ADVERTISEMENT

ನಿಮ್ಮೂರ ನೀರು ಕುಡಿಯುವ ಮುನ್ನ ಎಚ್ಚರ!

ಜಿಲ್ಲೆಯ 759 ಕೊಳವೆಬಾವಿ ನೀರಿನಲ್ಲಿ ಹಾನಿಕಾರಕ ಅಂಶ: ಕೆಡಿಪಿ ಸಭೆಯಲ್ಲಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 13:37 IST
Last Updated 19 ಜೂನ್ 2013, 13:37 IST

ದಾವಣಗೆರೆ: ಜಿಲ್ಲೆಯ ಜನರು ಕುಡಿಯಲು ಬಳಸುವ 759 ಕೊಳವೆಬಾವಿಗಳ ನೀರು ಯೋಗ್ಯವಾಗಿಲ್ಲ!

ಇಂತಹ ಅಘಾತಕಾರಿ ಅಂಶವನ್ನು ಮಂಗಳವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ನಡೆದ ಪ್ರಥಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಬಹಿರಂಗಗೊಳಿಸಿದರು.

ಚನ್ನಗಿರಿ ತಾಲ್ಲೂಕಿನ 191, ದಾವಣಗೆರೆಯ 153, ಹರಿಹರದ 68, ಹೊನ್ನಾಳಿಯ 111, ಹರಪನಹಳ್ಳಿಯ 108 ಹಾಗೂ ಜಗಳೂರಿನ 128 ಸ್ಥಳಗಳಲ್ಲಿ ಕುಡಿಯುವ ನೀರಿನಲ್ಲಿ ಫ್ಲೊರೈಡ್ ಸೇರಿದಂತೆ ಹಾನಿಕಾರಕ ಅಂಶಗಳಿವೆ. 2,050 ಕೇಂದ್ರಗಳ ನೀರು ಮಾತ್ರ ಕುಡಿಯಲು ಯೋಗ್ಯವಾಗಿವೆ ಎಂದು ಎಂಜಿನಿಯರ್ ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯ ಎಲ್ಲ ಜನರಿಗೂ ಶುದ್ಧ ಕುಡಿಯುವ ನೀರು ಒದಗಿಸಲು ಅಗತ್ಯವಾದ ಸಮಗ್ರ ಯೋಜನೆ ರೂಪಿಸಿ, ಜಾರಿಗೊಳಿಸಬೇಕು. ಕೂಡಲೇ, ಅಧಿಕಾರಿಗಳು ಕಾರ್ಯತತ್ಪರರಾಗಬೇಕು ಎಂದು ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಎಂಜಿನಿಯರ್‌ಗಳಿಗೆ ಸೂಚಿಸಿದರು.

ಸದ್ಯ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಅಡಿ 114 ಗುಂಪುಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಯೋಜನೆ ಮುಕ್ತಾಯ ಹಂತದಲ್ಲಿದೆ. ಉಳಿದ ನೀರಾವರಿ ಇಲ್ಲದ ಗ್ರಾಮಗಳ ಮಾಹಿತಿ ಸಂಗ್ರಹಿಸಿ ವರದಿ ರೂಪಿಸುವುದಾಗಿ ಎಂಜಿನಿಯರ್ ತಿಳಿಸಿದರು.

ಪ್ರತಿಧ್ವನಿಸಿದ 22 ಕೆರೆ ಏತ ನೀರಾವರಿ ಸಮಸ್ಯೆ: 22 ಕೆರೆ ಏತ ನೀರಾವರಿ ಯೋಜನೆ ವಿಳಂಬ ಕೆಡಿಪಿ ಸಭೆಯಲ್ಲೂ ಪ್ರತಿಧ್ವನಿಸಿತು. ವಿಷಯ ಪ್ರಸ್ತಾಪಿಸಿದ ಮಾಯಕೊಂಡ ಶಾಸಕ ಶಿವಮೂರ್ತಿನಾಯ್ಕ, ವಿಳಂಬಕ್ಕೆ ಕಾರಣವಾದ ಹೆದ್ದಾರಿ ಪ್ರಾಧಿಕಾರ ಹಾಗೂ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಈ ಸಂದರ್ಭದಲ್ಲಿ ಹಲವು ಶಾಸಕರು ಹೆದ್ದಾರಿ ನಿರ್ವಹಣೆ ಹಾಗೂ ರಚನೆ ಸಮರ್ಪಕವಾಗಿ ಇಲ್ಲ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ದೂರಿದರು.

