮರಾಜ ಪೇಟೆ ಕಡೆಗೆ ಪಾದಯಾತ್ರೆಯಲ್ಲಿ ತೆರಳಿ ಅಂಗಡಿಗಳನ್ನು ತೆರೆಯದಂತೆ ಮನವಿ ಮಾಡಿದರು. ಚಾಮರಾಜಪೇಟೆಯಲ್ಲಿ ಅಂಗಡಿ ಮುಚ್ಚಿಸುವ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರೊಂದಿಗೆ ಉದ್ವೇಗದಿಂದ ಮಾತನಾಡಿದ ಶಾಮನೂರು ಲಿಂಗರಾಜ್‌ ಅವರನ್ನು ಪೊಲೀಸರು ವಶಕ್ಕೆ ಪಡೆದರು.

ಸಾಮಾನ್ಯವಾಗಿ ಬೆಳಿಗ್ಗೆ 10.30ರೊಳಗೆ ಅಂಗಡಿಗಳನ್ನು ತೆರೆಯಲಾಗುತ್ತಿತ್ತು. ಆದರೆ, ಬಂದ್‌ ಹಿನ್ನೆಲೆಯಲ್ಲಿ ಬೆಳಿಗ್ಗೆ 11.30ರ ನಂತರ ನಗರದ ಬಹುತೇಕ ಅಂಗಡಿಗಳು ಬಾಗಿಲು ತೆರೆದು ಎಂದಿನಂತೆ ವಹಿವಾಟು ನಡೆಸಿದವು.

ದೂರ ಉಳಿದ ರೈತ ಸಂಘ

ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯಿಸಿ ಬಂದ್‌ಗೆ ಬಿಜೆಪಿ ಕರೆ ನೀಡಿದ್ದರೂ, ರೈತ ಸಂಘದವರು ಹೋರಾಟದಿಂದ ದೂರ ಉಳಿದರು.

ಸಾಲ ಮನ್ನಾ ವಿಚಾರಕ್ಕಾಗಿ ಹಲವು ವರ್ಷಗಳಿಂದ ರೈತ ಸಂಘಟನೆಗಳು ಹೋರಾಟ ನಡೆಸುತ್ತ ಬಂದಿದ್ದರೂ, ಈಗ ಬಂದ್‌ಗೆ ಕೈಜೋಡಿಸಲಿಲ್ಲ. ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ರಾಜಕೀಯ ಕಾರಣಕ್ಕೆ ಬಂದ್‌ ಕರೆ ನೀಡಲಾಗಿದೆ ಎಂಬುದು ರೈತ ಸಂಘದ ಮುಖಂಡರ ಆಕ್ಷೇಪವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.