ADVERTISEMENT

ನಿಷ್ಠಾವಂತರಿಗೆ ಟಿಕೆಟ್, ಪಕ್ಷಾಂತರಿಗೆ ಶಾಸ್ತಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 5:30 IST
Last Updated 18 ಮಾರ್ಚ್ 2011, 5:30 IST

ಜಗಳೂರು: ರಾಜ್ಯದ ಸಂಪತ್ತಿನ ಲೂಟಿಯಲ್ಲಿ ತೊಡಗಿರುವ ಸಚಿವ ಸಂಪುಟದ ಶೇ.50ಕ್ಕೂ ಹೆಚ್ಚು ಸಚಿವರು ಜೈಲಿನಲ್ಲಿರಲು ಅರ್ಹರಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಚ್.ಕೆ. ಪಾಟೀಲ್ ಆರೋಪಿಸಿದರು.ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಬಿಜೆಪಿ  ಸರ್ಕಾರದಲ್ಲಿ ಆಗಾಗ್ಗೆ ಭಿನ್ನಮತ ಕಾಣಿಸಿಕೊಳ್ಳುವುದು ಲೂಟಿ  ಹೊಡೆದ ಸಂಪತ್ತಿನಲ್ಲಿ ಪಾಲು ಹಂಚಿಕೊಳ್ಳುವುದಕ್ಕಾಗಿ. ರಾಜ್ಯದ ಜನರ ಹಿತಕ್ಕಾಗಿ ಅಲ್ಲ.ಕ್ಷೇತ್ರದ ಮತದಾರರು ಇಟ್ಟ  ನಂಬಿಕೆಗಳನ್ನು ದುಡ್ಡಿಗೆ ಮಾರಿಕೊಂಡವರಿಗೆ ಪ್ರಸಕ್ತ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಅವರು ಮನವಿ ಮಾಡಿದರು.

‘ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ ಹಾಗೂ ಗೌರವ ಹೊಂದಿರುವ ನಿಷ್ಠಾವಂತ ವ್ಯಕ್ತಿಗೆ ಮಾತ್ರ ಪಕ್ಷದ ಟಿಕೆಟ್ ನೀಡಲಾಗುವುದು. ಕಾಂಗ್ರೆಸ್‌ನಿಂದ ಗೆದ್ದು ಸ್ವಾರ್ಥಕ್ಕಾಗಿ ಪಕ್ಷಾಂತರ ಮಾಡಿದವರಿಗೆ ತಕ್ಕ ಶಾಸ್ತಿಯಾಗಲಿದೆ ಎಂದು ಪಾಟೀಲ್ ಅಭಿಪ್ರಾಯಪಟ್ಟರು.

ಮಾಜಿ ಸಚಿವ ಎ. ಕೃಷ್ಣಪ್ಪ ಮಾತನಾಡಿ, ಕಾಂಗ್ರೆಸ್‌ನಿಂದ ಗೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಎಸ್.ವಿ. ರಾಮಚಂದ್ರ ಅವರು ಕ್ಷೇತ್ರದ ಮತದಾರರಿಗೆ ಅವಮಾನ ಮಾಡಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಮತದಾರರ ಮತ ಕೇಳುವ ನೈತಿಕ ಹಕ್ಕು ಅವರಿಗಿಲ್ಲ ಎಂದು ಹರಿಹಾಯ್ದರು.

ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್  ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಚೆಗೆ ಪಟ್ಟಣಕ್ಕೆ ಭೇಟಿ ನೀಡಿ ‘ಭೋವಿ ಅಭಿವೃದ್ಧಿ ಮಂಡಳಿ ಸ್ಥಾಪನೆ ಮತ್ತು ್ಙ 25 ಕೋಟಿ ಅನುದಾನ ಮಂಜೂರು ಮಾಡುವುದಾಗಿ ಹೇಳಿರುವುದು ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಬಿಜೆಪಿ ಸರ್ಕಾರದ ಆಸೆ, ಆಮಿಷಗಳಿಗೆ ಬಲಿಯಾಗದೇ ದೀನದಲಿತರ ಪಕ್ಷವಾಗಿರುವ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಒಗ್ಗಟ್ಟಿನಿಂದ ದುಡಿಯಬೇಕು ಎಂದು  ಮನವಿ ಮಾಡಿದರು.

‘ಬಿಜೆಪಿಯ ಆಪರೇಷನ್ ಕಮಲ ಕಾರ್ಯಾಚರಣೆ ಜನತಂತ್ರದ ಬುಡಮೇಲು ಕೃತ್ಯವಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಸವರಾಜ್ ರಾಯರೆಡ್ಡಿ ಅಭಿಪ್ರಾಯಪಟ್ಟರು.
 ಈ ಸಂದರ್ಭದಲ್ಲಿ ದೇವೇಂದ್ರಪ್ಪ, ಲಿಂಗಪ್ಪ, ಪುಷ್ಪಾ, ಬಿಸ್ತುವಳ್ಳಿಬಾಬು ಹಾಗೂ ಪಾಲನಾಯಕನಕೋಟೆ ಓಬಣ್ಣ ಅವರು ಕಾಂಗ್ರೆಸ್ ಟಿಕೆಟ್ ಕೋರಿ ವೀಕ್ಷಕರಿಗೆ ಅರ್ಜಿ ಸಲ್ಲಿಸಿದರು.  

 ಮಾಜಿ ಶಾಸಕರಾದ ಮಹಿಮ ಪಟೇಲ್, ಎಚ್. ಆಂಜನೇಯ, ಜಿ.ಪಂ. ಮಾಜಿ ಅಧ್ಯಕ್ಷ ವೈ. ರಾಮಪ್ಪ, ಕೆಪಿಸಿಸಿ ಸದಸ್ಯ ಡಿ. ಬಸವರಾಜ್, ಜಯಸಿಂಹ, ಅಬ್ದುಲ್ ಜಬ್ಬಾರ್, ಕೆ.ಪಿ. ಪಾಲಯ್ಯ, ಕೃಷ್ಣಮೂರ್ತಿ, ಎಸ್.ಕೆ. ರಾಮರೆಡ್ಡಿ, ತಿಪ್ಪೇಸ್ವಾಮಿ ಗೌಡ, ಕಲ್ಲೇಶ್‌ರಾಜ್ ಪಟೇಲ್, ಶೇಖರಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.