ADVERTISEMENT

ದಾಖಲೆ ಮೊತ್ತಕ್ಕೆ ಸಂತೆ ಹರಾಜು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 10:42 IST
Last Updated 8 ಮಾರ್ಚ್ 2018, 10:42 IST

ಹರಿಹರ: ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ 2017-18ನೇ ಸಾಲಿನ ನಗರವ್ಯಾಪ್ತಿಯಲ್ಲಿ ದಿನವಹಿ ಮಾರುಕಟ್ಟೆ ಹಾಗೂ ಸಂತೆ ಹರಾಜು ₹ 25.32 ಲಕ್ಷ ದಾಖಲೆ ಬಿಡ್‍ ಮೊತ್ತ ಹರಾಜಾಗುವ ಮೂಲಕ ಖಲೀಲ್‍ ಸಾಬ್‍ ಅವರ ಪಾಲಾಯಿತು.

ಹರಾಜು ಪ್ರಕ್ರಿಯೆಗೂ 29 ಜನ ಬಿಡ್‍ದಾರರು ಭಾಗವಹಿಸಿದ್ದರು. ಕಳೆದ ಸಾಲಿನಲ್ಲಿ ₹ 18.15 ಲಕ್ಷಕ್ಕೆ ಹರಾಜಾಗಿತ್ತು. ಈ ಬಾರಿ ₹ 25.32 ಲಕ್ಷಗಳ ದಾಖಲೆ ಮೊತ್ತಕ್ಕೆ ಹರಾಜಾಗುವ ಮೂಲಕ ನಗರಸಭೆಗೆ ಹೆಚ್ಚುವರಿ ₹ 7.17 ಲಕ್ಷ ಆದಾಯ ನೀಡಿದೆ.

ಹರಾಜಿಗೂ ಮುನ್ನ, ಬಿಡ್ ಮೊತ್ತ ಪಾವತಿಸಲು ಬಿಡ್‍ದಾರರು ಹದಿನೈದು ದಿನಗಳ ಅವಕಾಶ ನೀಡುವಂತೆ ಮನವಿ ಸಲ್ಲಿಸಿದರು.

ADVERTISEMENT

ಪೌರಾಯುಕ್ತೆ ಎಸ್‍. ಲಕ್ಷ್ಮೀ ಮಾತನಾಡಿ, ‘ಹರಾಜು ಪ್ರಕ್ರಿಯೆಯ ಅಂತಿಮ ಅನುಮೋದನೆಯನ್ನು ಜಿಲ್ಲಾಧಿಕಾರಿಗಳಿಂದ ಪಡೆಯಬೇಕು. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಹಾಗೂ ಏಪ್ರಿಲ್‌ 1ಕ್ಕೆ ಯಶಸ್ವಿ ಬಿಡ್‍ದಾರರಿಗೆ ಕಾರ್ಯಾರಂಭ ಪ್ರತಿ ನೀಡಲು ಸಮಯದ ಅಗತ್ಯವಿದೆ. ಹರಾಜು ಪ್ರಕ್ರಿಯೆ ಮುಗಿದ 4 ದಿನಗಳಲ್ಲಿ ಅಂತಿಮ ಮೊತ್ತ ಪಾವತಿಸಬೇಕು’ ಎಂದು ಸೂಚಿಸಿದರು.

ನಗರಸಭೆ ಅಧ್ಯಕ್ಷೆ ಆರ್‍. ಸುಜಾತಾ, ನಗರಸಭೆ ಸದಸ್ಯರಾದ ಶಂಕರ್‍ ಖಟಾವ್ಕರ್‍, ಪಿ.ಎನ್‍. ವಿರೂಪಾಕ್ಷ, ಜಹೀರ್‍ ಅಲ್ತಮಷ್‍ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.