ADVERTISEMENT

ನೇಪಥ್ಯಕ್ಕೆ ಜಾನಪದ ಸಾಹಿತ್ಯ: ಪ್ರೊ.ಅಪ್ಪಗೆರೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 6:15 IST
Last Updated 16 ಸೆಪ್ಟೆಂಬರ್ 2011, 6:15 IST

ಹರಪನಹಳ್ಳಿ: `ಬೆಳಗಾಗಿ ನಾನೆದ್ದು ಯಾರ‌್ಯಾರ ನೆನೆಯಲಿ, ಎಳ್ಳು-ಜೀರಿಗೆ ಬೆಳೆಯೋಣ ಭೂಮ್ತಾಯ....~, `ಏನ್ ಕೊಡ ಏನ್ ಕೊಡವಾ, ಹುಬ್ಬಳ್ಳಿಮಠ ಎಂಥ ಚೆಂದುಳ್ಳ ಕೊಡವಾ...~ `ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ...~,  `ತಿಂಗಳು ಮುಳುಗಿದವೋ.....ರಂಗೋಲಿ ಬೆಳಗಿದವೋ....~, `ಚೆಲ್ಲಿದರೂ ಮಲ್ಲಿಗೆಯ, ಬಾನಾಸುರೇರಿ ಮ್ಯಾಲೆ...~

-ಹೀಗೆ ಒಂದರ ಹಿಂದೆ ಒಂದರಂತೆ ತಮ್ಮ ಗಾನಕಂಠದ ಸಿರಿಯಿಂದ ಜಾನಪದ, ಭಾವಗೀತೆ ಹಾಗೂ ಸಂತರ ತತ್ವಪದಗಳನ್ನು ಹಾಡುತ್ತ, ಮಧ್ಯ-ಮಧ್ಯೆ ಹಾಡಿನ ತಾತ್ಪರ್ಯ ಹಾಗೂ ಸೊಬಗನ್ನು ರಸದೌತಣ ನೀಡುತ್ತಿದ್ದರೆ, ವೇದಿಕೆಯಲ್ಲಿದ್ದ ಗಣ್ಯರು ಹಾಡಿಗೆ ತಕ್ಕಂತೆ ತಲೆದೂಗಿದರು.

ನೆರೆದಿದ್ದ ಸಹಸ್ರಾರು ವಿದ್ಯಾರ್ಥಿಗಳು ಭಾವಪರವಶರಾಗಿ ಸಿಳ್ಳೆ, ಕೇಕೇ ಹಾಗೂ ಚಪ್ಪಾಳೆ ಹಾಕಿ ಸಂಭ್ರಮಿಸಿದರು.ಇಂತಹ ವಿಶಿಷ್ಟ ಕಾರ್ಯಕ್ರಮಕ್ಕೆ ಗುರುವಾರ ವೇದಿಕೆಯಾಗಿದ್ದು ಬಳ್ಳಾರಿಯ ವೀರಶೈವ ವಿದ್ಯಾವರ್ದಕ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಪಟ್ಟಣದ ಅಂಬ್ಲಿ ದೊಡ್ಡಭರಮಪ್ಪ ಪ್ರಥಮದರ್ಜೆ ಹಾಗೂ ಎಸ್‌ಎಸ್‌ಎಚ್ ಜೈನ್ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಸಂಘದ ಉದ್ಘಾಟನಾ ಸಮಾರಂಭ.
ಜಾನಪದ ಸೊಗಡನ್ನು ಉಣಬಡಿಸಿದವರು ಅಂತರ್‌ರಾಷ್ಟ್ರ ಖ್ಯಾತಿಯ ಜಾನಪದ ಕಲಾವಿದ ಪ್ರೊ.ಅಪ್ಪಗೆರೆ ತಿಮ್ಮರಾಜು. 

 ಜಾನಪದ, ಭಾವಗೀತೆ, ಜಾಗೃತಗೀತೆ ಹಾಗೂ ಸಂತರ ತತ್ವಪದಗಳು ಉಭಯ ಕಾಲೇಜಿನ ವಿದ್ಯಾರ್ಥಿಗಳಿಗೆ, ಉಪಸ್ಥಿತರಿದ್ದ ಗಣ್ಯರನ್ನು ಕ್ಷಣಕಾಲ ಮೈಮನ ಪುಳಕಗೊಳಿಸಿದವು. ಹೊಸ ಬಗೆಯ ಅನುಭವಕ್ಕೆ ಮೈತೆರದುಕೊಳ್ಳುವಂತೆ ಪ್ರೇರೆಪಿಸಿದವು.

