ADVERTISEMENT

ನಕಲಿ ಸ್ವಾಮೀಜಿಗಳ ಹಾವಳಿ: ಕಳವಳ

ಮಲೇಬೆನ್ನೂರು: ವೃಷಭಪುರಿ ಸಂಸ್ಥಾನದಲ್ಲಿ ಕಾರ್ತೀಕ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 7:42 IST
Last Updated 13 ಡಿಸೆಂಬರ್ 2013, 7:42 IST

ಮಲೇಬೆನ್ನೂರು:  ನಕಲಿ ಸ್ವಾಮಿಗಳು, ಭವಿಷ್ಯ ಹೇಳುವವರ ಹಾವಳಿ ಹೆಚ್ಚಾಗಿ ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ ಎಂದು ಹರಿಹರದ ಪಂಚಮಸಾಲಿ ಗುರುಪೀಠದ ಸಿದ್ಧಲಿಂಗ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಸಮೀಪದ ನಂದಿಗುಡಿ ವೃಷಭಪುರಿ ಸಂಸ್ಥಾನದಲ್ಲಿ ಗುರುವಾರ ಆದಿಗುರು ಕೆಂಚವೀರೇಶ್ವರ ಶಿವಯೋಗಿಗಳ ಸಂಸ್ಮರಣಾ ದಿನ, 4ನೇ ವರ್ಷದ ಪೀಠಾರೋಹಣ, ಬಸವೇಶ್ವರ ಕಾರ್ತೀಕ ದೀಪೋತ್ಸವದ  ಧರ್ಮಸಭೆಯಲ್ಲಿ ಅವರು ಮಾತನಾಡಿದರು.

ವೀರಶೈವ– ಲಿಂಗಾಯತ ವಿವಾದದಿಂದ ಸಮಾಜಕ್ಕೆ ಹಿನ್ನಡೆಯಾಗುತ್ತಿದೆ. ಧರ್ಮಕ್ಕೆ ಕೊಡಲಿಪೆಟ್ಟು ಬೀಳಬಾರದು. ಧಾರ್ಮಿಕ ಮುಖಂಡರು ಸಮಸ್ಯೆ ಪರಿಹರಿಸಿ ಎಂದು ಮಾಜಿ ಶಾಸಕ ಬಿ.ಪಿ. ಹರೀಶ್‌ ಮನವಿ ಮಾಡಿದರು.

ಕೆಂಚವೀರೇಶ್ವರರ ತತ್ವ ಆದರ್ಶ ಪಾಲಿಸಿ ಮುಂದೆ ಬರುವಂತೆ ಹೊನ್ನಾಳಿ ಕೇತ್ರದ ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಶುಭ ಕೋರಿದರು.

ಮಠಗಳಿಂದ ಜನತೆಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಶಾಸಕ ಎಚ್‌.ಎಸ್‌.ಶಿವಶಂಕರ್‌ ಹೇಳಿದರು.
ವೀರಶೈವ ಮಠದ ವಿದ್ಯಾಕೇಂದ್ರಗಳಲ್ಲಿ ಮೂಲ ವಿಜ್ಞಾನ ವಿಷಯಕ್ಕೆ ಒತ್ತು ನೀಡಿ ವಿಜ್ಞಾನಿಗಳನ್ನು ರೂಪಿಸಿ ಎಂದು ಸನ್ಮಾನಿತ ಅಣು ವಿಜ್ಞಾನಿ ಡಾ.ಷಣ್ಮುಖಪ್ಪ ಬಸಪ್ಪ ಕಾಗಿನೆಲ್ಲಿ ಕೋರಿದರು.

ಮ.ನಾ. ಬೊಮ್ಮಲಿಂಗಪ್ಪ ಉಪನ್ಯಾಸ ನೀಡಿದರು. ಗುಲ್ಬರ್ಗದ ರೇವಣಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು.
ಉಪನ್ಯಾಸಕ ಹನುಮಗೌಡ ಕೆಂಚವೀರೇಶ್ವರರ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ವೃಷಭಪುರಿ ಸಂಸ್ಥಾನದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಭೆ ನೇತೃತ್ವವಹಿಸಿದ್ದರು.
ಬ್ರಾಹ್ಮಿ ಮುಹೂರ್ತದಲ್ಲಿ ವೇದಘೋಷದ ಮಧ್ಯೆ ಆದಿಗುರು ಕೆಂಚವೀರೇಶ್ವರರ ಲೋಹದ ಉತ್ಸವಮೂರ್ತಿ ಅನಾವರಣ ಮಾಡಲಾಯಿತು.