ಇದಕ್ಕೆ ಸ್ಪಂದಿಸಿದ ಸಚಿವ ಶಾಮನೂರು, ಹೆದ್ದಾರಿ ಹಾಗೂ 22 ಕೆರೆ ಸಮಸ್ಯೆಗಾಗಿಯೇ ಪ್ರತ್ಯೇಕ ತುರ್ತು ಸಭೆ ಕರೆಯುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಬೀರೂರು-ಸಮ್ಮಸಗಿ ರಸ್ತೆ ಕಾಮಗಾರಿ ವಿಳಂಬದ ವಿರುದ್ಧ ಶಾಸಕ ವಡ್ನಾಳ್ ರಾಜಣ್ಣ ಹರಿಹಾಯ್ದರು. 

ಜಲಸಂವರ್ಧನಾ ಅಧಿಕಾರಿಗೆ ತರಾಟೆ: ಜಿಲ್ಲೆಯ 86 ಕೆರೆಗಳ ಅಭಿವೃದ್ಧಿಯ ಉಸ್ತುವಾರಿ ಹೊತ್ತಿರುವ ಜಲಸಂವರ್ಧನಾ ಇಲಾಖೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆರೆ ಒತ್ತುವರಿಗೆ ಪ್ರಾಮಾಣಿಕವಾಗಿ ಸ್ಪಂದಿಸಿಲ್ಲ. ಇಲಾಖೆಯ ಕಾರ್ಯ ಪಾರದರ್ಶಕವಾಗಿಲ್ಲ ಎಂದು ವಡ್ನಾಳ್ ರಾಜಣ್ಣ ಇಲಾಖೆಯ ಅಧಿಕಾರಿ ಮೋಹನ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಬಾಲಸಂಜೀವಿಗೆ ಬಾಲಗ್ರಹ: ಚಿಕ್ಕವಯಸ್ಸಿನಲ್ಲೇ ಕಾಯಿಲೆಗೆ ತುತ್ತಾಗುವ ಮಕ್ಕಳಿಗಾಗಿ ಜಾರಿಗೆ ತಂದಿರುವ ಬಾಲಸಂಜೀವಿನಿಗೆ ಸರಿಯಾಗಿ ಹಣ ಬಿಡುಗಡೆ ಆಗುತ್ತಿಲ್ಲ. ಈ ಅವ್ಯವಸ್ಥೆ ಸರಿಪಡಿಸಿ ಎಂದು ಎಸ್‌ಎಸ್‌ಎಂ ಸೂಚಿಸಿದರು.

ಶೀಘ್ರದಲ್ಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಿಸಿದ ವೈದ್ಯರ ಸಭೆ ಕರೆದು ಸಮಸ್ಯೆ ಇತ್ಯರ್ಥಪಡಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ಸಮವಸ್ತ್ರಕ್ಕೆ ಕಡಿಮೆ ಬಟ್ಟೆ: ಶಿಕ್ಷಣ ಇಲಾಖೆ ವಿತರಿಸಿದ ಸಮವಸ್ತ್ರಗಳು ಕಡಿಮೆ ಇದ್ದು, ಮಕ್ಕಳಿಗೆ ಸಮಸ್ಯೆಯಾಗಿದೆ ಎಂದು ನಾರಾಯಣಸ್ವಾಮಿ ದೂರಿದರು. ಗೌರವ ಶಿಕ್ಷಕರಿಗೆ ನೀಡುವ ಗೌರವಧನ ್ಙ 100 ಸಾಲದು ಅದನ್ನು ್ಙ 300ಕ್ಕೆ ಹೆಚ್ಚಿಸಲು ಪ್ರಸ್ತಾವ ಸಲ್ಲಿಸಲು ಸೂಚಿಸಿದರು.
ಶಿಕ್ಷಕರ ಸಂಬಳ ವಿಳಂಬ ಆಗದಂತೆ ಎಚ್ಚರ ವಹಿಸಬೇಕು ಎಂದು ಶಿವಯೋಗಿಸ್ವಾಮಿ ತಾಕೀತು ಮಾಡಿದರು. ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಯೋಜನೆ ರೂಪಿಸುವಂತೆ ಮಲ್ಲಿಕಾರ್ಜುನ್ ಸಲಹೆ ನೀಡಿದರು.

