ADVERTISEMENT

ತಮಿಳುನಾಡಿಗೆ ಕಾವೇರಿ ನೀರು; ಅಣಕು ಶವಯಾತ್ರೆ ಮೂಲಕ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 5:55 IST
Last Updated 6 ಅಕ್ಟೋಬರ್ 2012, 5:55 IST

ದಾವಣಗೆರೆ: ಜಯದೇವ ವೃತ್ತದಿಂದ ಹೊರಟ ಅಲಂಕೃತ `ಮುಕ್ತಿವಾಹಿನಿ~ (ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸುವ ವಾಹನ). ಗುರುಬಸವಲಿಂಗ ನಿನಗೆ ಶರಣು... ಘೋಷ. ವಾಹನದ ಮುಂದೆ  ಹಲಗೆ ವಾದನ... ಜತೆಗೆ ನೂರಾರು ಜನ.

- ನಗರದಲ್ಲಿ ಯಾರೋ ಗಣ್ಯರು ನಿಧನರಾದರು ಎಂದೇ ಭಾವಿಸಿದ ಬಹುತೇಕ ಜನತೆ. ಯೋಚಿಸಿದಂತೆ ಅದರೊಳಗಿದ್ದದ್ದು ಮೂರು `ಮೃತದೇಹ~. ಪ್ರಧಾನಿ ಮನಮೋಹನ್ ಸಿಂಗ್, ರಾಜ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ತಮಿಳುನಾಡು ಸಿಎಂ ಜಯಲಲಿತಾ!.

ಸೇರಿದವರು `ಅಯ್ಯೋ~ ಎಂದರು. ಬಾಯಿ ಬಡಿದುಕೊಂಡರು. ಕೊನೆಗೂ `ಶವ~ಗಳಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ `ಮುಕ್ತಿ~ ಸಿಕ್ಕಿತು. ಅಲ್ಲಿಯೇ ದಹನ ಮಾಡಿ. ಸ್ಥಳದಲ್ಲೇ ಅಡುಗೆ ಮಾಡಿ ಊಟ ಬಡಿಸಲಾಯಿತು.

- ಇದು ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಿರುವುದನ್ನು ಪ್ರತಿಭಟಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ಹಾಗೂ ವಿವಿಧ ಪ್ರಗತಿಪರ  ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ನಡೆದ `ಅಣಕು ಶವಯಾತ್ರೆ~, ಪ್ರತಿಭಟನೆಯ ಸನ್ನಿವೇಶ.

ಅಧಿಕಾರ ಹೋದರೂ ಕಾವೇರಿ ನೀರು ಬಿಡುವುದಿಲ್ಲ ಎಂದು ಹೇಳಿದ ಮುಖ್ಯಮಂತ್ರಿ ನಾಡಿಗೆ ದ್ರೋಹ ಎಸಗಿದ್ದಾರೆ. ಪ್ರಧಾನಿಯೂ ಸಹ ತಮಿಳುನಾಡಿನ ಪರ ವಹಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ಮುಖ್ಯಮಂತ್ರಿ ತಕ್ಷಣ ರಾಜೀನಾಮೆ ನೀಡಬೇಕು. ಒಂದು ವೇಳೆ ಇದೇ ರೀತಿ ನೀರು ಬಿಡುವುದು ಮುಂದುವರಿಸಿದಲ್ಲಿ ಕರ್ನಾಟಕವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಲು ಹೋರಾಟ ನಡೆಸಬೇಕಾದೀತು. ಕಾಲು ಕೆರೆದು ಜಗಳಕ್ಕೆ ಮುಂದಾಗುವ ಜಯಲಲಿತಾ ಇನ್ನು ಮುಂದೆ ಕರ್ನಾಟಕಕ್ಕೆ ಕಾಲಿಟ್ಟರೆ ತಕ್ಕಪಾಠ ಕಲಿಸುವುದಾಗಿ ಕಾರ್ಯಕರ್ತರು ಎಚ್ಚರಿಸಿದರು.

ರಾಜ್ಯದಾದ್ಯಂತ ಹೋರಾಟ ನಡೆಯುತ್ತಿದ್ದರೂ ಬೆಂಗಳೂರಿನ ಜನತೆ ಸುಮ್ಮನಿರುವುದು ಸಲ್ಲದು. ಅವರೂ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಜೆಡಿಎಸ್, ಕಿಚ್ಚ ಸುದೀಪ್ ಸೇನಾ ಸಮಿತಿ, ಜಿಲ್ಲಾ ಅಖಿಲ ಕರ್ನಾಟಕ ಶಿವರಾಜ್‌ಕುಮಾರ್ ಅಭಿಮಾನಿಗಳ ಸಂಘ, ಎಲ್.ಜಿ. ಹಾವನೂರು ನಾಯಕ ಹೋರಾಟ ಸಮಿತಿ, ಮುಕ್ತಿವಾಹಿನಿ ಕಬ್ಬೂರು ಟ್ರಸ್ಟ್, ಕರುನಾಡು ಕನ್ನಡ ಸೇನೆ, ರೈತ ಸಂಘ ಮತ್ತು ಹಸಿರು ಸೇನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್. ಮೂರ್ತಿ ಬಣ), ಫುಟ್‌ಪಾತ್ ವ್ಯಾಪಾರಿಗಳ ಸಂಘ, ಕನ್ನಡ ಚಳವಳಿ ಕೇಂದ್ರ ಸಮಿತಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.

ಕರವೇ ಜಿಲ್ಲಾ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ರಾಮೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ವೀಣಾ  ಮಂಜುನಾಥ್, ಜೆಡಿಎಸ್ ಜಿಲ್ಲಾ ಘಟಕದ  ಅಧ್ಯಕ್ಷ  ಟಿ. ದಾಸಕರಿಯಪ್ಪ, ಕಾರ್ಯಾಧ್ಯಕ್ಷ ಬಿ.ಎಂ. ಸತೀಶ್, ನಾಯಕ ಹೋರಾಟ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಕನ್ನಡ ಚಳವಳಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಬಂಡೀಕರ್, ಕುಂದುವಾಡ ಮಂಜುನಾಥ್, ಎಚ್.ಬಿ. ದುರುಗೇಶ್, ಕೆ.ಟಿ. ಗೋಪಾಲಗೌಡ, ಹುಚ್ಚವ್ವನಹಳ್ಳಿ ಅಜ್ಜಯ್ಯ, ಸುರೇಶ್, ಶಂಕರಾನಂದ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.