ADVERTISEMENT

ನರೇಗಾ ಪ್ರಗತಿ ಕುಂಠಿತ: ಪಿಡಿಒಗಳಿಗೆ ಸಿಇಒ ಅಶ್ವತಿ ತರಾಟೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 5:18 IST
Last Updated 8 ಜುಲೈ 2017, 5:18 IST

ಹರಪನಹಳ್ಳಿ: ಸ್ವಚ್ಛ ಭಾರತ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ತಾಲ್ಲೂಕಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧನೆಯಾಗದೇ ಇರುವುದಕ್ಕೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಅಶ್ವತಿ ಅವರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ತಾಲ್ಲೂಕು ಪಂಚಾಯ್ತಿಯ ರಾಜೀವ್‌ಗಾಂಧಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿ ಶೀಲನಾ  ಸಭೆಯಲ್ಲಿ  ಮಾತನಾಡಿದರು. ‘ನರೇಗಾ ಕಾರ್ಮಿಕರಿಗೆ ನಿಗದಿತ ಸಮಯದಲ್ಲಿ ಕೂಲಿ ಸಂದಾಯವಾಗಿಲ್ಲ. ಯೋಜನೆ ಅನುಷ್ಠಾನಕ್ಕೆ ಸಮರ್ಪಕವಾಗಿ ಆಗುತ್ತಿಲ್ಲ. ಇನ್ನೂ ಶೇ 90ರಷ್ಟು ಕೆಲಸ ನಡೆಯಬೇಕಾಗಿದೆ. ನಿಗದಿತ ಪ್ರಮಾಣದಷ್ಟು ಮಾನವ ದಿನಗಳನ್ನು ಸೃಷ್ಟಿಸದೇ ಇದ್ದರೆ ವೇತನ ತಡೆ ಹಿಡಿಯಲಾಗುವುದು’ ಎಂದು ಅಶ್ವತಿ ಪಿಡಿಒಗಳಿಗೆ ಎಚ್ಚರಿಕೆ ನೀಡಿದರು.

ತಾಲ್ಲೂಕಿನಲ್ಲಿ 24 ಸಾವಿರ ಶೌಚಾಲಯ ನಿರ್ಮಿಸುವ ಗುರಿ ಹೊಂದ ಲಾಗಿದೆ. ಕೇವಲ 2,058 ಶೌಚಾಲಯ ಪೂರ್ಣಗೊಂಡಿದೆ. ಮಾರ್ಚ್‌ ಅಂತ್ಯದೊಳಗೆ ಗುರಿ ಮುಟ್ಟಬೇಕು ಎಂದು ಆದೇಶಿಸಿದರು.

ADVERTISEMENT

ನಂದಿಬೇವೂರು, ನಿಟ್ಟೂರು, ಮತ್ತಿಹಳ್ಳಿ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ 4 ಲಕ್ಷ ಮಾನವ ದಿನಗಳ ಕೆಲಸ ಕೊಡಬೇಕಾಗಿದೆ. ಇದುವರೆಗೆ ಕೇವಲ 1.6 ಲಕ್ಷ ಮಾನವ ದಿನಗಳ ಕೆಲಸ ನೀಡಲಾಗಿದೆ ಎಂದು ಯೋಜನಾಧಿಕಾರಿ ರಂಗಸ್ವಾಮಿ ಸೂಚಿಸಿದರು.

ಫಲಾನುಭವಿಗಳನ್ನು ಆಯ್ಕೆ ಮಾಡಿ ಜಿಲ್ಲಾ ಪಂಚಾಯ್ತಿ ಅನುಮೋದನೆ ಪಡೆಯಲು ಪಟ್ಟಿಯನ್ನು ಕಳುಹಿಸಿಕೊಡಿ ಎಂದು ಅವರು ಆದೇಶಿಸಿದರು. ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಷಡಕ್ಷರಪ್ಪ, ಬಿ.ರೇವಣ್ಣ, ರುದ್ರಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.