ADVERTISEMENT

ನಿರಾಶ್ರಿತರಿಗೆ ಗಂಜಿ ಕೇಂದ್ರದ ಆಶ್ರಯ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 7:48 IST
Last Updated 3 ಆಗಸ್ಟ್ 2013, 7:48 IST

ಹೊನ್ನಾಳಿ: ಪಟ್ಟಣದ ತುಂಗಭದ್ರಾ ನದಿ ಉಕ್ಕಿ ಹರಿದ ಪರಿಣಾಮ ಪಟ್ಟಣದ ತಗ್ಗು ಪ್ರದೇಶಗಳ ಮನೆಗಳಿಗೆ ಶುಕ್ರವಾರ ನೀರು ನುಗ್ಗಿತು. ತಹಶೀಲ್ದಾರ್ ಟಿ.ವಿ.ಪ್ರಕಾಶ್, ಪಟ್ಟಣ ಪಂಚಾಯ್ತಿ ಪ್ರಭಾರ ಮುಖ್ಯಾಧಿಕಾರಿ ಎಸ್.ಆರ್.ವೀರಭದ್ರಯ್ಯ, ಪ್ರಭಾರ ಆರೋಗ್ಯ ನಿರೀಕ್ಷಕ ನಾಗೇಶ್ ನಿವಾಸಿಗಳನ್ನು ತೆರವುಗೊಳಿಸಿದರು.

ಬಾಳ್‌ರಾಜ್ ಘಾಟ್ ಪ್ರದೇಶದ ಜನರಿಗೆ ಸ್ತ್ರೀಶಕ್ತಿ ಭವನ, ಅಂಬೇಡ್ಕರ್ ಭವನ, ಉರ್ದು ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದ್ದು, ಊಟ-ಉಪಾಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಪಟ್ಟಣದ ವಡ್ಡಿನಕೇರಿ ಹಳ್ಳದಲ್ಲಿ ತುಂಗಭದ್ರಾ ನದಿ ಹಿನ್ನೀರು ಹೆಚ್ಚಿನ ಪ್ರಮಾಣದಲ್ಲಿ ಬಂದಿರುವ ಕಾರಣ ಪಟ್ಟಣದ ಬಂಬೂ ಬಜಾರ್ ಪ್ರದೇಶಕ್ಕೂ ನೀರು ನುಗ್ಗಿದೆ. ಭದ್ರಾ ಜಲಾಶಯದ ಹೊರಹರಿವು ಹೆಚ್ಚಾದರೆ ಪಟ್ಟಣದ ಕೋಟೆ ಬಡಾವಣೆ, ಸ್ವಾಮಿ ವಿವೇಕಾನಂದ ಶಾಲೆ ಬಳಿ, ರಾಘವೇಂದ್ರ ಸ್ವಾಮಿ ಮಠದ ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಈಗಾಗಲೇ ತುಂಗಭದ್ರಾ ಸೇತುವೆ ಬಳಿ ಆಂಜನೇಯ ದೇವಸ್ಥಾನದ ಹಿಂಭಾಗಕ್ಕೆ ನೀರು ನುಗ್ಗಿದೆ. ಕೆಎಸ್‌ಆರ್‌ಟಿಸಿ ಬಸ್ ಡಿಪೋ ಕಾಮಗಾರಿ ಪ್ರಗತಿಯಲ್ಲಿದ್ದು, ಅಲ್ಲಿಗೂ ನೀರು ನುಗ್ಗಿದೆ. ಮತ್ತೆ ಹೆಚ್ಚಿನ ನೀರು ಬಂದರೆ, ಹೊಳೆಮಾದಾಪುರ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಇದೆ.

ತಾಲ್ಲೂಕಿನ ಸಾಸ್ವೆಹಳ್ಳಿ ಹೋಬಳಿಯ ಹುರುಳೇಹಳ್ಳಿ, ಬಾಗೇವಾಡಿ, ರಾಂಪುರ, ಬೀರಗೊಂಡನಹಳ್ಳಿ, ಬೆನಕನಹಳ್ಳಿ, ಚೀಲೂರು, ಹರಳಹಳ್ಳಿ, ಬಿದರಗಡ್ಡೆ, ಕೊನಾಯಕನಹಳ್ಳಿ, ಬಳ್ಳೇಶ್ವರ, ಕೋಟೆಮಲ್ಲೂರು, ಚಿಕ್ಕಗೋಣಿಗೆರೆ, ಹಿರೇಗೋಣಿಗೆರೆ, ಕೋಣನತಲೆ ಸೇರಿದಂತೆ ಅನೇಕ ಗ್ರಾಮಗಳ ಇಕ್ಕೆಲಗಳ ಜಮೀನುಗಳು ಜಲಾವೃತವಾಗುವ ಭೀತಿ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.