ADVERTISEMENT

ನಗರದ ವಾರ್ತೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 9:06 IST
Last Updated 26 ಏಪ್ರಿಲ್ 2013, 9:06 IST

ಬಿಐಇಟಿ: ಇಂದು `ರೋಬೋ ಫುಟ್ಬಾಲ್'
ನಗರದ ಬಿಐಇಟಿ ಕ್ಯಾಂಪಸ್‌ನಲ್ಲಿ ಏ. 26ರಿಂದ ಎರಡು ದಿನಗಳ ರಾಷ್ಟ್ರಮಟ್ಟದ ತಾಂತ್ರಿಕ ಉತ್ಸವ ಆಯೋಜಿಸಲಾಗಿದೆ.ಪ್ರಬಂಧ ಮಂಡನೆ ಸೇರಿದಂತೆ ವಿವಿಧ ಚಟುವಟಿಕೆಗಳು ಉತ್ಸವದಲ್ಲಿ ನಡೆಯಲಿವೆ. ರೋಬೋ ಫುಟ್ಬಾಲ್ ಪಂದ್ಯ ಆಯೋಜನೆ ವಿಶೇಷವಾಗಿದೆ. ವಿವಿಧ ಮಾದರಿಯ ರೋಬೋಗಳು ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳಲಿವೆ.

ತಾಂತ್ರಿಕ ಗೋಷ್ಠಿಗಳು ಏ. 26ರಂದು ಬೆಳಿಗ್ಗೆ 9ರಿಂದ ಆರಂಭವಾಗಲಿವೆ. ಇದೇ ವೇಳೆ, ರೋಬೋ ಫುಟ್ಬಾಲ್ ಪಂದ್ಯವೂ ಉದ್ಘಾಟನೆಗೊಳ್ಳಲಿದೆ. ಇದಕ್ಕಾಗಿ ವಿಶೇಷವಾಗಿ ಮೈದಾನ ಸಿದ್ಧಪಡಿಸಲಾಗಿದೆ. ವೈರ್ ಮತ್ತು ವೈರ್‌ಲೆಸ್ ನಿಯಂತ್ರಣದ ರೋಬೋಗಳು ಪ್ರದರ್ಶನ ನೀಡಲಿವೆ. ಮೈಸೂರಿನ ವೃತ್ತಿಪರ ಬೈಕ್ ಸವಾರರು, ಸಾಹಸ ಕಾರ್ಯಕ್ರಮ ನೀಡುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಕ್ರಂ ಬಾಷಗೆ ಪ್ರಶಸ್ತಿ
ಹರಿಯಾಣದ ಸೋನಿಪತ್ ನಗರದಲ್ಲಿ ಈಚೆಗೆ ನಡೆದ 2ನೇ ಪುರುಷರ ಮತ್ತು ಮಹಿಳೆಯರ ಮಾಸ್ಟರ್ಸ್‌ ಅಖಿಲ ಭಾರತ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಕರ್ನಾಟಕ ಪ್ರತಿನಿಧಿಸಿದ್ದ ದಾವಣಗೆರೆಯ ಡಿಎಆರ್‌ನ ಹೆಡ್ ಕಾನ್‌ಸ್ಟೆಬಲ್, ಬೀರೇಶ್ವರ ವ್ಯಾಯಾಮ ಶಾಲೆಯ ಕ್ರೀಡಾಪಟು ಅಕ್ರಂ ಬಾಷ ಚಿನ್ನದ ಪದಕ ಪಡೆದು `ಸೂಪರ್ ಬೆಂಚ್ ಪ್ರೆಸರ್ ಆಫ್ ಇಂಡಿಯಾ (ಮಾಸ್ಟರ್)' ಪ್ರಶಸ್ತಿ ಗಳಿಸಿದ್ದಾರೆ.

ಸ್ಪರ್ಧೆಯಲ್ಲಿ 380 ಮಂದಿ ಪಾಲ್ಗೊಂಡಿದ್ದರು. 93 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಉತ್ತಮ ಸಾಧನೆ ತೋರಿದ ಅಕ್ರಂ ಬಾಷ, ರಾಷ್ಟ್ರೀಯ ಪವರ್‌ಲಿಫ್ಟರ್‌ಗಳ ಒಕ್ಕೂಟದ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ.

ಅವರನ್ನು ಪೂರ್ವ ವಲಯ ಐಜಿಪಿ ಸಂಜಯ್ ಸಹಾಯ್, ಎಸ್ಪಿ ರವಿ ಚನ್ನವಣ್ಣವರ, ಇನ್‌ಸ್ಪೆಕ್ಟರ್ ಕುಮಾರಸ್ವಾಮಿ, ಸಬ್ ಇನ್‌ಸ್ಪೆಕ್ಟರ್ ದಿಲೀಪ್, ಬೀರೇಶ್ವರ ವ್ಯಾಯಾಮ ಶಾಲೆಯ ಕೆ. ಮಲ್ಲಪ್ಪ ಹಾಗೂ ಶಾಲೆಯ ಕ್ರೀಡಾಪಟುಗಳು ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.