ರಾಜ್ಯದ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆ ಭಕ್ತರು ಆಗಮಿಸಿದ್ದರು. ಸಂಜೆ ಕಾರ್ತೀಕೋತ್ಸವ ವೈಭವದಿಂದ ಜರುಗಿತು. 

ಹರಿಹರದ ಎಸೆತ–ಹೊನ್ನಾಳಿ ಹೊಡೆತ
ರಾಜ್ಯದ ಮಠಮಾನ್ಯಗಳಿಗೆ ಮನಬಂದಂತೆ ಅನುದಾನ ನೀಡಿದ ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರದಲ್ಲಿ ಸಿದ್ಧರಾಮ ಜಯಂತಿ ಮಾಡಿ ನೊಳಂಬ ಸಮಾಜದ ಮತ ಪಡೆದು ಗೆದ್ದು ಬಂದರು.

ನೊಳಂಬ ಸಮಾಜದ ನಂದಿಗುಡಿ ವೃಷಭಪುರಿ ಸಂಸ್ಥಾನಕ್ಕೆ ಮಾತ್ರ ಏಕೆ ಅನುದಾನ ನೀಡಲಿಲ್ಲ ಎಂದು ಶಾಸಕ ಎಚ್‌.ಎಸ್‌. ಶಿವಶಂಕರ್‌ ಬಿಎಸ್‌ವೈ ಇಂದು ಉದ್ಘಾಟನೆಗೆ ಬಂದಿದ್ದರೆ ಪ್ರಶ್ನಿಸುತ್ತಿದ್ದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಮಠ ಮಾನ್ಯಗಳಿಗೆ ಹಣ ನೀಡುತ್ತಿಲ್ಲ, ರಸ್ತೆ ಹಾಳಾಗಿದ್ದರೂ ದುರಸ್ತಿ ಮಾಡಲು ಹಣ ಬಿಡುಗಡೆ ಮಾಡಿಲ್ಲ ಎಂದು ದೂರಿದರು.

‘ನಂದಿಗುಡಿ ಮಠದ ಅಭಿವೃದ್ದಿಗೆ, ಸಮುದಾಯ ಭವನ, ಕುರ್ಚಿ ಹಾಗೂ ತುಂಗಭದ್ರಾ ನದಿ ಸೇತುವೆ ನಿರ್ಮಾಣಕ್ಕೆ ತಮ್ಮ ತಂದೆ ಮಾಜಿ ಸಚಿವ ದಿ. ಎಚ್‌ ಶಿವಪ್ಪ  ಅನುದಾನ ನೀಡಿದ್ದರು’ ಎಂದು ನೆನಪಿಸಿದರು.

ಮಠಕ್ಕ ₨10 ಲಕ್ಷ ವಿಶೇಷ ಅನುದಾನ ನೀಡುವುದಾಗಿ ಭರವಸೆ ನೀಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಸಲು ಜನತೆ ಸಹಕರಿಸಿದರು ಎಂದು  ರಾಜಕೀಯ ಬಾಣ ಬಿಟ್ಟರು.

ಇದಕ್ಕ ತಕ್ಷಣ ಪ್ರತಿಕ್ರಿಯೆ ನೀಡಿದ ಹೊನ್ನಾಳಿ ತಾಲ್ಲೂಕು ಕೆಜೆಪಿ ಅಧ್ಯಕ್ಷ ಶಾಂತರಾಜ್‌ ಪಾಟೀಲ್‌ ಇಂದು ತಾವೆ ಉದ್ಘಾಟಿಸಿದ ಸಮುದಾಯ ಭವನ ನಿರ್ಮಾಣಕ್ಕೆ ಬಿಎಸ್‌ವೈ ₨ 50 ಲಕ್ಷ ವಿಶೇಷ ಅನುದಾನ ನೀಡಿದ್ದರು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.