ADVERTISEMENT

ನೈತಿಕ ಮೌಲ್ಯ ಕುಸಿತ: ಹಿರಣ್ಣಯ್ಯ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2013, 8:53 IST
Last Updated 14 ಏಪ್ರಿಲ್ 2013, 8:53 IST

ದಾವಣಗೆರೆ:  ವಿಶ್ವಕ್ಕೆ ಅಧ್ಯಾತ್ಮದ ನೀತಿ-ನೈತಿಕತೆಯ ಪಾಠ ಬೋಧಿಸಿದ ಭಾರತದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ ಎಂದು ಎಂದು ರಂಗಭೂಮಿ ಹಿರಿಯ ಕಲಾವಿದ ಮಾಸ್ಟರ್ ಹಿರಣ್ಣಯ್ಯ ವಿಷಾದಿಸಿದರು.

ನಗರದ ಸುಕೃತೀಂದ್ರ ಕಲಾಮಂದಿರದಲ್ಲಿ ಶನಿವಾರ ಲೇಖಕ ಡಾ.ಎನ್.ಕೆ. ರಾಮಚಂದ್ರ ಅವರ `ಸೂಕ್ತಿ-ದೀಪ್ತಿ' ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ನಾವು ಮತ್ತೊಬ್ಬರಿಗೆ ಆದರ್ಶವಾಗಿರಬೇಕಾದರೆ; ನಮ್ಮ ಬದುಕು ಸುಂದರವಾಗಿರಬೇಕು. ಅಂತಹ ಸುಂದರ ಬದುಕು ರೂಪಿಸಿಕೊಳ್ಳಲು ನಮಗೆ ವೇದ, ಪುರಾಣಗಳ ಅಧ್ಯಯನ ಅತ್ಯಗತ್ಯವಾಗಿದೆ. ದಾಸರು, ಶರಣರು, ಋಷಿ ಮುನಿಗಳು ಕಟ್ಟಿದ ಮಹಾಗ್ರಂಥಗಳ ಪಾರಾಯಣ ಮಾಡಬೇಕು. ಈ ದಿಸೆಯಲ್ಲಿ `ಸೂಕ್ತಿ-ದೀಪ್ತಿ' ಕೃತಿ ಓದುಗರಿಗೆ ಸಹಕಾರಿಯಾಗಿದೆ ಎಂದರು.

1968ರಲ್ಲಿ `ಲಂಚವತಾರ' ನಾಟಕದ ಮೂಲಕ ಸಾಮಾಜಿಕ ಸಂದೇಶ ಸಾರಿದೆ. ಅಂದಿನಿಂದ ಲಂಚ ಕೊಡುವುದನ್ನು ಕೈಬಿಟ್ಟೆ. ಈಗಿನ ರಾಜಕೀಯ ಪರಿಸ್ಥಿತಿ ನೋಡಿದರೆ ನಾಚಿಕೆಗೇಡು ಎನಿಸುತ್ತದೆ. ಇದಕ್ಕೆಲ್ಲಾ ನಾವೇ ಕಾರಣವಾಗಿದ್ದೇವೆ. ಮತ ಚಲಾಯಿಸುವ ಹಕ್ಕನ್ನು ಸರಿಯಾಗಿ ನಿರ್ವಹಿಸದೇ ಇರುವುದು ಇಷ್ಟಕ್ಕೆಲ್ಲಾ ಕಾರಣ. ಹಾಗಾಗಿ, ಸಮಾಜ ಅಸ್ವಸ್ಥಗೊಂಡಿದೆ. ಸಮಾಜದ ಸ್ವಾಸ್ಥ್ಯ ಕಾಪಾಡಲು, ಭ್ರಷ್ಟಾಚಾರದಿಂದ ದೇಶಕ್ಕೆ ಮುಕ್ತಿಗೊಳಿಸಲಾದರೂ ಮತ ಚಲಾಯಿಸಬೆಕು ಎಂದು ಹೇಳಿದರು.

ಜಾತಿ ರಾಜಕಾರಣದಿಂದ ವಿನಾಶವೇ ಹೊರತು ಅಭಿವೃದ್ಧಿ ಸಾಧ್ಯವಿಲ್ಲ. ಜಾತಿ ದೇವರಮನೆಗೆ ಸೀಮಿತವಾಗಿರಲಿ. ಮನೆಯ ಹೊಸ್ತಿಲು ದಾಟಿದ ಮೇಲೆ ಜಾತ್ಯತೀತ ಧೋರಣೆ ಬೆಳೆಸಿಕೊಳ್ಳಿ. ಇದರಿಂದ ರಾಷ್ಟ್ರದ ಉನ್ನತಿ ಸಾಧ್ಯ. ಸೋಮಾರಿತನ ತ್ಯಜಿಸಿ, ಪ್ರಯತ್ನಶೀಲರಾದಾಗ ಸಂಪತ್ತು ತಾನಾಗಿಯೇ ಒಲಿಯುತ್ತದೆ. ಮಹಾ ಸಂತರು ಕಟ್ಟಿರುವ ಈ ನಾಡಿನಲ್ಲಿ `ಭಾರತೀಯ ಸಂಸ್ಕೃತಿ' ಬಹುದೊಡ್ಡ ಕೊಡುಗೆಯಾಗಿದೆ. ಸಂಸ್ಕೃತಿಯನ್ನು ರಕ್ಷಿಸುವ ಹೊಣೆಗಾರಿಕೆ ಯುವಕರ ಮೇಲಿದೆ ಎಂದರು.

ವಿದ್ಯಾನಾಥ ವಿ. ಜೋಷಿ ಕೃತಿ ಕುರಿತು ಮಾತನಾಡಿದರು. ಎಸ್.ಎಸ್. ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಡಾ.ಎನ್.ಕೆ. ರಾಮಚಂದ್ರ, ರೇಖಾ ಓಂಕಾರಪ್ಪ, ಕೆ.ಎಚ್. ಮಂಜುನಾಥ, ಸಾಲಿಗ್ರಾಮ ಗಣೇಶ್ ಶೆಣೈ ಉಪಸ್ಥಿತರಿದ್ದರು. ಶೋಭಾ ಮಂಜುನಾಥ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.