ಸಹಜ ಭಾಷೆಯಲ್ಲಿ ಹೆಣದ ಹಾಡುಗಳಲ್ಲಿ ಮಣ್ಣಿನ ಗುಣದ ಸ್ಪರ್ಶವಿತ್ತು. ನೀತಿ ಸಂದೇಶ ಸಾರುವ ಅಮೃತ, ಹಾಡುಗಳಲ್ಲಿ ಅಡಗಿತ್ತು. ಹಾಗಾಗಿ ಇಡೀ ಒಂದೂವರೆ ತಾಸು ತಿಮ್ಮರಾಜು ಹಾಡುತ್ತಿದ್ದರೆ, ಸಭಾಂಗಣ ಬಿಲ್‌ಕುಲ್ ಕದಲಿಲ್ಲ.

ಹಾಡುಗಳ ಸಂಗೀತ ಕಾರಂಜಿಯ ಮಧ್ಯೆ ಮಾತನಾಡಿದ ಪ್ರೊ.ತಿಮ್ಮರಾಜು, ಜಾಗತೀಕರಣದ ಸುಳಿಯಲ್ಲಿ ಜಾನಪದೀಕರಣ ನೇಪಥ್ಯಕ್ಕೆ ಸರಿಯುತ್ತಿದೆ. ಭೂಮಿ, ನಾಡಿಗೆ ಅನ್ನ ಎಳೆಯುವ ಅನ್ನದಾತ, ಆತನ ಸಲಕರಣೆಗಳು, ಉಸಿರಾಡುವ ಗಾಳಿ, ಜೀವಜಲವಾಗಿರವ ನೀರು ಎಲ್ಲವುಗಳ ನಡುವೆಯೂ ಒಂದಕ್ಕೊಂದು ಅವಿನಾಭಾವ ಸಂಬಂಧಗಳ ಬಾಂಧವ್ಯ ಬೆಸೆದುಕೊಂಡಿದ್ದವು.

ಆದರೆ, ಇವೆಲ್ಲವುಗಳ ಮಧ್ಯೆ ಯಾಂತ್ರೀಕತೆಯ ಹೆಸರಿನಲ್ಲಿ ನುಸುಳಿಕೊಂಡಿರುವ ಜಾಗತೀಕರಣ ಮಾನವೀಯ ಮೌಲ್ಯಗಳ ಸಂಬಂಧದ ಕೊಂಡಿಯನ್ನು ಕಳಚಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂಪ್ರದಾಯ, ಗ್ರಾಮೀಣ ಸಂಸ್ಕೃತಿಯ ಸೊಗಡಿನ ಪ್ರತೀಕವಾಗಿರುವ ಜಾನಪದದಲ್ಲಿ ಬದುಕಿನ ಅಮೂಲ್ಯಗಳು ಅಡಗಿವೆ.
 
ಸತ್ಯ-ಮಿಥ್ಯಗಳ ತುಲನಾತ್ಮಕ ಚಿಂತನೆಗಳು ಮೇಳೈಸಿವೆ. ಆದರ್ಶಗಳ ಪ್ರೀತಿ-ಪ್ರೇಮದ ಅಮೃತಾನುಭವ ಅಡಗಿದೆ. ಜೀವನದಲ್ಲಿ ಇವುಗಳನ್ನು ಅಳವಡಿಸಿಕೊಳ್ಳದೇ ಹೋದರೆ ಜೀವನ ವ್ಯರ್ಥ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾಲೇಜುಗಳ ಆಡಳಿತ ಮಂಡಳಿಯ ಅಧ್ಯಕ್ಷ ಪಟೇಲ್ ಬೆಟ್ಟನಗೌಡ ಅಧ್ಯಕ್ಷತೆ ವಹಿಸಿದ್ದರು. ಸಲಹಾ ಮಂಡಳಿಯ ಸದಸ್ಯ ಅಂಬ್ಲಿ ಯೋಗೀಶ್, ಪ್ರಾಂಶುಪಾಲ ಎಸ್. ನಾಗೇಂದ್ರಪ್ಪ, ಎಂ. ಕರವತ್ತೆಪ್ಪ, ಉಪನ್ಯಾಸಕರಾದ ಡಾ.ಕೆ. ರುದ್ರಪ್ಪ, ಪ್ರೊ.ನಾಗಭೂಷಣ್, ಪ್ರೊ.ರಾಜಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.