ಗ್ರಾಮಗಳ್ಲ್ಲಲಿರುವ ನಕಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವಮೂರ್ತಿ ನಾಯ್ಕ ತಾಕೀತು ಮಾಡಿದರು.
ನಕಲಿ ಬೀಜ, ಗೊಬ್ಬರ ತಡೆಗೆ ಕ್ರಮ: ಜಿಲ್ಲೆಯಲ್ಲಿ ನಕಲಿ ಬಿತ್ತನೆ ಬೀಜ ಹಾಗೂ ನಕಲಿ ಗೊಬ್ಬರ ಮಾರಾಟ ಹೆಚ್ಚುತ್ತಿದ್ದು, ಕಠಿಣಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಒತ್ತಾಯಿಸಿದರು.

ಇಂತಹ ಯಾವ ಪ್ರಕರಣದ ಬಗ್ಗೆಯೂ ಅಧಿಕೃತ ದೂರು ಬಂದಿಲ್ಲ. ಇಲಾಖೆಯ ಅಧಿಕಾರಿಗಳೇ ದಾಳಿ ನಡೆಸಿ ಹಲವು ಪ್ರಕರಣ ಪತ್ತೆಹಚ್ಚಿದ್ದಾರೆ. ಅಂಥವರ ವಿರುದ್ಧ ದೂರು ದಾಖಲು ಮಾಡಿದ್ದೇವೆ ಎಂದು ಜಂಟಿ ಕೃಷಿ ನಿರ್ದೇಶಕ ಗೊಲ್ಲರ್ ಮಾಹಿತಿ ನೀಡಿದರು.

ಉತ್ತಮ ಮಳೆ, ಜಗಳೂರಿಗೆ ಹಿನ್ನಡೆ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮುಂಗಾರು ವಾಡಿಕೆಗಿಂತ ಹೆಚ್ಚು ಸುರಿದಿದೆ. ವಾಡಿಕೆಯಂತೆ ಜುಲೈ ಅಂತ್ಯಕ್ಕೆ 198.1 ಮಿ.ಮೀ ಮಳೆ ಆಗಬೇಕಿತ್ತು. ಇದುವರೆಗೂ 245 ಮಿ.ಮೀ ಮಳೆಯಾಗಿದೆ. ಹಿಂದಿನ ವರ್ಷ ವಾಡಿಕೆಗಿಂತ ಶೇ 30ರಷ್ಟು ಕಡಿಮೆ ಮಳೆಯಾಗಿತ್ತು. ಜಗಳೂರು ಹೊರತುಪಡಿಸಿ ಜಿಲ್ಲೆಯಲ್ಲಿ ಬಿತ್ತನೆ ಉತ್ತಮವಾಗಿದೆ ಎಂದು ಡಾ.ಆರ್.ಜಿ.ಗೊಲ್ಲರ್ ತಿಳಿಸಿದರು.

ಈ ಬಾರಿ ಜಿಲ್ಲೆಯಲ್ಲಿ 1,02,196 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿತ್ತು. 45,597 ಕ್ವಿಂಟಲ್ ಬಿತ್ತನೆಬೀಜಕ್ಕೆ ಬೇಡಿಕೆ ಬಂದಿದೆ. ರಿಯಾಯಿತಿ ದರದಲ್ಲಿ ವಿತರಿಸಲು 16,341 ಕ್ವಿಂಟಲ್ ದಾಸ್ತಾನು ಮಾಡಲಾಗಿತ್ತು. ಅದರಲ್ಲಿ 9,465 ಬೀಜ ಮಾರಾಟ ಮಾಡಲಾಗಿದೆ. ಒಟ್ಟು ್ಙ 322 ಲಕ್ಷ ಸಬ್ಸಿಡಿಯನ್ನು ಜಿಲ್ಲೆಯ 64,221 ರೈತರು ಪಡೆದಿದ್ದಾರೆ ಎಂದರು.

ರೈತರಿಗೆ ಸಲಹೆ ಬೇಕಿಲ್ಲ; ಕೇಳಿದ್ದನ್ನಷ್ಟೇ ಕೊಡಿ: ಬಿತ್ತನೆಬೀಜ ವಿತರಣಾ ಕೇಂದ್ರಗಳಲ್ಲಿ ಮೆಕ್ಕೆಜೋಳ ವಿತರಣೆ ನಿಲ್ಲಿಸಲಾಗಿದೆ. ಅದನ್ನು ಇನ್ನೂ ಒಂದು ವಾರ ಮುಂದುವರಿಸಿ ಎಂದು ಶಾಸಕ ಡಿ.ಜಿ.ಶಾಂತನಗೌಡ ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಬಿತ್ತಿದ ಮೆಕ್ಕೆಜೋಳ ಇಳುವರಿ ಬರುವುದಿಲ್ಲ. ಅದರ ಬದಲು ಹೆಚ್ಚು ಇಳುವರಿ ಬರುವ ಬೆಳೆಯನ್ನು ಆಯ್ಕೆ ಮಾಡಿಕೊಳ್ಳಲಿ ಎನ್ನುವ ಉದ್ದೇಶದಿಂದ ವಿತರಣೆ ನಿಲ್ಲಿಸಲಾಗಿದೆ ಎಂದು ಗೊಲ್ಲರ್ ಪ್ರತಿಕ್ರಿಯಿಸಿದರು.

