ADVERTISEMENT

ದ್ವಿದಳ ಧಾನ್ಯ ಬೆಳೆಯಲು ಸಲಹೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 10:45 IST
Last Updated 19 ಜೂನ್ 2011, 10:45 IST

ಜಗಳೂರು: ಸಾಂಪ್ರದಾಯಿಕ ಬೆಳೆಗಳ ಬದಲಿಗೆ ಹೆಚ್ಚು ಲಾಭ ತರುವ ದ್ವಿದಳ ಧಾನ್ಯ ಬೆಳೆಗಳಿಗೆ ರೈತರು ಆದ್ಯತೆ ನೀಡಬೇಕು ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಪಟ್ಟಣದಲ್ಲಿ ಶನಿವಾರ ನಡೆದ  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭೆಯಲ್ಲಿ ಭಾಗವಹಿಸಿ  ಅವರು ಮಾತನಾಡಿದರು.

ಮೆಕ್ಕೆಜೋಳ ಮುಂತಾದ ಬೆಳೆಗಿಂತ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಇರುವ ದ್ವಿದಳ ಧಾನ್ಯಗಳನ್ನು ಬೆಳೆದಲ್ಲಿ ರೈತರು ಲಾಭ ಗಳಿಸಲು ಸಾಧ್ಯ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ದ್ವಿದಳ ಬೆಳೆಗಳ ಬಿತ್ತನೆ ಬೀಜವನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ  ಎಂದು ಅವರು ಸ್ಪಷ್ಟಪಡಿಸಿದರು.

ತಾಲ್ಲೂಕಿನಲ್ಲಿ ನೂತನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದೆ. ಕೇವಲ ಲಾಭ ಗಳಿಕೆಯೇ ಮುಖ್ಯವಲ್ಲ. ರೈತರು ಸುಖ ಮತ್ತು ಸಮೃದ್ಧಿಯಿಂದ ಜೀವನ ನಡೆಸುವಂತೆ ಮಾಡುವುದು ಸಮಿತಿಯ ಮುಖ್ಯ ಗುರಿಯಾಗಬೇಕು. ದೇಶಕ್ಕೆ ಅಗತ್ಯವಾಗಿರುವ ಆಹಾರ ಉತ್ಪಾದನೆಯಲ್ಲಿ ನಿರತರಾಗಿರುವ ಯಾವುದೇ ರೈತನ ಸಾವು ಒಂದು ದೊಡ್ಡ ನಷ್ಟ. ಮೃತರ ಕುಟುಂಬಕ್ಕೆ ಪರಿಹಾರ ನೀಡುವುದರಿಂದ ನಷ್ಟಭರ್ತಿ ಮಾಡಲು ಸಾಧ್ಯವಿಲ್ಲ ಎಂದರು.

ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದ ಸಮಯದಲ್ಲಿ ಮೃತಪಟ್ಟ ತಾಲ್ಲೂಕಿನ ಉಜ್ಜಪ್ಪ ಒಡೆಯರಹಳ್ಳಿ, ಕೆಚ್ಚೇನಹಳ್ಳಿ, ಗೌರಮ್ಮನಹಳ್ಳಿ ಹಾಗೂ ಸಿದ್ದಯ್ಯನಕೋಟೆ ಗ್ರಾಮದ ನಾಲ್ವರು ರೈತರ ಕುಟುಂಬದವರಿಗೆ ತಲಾ ್ಙ 50 ಸಾವಿರ ಪರಿಹಾರದ ಚೆಕ್ ವಿತರಿಸಲಾಯಿತು.

 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ರೇವಣಸಿದ್ದಪ್ಪ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಜಿ.ಪಂ. ಸದಸ್ಯ ಎಚ್. ನಾಗರಾಜ್, ಎಪಿಎಂಸಿ ಸದಸ್ಯರಾದ ಡಿ. ವೆಂಕಟೇಶ್, ಬಸವರಾಜ್, ಷಂಷೀರ್ ಅಹ್ಮದ್, ಬಸವರಾಜಪ್ಪ ಮತ್ತು ಇತರರು ಹಾಜರ‌್ದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.