ADVERTISEMENT

ತೋಳಹುಣಸೆ: ಅಂಡರ್‌ ಪಾಸ್‌ ನಿರ್ಮಾಣಕ್ಕೆ ಗ್ರಾಮಸ್ಥರ ಒತ್ತಾಯ

ತೋಳಹುಣಸೆ ಕೆಳಗಿನಹಟ್ಟಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 7:14 IST
Last Updated 17 ಜೂನ್ 2018, 7:14 IST

ದಾವಣಗೆರೆ: ತಾಲ್ಲೂಕಿನ ತೋಳಹುಣಸೆಯ ಕೆಳಗಿನಹಟ್ಟಿ ತಾಂಡಾದಲ್ಲಿ ಬೀರೂರು–ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಭಾರಿ ವಾಹನಗಳು ಸಂಚರಿಸಲು ಅಂಡರ್‌ ಪಾಸ್‌ ನಿರ್ಮಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಳಲನ್ನು ತೋಡಿಕೊಂಡ ಗ್ರಾಮದ ಮುಖಂಡ ಜಿ.ವಿ. ಮಂಜುನಾಥ, ‘ಗ್ರಾಮದಲ್ಲಿ ಸುಮಾರು 2,000 ಜನಸಂಖ್ಯೆ ಇದೆ. ಮೇಲ್ಸೇತುವೆಗೆ ಅಡ್ಡವಾಗಿ ಸ್ಲ್ಯಾಬ್‌ ಹಾಕಿರುವುದರಿಂದ ಕೆಳಗಿನಹಟ್ಟಿ ತಾಂಡಾ ಎರಡು ಭಾಗವಾಗಿದೆ. ಪ್ರತಿ ತಿಂಗಳು ಗ್ರಾಮಕ್ಕೆ ಬರುವ ಪಡಿತರದ ಲಾರಿಯೂ ಅಂಗಡಿ ಬಳಿ ಬರಲು ಆಗದ ಸ್ಥಿತಿ ನಿರ್ಮಾಣಗೊಂಡಿದೆ. ಸುಮಾರು 200 ವರ್ಷಗಳ ಹಳೆಯ ಸೇವಾಲಾಲ್‌ ದೇವಸ್ಥಾನವಿದ್ದು, ಅದಕ್ಕೆ ವಾಹನದಲ್ಲಿ ತೆರಳಲು ಆಗುತ್ತಿಲ್ಲ. ಗ್ರಾಮದಲ್ಲಿ ಸುಮಾರು 30 ಟ್ರ್ಯಾಕ್ಟರ್‌, ಲಾರಿಗಳಿದ್ದು, ಅವುಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ’ ಎಂದು ದೂರಿದರು.

ಪಿಲ್ಲರ್‌ ಹಾಕಿ ವಾಹನ ಸಂಚರಿಸುವಂತೆ ಅಂಡರ್‌ ಪಾಸ್‌ ಮಾಡುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆವು. ಜಿಲ್ಲಾಧಿಕಾರಿ ಸಹ ಬಂದು ಸ್ಥಳ ಪರಿಶೀಲಿಸಿ ವಾಹನ ಸಂಚರಿಸಲು ಅವಕಾಶ ಕಲ್ಪಿಸಿಕೊಡುವಂತೆ ಸೂಚಿಸಿದ್ದರು. 2017ರ ಡಿಸೆಂಬರ್‌ 27ರಂದು ಗ್ರಾಮ ಪಂಚಾಯಿತಿಯಲ್ಲಿ ಠರಾವು ಪಾಸ್‌ ಮಾಡಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕೋರಲಾಗಿತ್ತು ಎಂದರು. ಆದರೆ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಅಧಿಕಾರಿಗಳು ತರಾತುರಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ ಎಂದು ಆರೋಪಿಸಿದರು.

ADVERTISEMENT

‘ನಿಷೇಧಾಜ್ಞೆ ಹೇರಿ, ಪೊಲೀಸ್‌ ಬಂದೋಬಸ್ತ್‌ನಲ್ಲಿ ಹಗಲು–ರಾತ್ರಿ ಕೆಲಸ ಮಾಡುತ್ತಿದ್ದಾರೆ. ಊರ ಹೊರಗೆ ಅಂಡರ್‌ಪಾಸ್‌ ಮಾಡಿದ್ದು, ಅದರ ಪ್ರಯೋಜನ ನಮಗೆ ಸಿಗುತ್ತಿಲ್ಲ. ಊರಿನ ನಡುವೆ ಅಂಡರ್‌ಪಾಸ್‌ ನಿರ್ಮಿಸಬೇಕು ಎಂಬ ಬೇಡಿಕೆಗೆ ಅಧಿಕಾರಿಗಳು ಸ್ಪಂದಿಸದೇ ಇರುವುದರಿಂದ ಸಿವಿಲ್‌ ನ್ಯಾಯಾಲಯದಲ್ಲಿ ಈ ಬಗ್ಗೆ ಮೊಕದ್ದಮೆ ದಾಖಲಿಸಿದ್ದೇವೆ. ಹೈಕೋರ್ಟ್‌ನಿಂದಲೂ ತಡೆಯಾಜ್ಞೆ ತರಲು ಯತ್ನಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಲೋಚನಮ್ಮ, ಉಪಾಧ್ಯಕ್ಷೆ ನಿರ್ಮಲಾ ನಾಗೇಂದ್ರ ನಾಯ್ಕ, ಸದಸ್ಯೆ ಜಾಲಿಬಾಯಿ, ಮುಖಂಡರಾದ ಮಲ್ಲಾನಾಯ್ಕ, ಹನುಮಂತ ನಾಯ್ಕ, ಲಕ್ಷ್ಮಣ ನಾಯ್ಕ, ಕುಮಾರ್‌ ನಾಯ್ಕ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.