ರೈತರಿಗೆ ಡಿಎಪಿ ಜತೆ ಇತರ ಗೊಬ್ಬರ ಕಡ್ಡಾಯ ಮಾಡಬೇಡಿ ಎಂದು ವಡ್ನಾಳ್ ರಾಜಣ್ಣ ತಾಕೀತು ಮಾಡಿದರು. ಅದಕ್ಕೆ ಉತ್ತರಿಸಿದ ಗೊಲ್ಲರ್, ಭೂ ಫಲವತ್ತತೆ ಹೆಚ್ಚಳಕ್ಕೆ ಹೀಗೆ ಮಾಡುತ್ತಿದ್ದೇವೆ ಎಂದರು. ಇದರಿಂದ ಸಮಾಧಾನಗೊಳ್ಳದ ರಾಜಣ್ಣ, `ರೈತರಿಗೆ ಏನು ಬಯಸುತ್ತಾರೋ ಅದನ್ನು ನೀಡಿ, ರೈತರ ಅನುಭವ ನಿಮ್ಮ ಅನುಭವಕ್ಕಿಂತ ದೊಡ್ಡದು. ಅವರಿಗೆ ನಿಮ್ಮ ಸಲಹೆ ಬೇಕಿಲ್ಲ' ಎಂದರು.

ಕ್ಷೇತ್ರವಾರು ಮಾಹಿತಿ ನೀಡಿ...: ಇಲಾಖೆಗಳ ಎಲ್ಲ ಮಾಹಿತಿಯನ್ನು ತಾಲ್ಲೂಕುವಾರು ನೀಡಲಾಗುತ್ತದೆ. ದಾವಣಗೆರೆ ತಾಲ್ಲೂಕಿನಲ್ಲಿ ಮೂರು ಕ್ಷೇತ್ರಗಳಿವೆ. ಇದರಿಂದ ಮಾಯಕೊಂಡ ಕ್ಷೇತ್ರದ ಸಮಗ್ರ ಮಾಹಿತಿ ದೊರೆಯುತ್ತಿಲ್ಲ. ಹಳೇ ಬ್ರಿಟಿಷರ ಕಾಲದ ವಿಧಾನ ಬಳಸಿ ಮಾಹಿತಿ ನೀಡಲಾಗುತ್ತಿದೆ ಎಂದು ಶಾಸಕ ಕೆ.ಶಿವಮೂರ್ತಿನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ, ನಿಯಮದಂತೆಯೇ ಮಾಹಿತಿ ನೀಡಲಾಗುತ್ತಿದೆ. ಕ್ಷೇತ್ರವಾರು ಮಾಹಿತಿಬೇಕು ಎನ್ನುವುದಾದರೆ ಯೋಜನಾ ವಿಭಾಗಕ್ಕೆ ಪ್ರಸ್ತಾವ ಕಳುಹಿಸುತ್ತೇವೆ ಎಂದರು.

ಹಲಸಬಾಳು ಕೆರೆಯನ್ನೂ ಸೇರಿಸಿ: 22 ಕೆರೆ ಏತ ನೀರಾವರಿ ಪೈಪ್‌ಲೈನ್ ಸಾಗುವ ಮಾರ್ಗದಲ್ಲಿ ಬರುವ ಹಲಸಬಾಳು ಕೆರೆಯನ್ನೂ ಯೋಜನೆ ವ್ಯಾಪ್ತಿಗೆ ತಂದರೆ ಕುಡಿಯುವ ನೀರು ಪೂರೈಕೆಗೆ ಅನುಕೂಲವಾಗುತ್ತದೆ ಎಂದು ಶಾಸಕ ಶಿವಶಂಕರ್ ಮನವಿ ಮಾಡಿದರು.

ಅದೊಂದು ಕೆರೆ ಸೇರಿಸಿದರೆ ಇನ್ನೂ ಹಲವು ಕೆರೆ ಸೇರಿಸಲು ಒತ್ತಡ ಬರುತ್ತದೆ. ಮೊದಲು ಯೋಜನೆ ಪೂರ್ಣವಾಗಲಿ ಆಮೇಲೆ ವಿಸ್ತರಿಸೋಣ ಎಂದು ಶಾಮನೂರು ಬೇಡಿಕೆಗೆ ತಾತ್ಕಾಲಿಕ ವಿರಾಮ ನೀಡಿದರು.

ಶೌಚಾಲಯಕ್ಕೂ ಜನಪ್ರತಿನಿಧಿಗಳ ಹೆಸರು!: ಸರ್ಕಾರದ ಅನುದಾನದ ಕಾಮಗಾರಿಗಳಿಗೆ ಜನಪ್ರತಿನಿಧಿಗಳ ಹೆಸರು ಹಾಕಿಸಿಕೊಳ್ಳುವುದಕ್ಕೆ ಶಾಸಕ ಡಿ.ಜಿ.ಶಾಂತನಗೌಡ ಆಕ್ಷೇಪ ವ್ಯಕ್ತಪಡಿಸಿದರು.

ಸಣ್ಣಪುಟ್ಟ ಕಾಮಗಾರಿಗೂ ಶಾಸಕರು ಹೆಸರು ಹಾಕಿಸಿಕೊಂಡಿದ್ದಾರೆ. ಮೊದಲು ಅದನ್ನು ತೆರವುಗೊಳಿಸಿ ಎಂದು ಜಿಲ್ಲಾಧಿಕಾರಿಗೆ ತಾಕೀತು ಮಾಡಿದರು.

ಕೆಲ ಭಾಗಗಳಲ್ಲಿ ಶೌಚಾಲಯ, ಚರಂಡಿಗೂ ಹೆಸರು ಬರೆಸಿದ್ದಾರೆ ಎಂದು ಕೆಲವರು ಹಾಸ್ಯ ಮಾಡಿದರು. `ಜಿಲ್ಲಾ ಪಂಚಾಯ್ತಿ ಸಭಾಂಗಣಕ್ಕೂ ನನ್ನ ಹೆಸರು ಇಡಲಾಗಿದೆ' ಎಂದು ಮಲ್ಲಿಕಾರ್ಜುನ್ ನಗೆ ಉಕ್ಕಿಸಿದರು.

ಕೊನೆಗೆ ಜಿಲ್ಲಾಧಿಕಾರಿ ನಿಯಮ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಮಾಜಿಗಳಿಗೂ ಶಿಷ್ಟಾಚಾರದ ಭಾಗ್ಯ!: ವಿಶ್ವವಿದ್ಯಾಲಯದ ಪ್ರಮುಖ ಕಾರ್ಯಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷತೆ ವಹಿಸಬೇಕೋ, ಅಲ್ಲಿನ ಕುಲಪತಿ ಅಧ್ಯಕ್ಷತೆ ವಹಿಸಬೇಕೋ ಎನ್ನುವ ಚರ್ಚೆ ನಡೆಯಿತು.

ವಿಷಯ ಪ್ರಸ್ತಾಪ ಮಾಡಿದ ಜೆಡಿಎಸ್ ಶಾಸಕ ಎಚ್.ಎಸ್.ಶಿವಶಂಕರ್ ಜೂನ್ 19ರಂದು ವಿವಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕುಲಪತಿ ಅಧ್ಯಕ್ಷತೆ ವಹಿಸಿದ್ದಾರೆ. ಅದು ತಪ್ಪು. ಜಿಲ್ಲಾ ಉಸ್ತುವಾರಿ ಸಚಿವರು ವಹಿಸಬೇಕಿತ್ತು ಎಂದು ವಾದ ಮಂಡಿಸಿದರು. ಆದರೆ, ಅದೇ ಸರಿ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಶಿವಯೋಗಿಸ್ವಾಮಿ, ಸದಸ್ಯ ನಾರಾಯಣ ಸ್ವಾಮಿ ಸಮರ್ಥಿಸಿಕೊಂಡರು. ಈ ಸಂದರ್ಭದಲ್ಲಿ ಗಮನಸಳೆದ ನಾರಾಯಣಸ್ವಾಮಿ ಲೋಪವಾಗಿರುವುದು ಅಧ್ಯಕ್ಷತೆಯಲ್ಲ ಮನೋಹರ ಮಸ್ಕಿ, ಶಶೀಲ್ ನಮೋಶಿ ಮಾಜಿಗಳಾದರೂ, ಶಿಷ್ಟಾಚಾರ ಪಾಲಿಸಲಾಗಿದೆ ಎಂದು ಗಮನಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.