ADVERTISEMENT

ಪಂಚಮುಖಿ ಪರಮೇಶ್ವರ ದೇವಸ್ಥಾನಕ್ಕೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 4:40 IST
Last Updated 8 ಅಕ್ಟೋಬರ್ 2012, 4:40 IST

ಹೊನ್ನಾಳಿ:  ಧರ್ಮ ಜಗತ್ತಿನ ಜನತೆಗೆ ಜ್ಞಾನದ ಬೆಳಕು ನೀಡುತ್ತದೆ ಎಂದು ಬಾಳೇಹೊನ್ನೂರಿನ ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬಿದರಗಡ್ಡೆ ಗ್ರಾಮದ ತುಂಗಭದ್ರಾ ನದಿದಂಡೆಯಲ್ಲಿ ಹಿರೇಮಠದ ವತಿಯಿಂದ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಪಂಚಮುಖಿ ಪರಮೇಶ್ವರ ದೇವಸ್ಥಾನದ ಶಂಕುಸ್ಥಾಪನೆ ಹಾಗೂ ಜನಜಾಗೃತಿ ಧರ್ಮಸಭೆಯ ನೇತೃತ್ವ ವಹಿಸಿ ಅವರು ಭಾನುವಾರ ಆಶೀರ್ವಚನ ನೀಡಿದರು.

ಮಾನವ ಜೀವನದ ಶ್ರೇಯಸ್ಸಿಗೆ ಧರ್ಮ, ಜ್ಞಾನ ಅಗತ್ಯ. ಅರಿವು, ಆಚಾರ ಬೋಧಿಸುವುದೇ ಗುರುಧರ್ಮ. ಹಾಗಾಗಿ ಎಲ್ಲರೂ ಧರ್ಮದ ಮಾರ್ಗದಲ್ಲಿ ಜೀವನ ನಡೆಸಿ ಮೋಕ್ಷ ಹೊಂದಬೇಕು ಎಂದು ತಿಳಿಸಿದರು.
ಸಚಿವ ಎಂ.ಪಿ. ರೇಣುಕಾಚಾರ್ಯ `ರಂಭಾಪುರಿ ಬೆಳಗು~ ಮಾಸಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಮನುಷ್ಯನಿಗೆ ಸಂಸ್ಕಾರ ಬೇಕು. ಇಂದಿನ ಯುವಪೀಳಿಗೆಗೆ ಬದುಕಿನ ಬಗೆಗಿನ ಸಂಸ್ಕೃತಿ ಕಲಿಸಬೇಕು. ನಮ್ಮ ಮಠ-ಮಾನ್ಯಗಳು ಸಂಸ್ಕೃತಿ ಎತ್ತಿಹಿಡಿಯುವ ಕೆಲಸ ಮಾಡುತ್ತಿವೆ ಎಂದರು.

ನಮ್ಮ ಸರ್ಕಾರ ಇಂದು ಶಿಕ್ಷಣ ಕ್ಷೇತ್ರಕ್ಕೆ ಮಹತ್ವ ನೀಡುತ್ತಿದೆ. ಬಿಸಿಯೂಟದಂತಹ ಮಹತ್ವದ ಯೋಜನೆ ಜಾರಿಗೊಂಡ ನಂತರ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚುತ್ತಿದೆ. ಆದರೆ, ವೀರಶೈವ ಮಠಗಳು ಸಾಕಷ್ಟು ಮೊದಲೇ ಅನ್ನ-ಜ್ಞಾನ ದಾಸೋಹ ನೀಡುವ ಮೂಲಕ ಶೈಕ್ಷಣಿಕವಾಗಿ ಸಮಾಜ ಮೇಲೆತ್ತುವ ಕೆಲಸ ಮಾಡುತ್ತಿವೆ. ಇದರಿಂದಾಗಿ ಇಂದು ಸಮಾಜದಲ್ಲಿ ಹೆಚ್ಚಿನ ವಿದ್ಯಾವಂತರು ಹೊರಹೊಮ್ಮಿದ್ದಾರೆ ಎಂದರು.

ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಿದರಗಡ್ಡೆ ಹಿರೇಮಠದ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ದಿಡಗೂರಿನ ಸಿದ್ದಾರೂಢ ಮುಪ್ಪಿನಾರ್ಯ ಆಶ್ರಮದ ಗುರು ಪಾಂಡುರಂಗನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ  ಎಂ.ಆರ್. ಮಹೇಶ್, ತಹಶೀಲ್ದಾರ್ ಎ.ಎಂ. ಶೈಲಜಾ ಪ್ರಿಯದರ್ಶಿನಿ ಮಾತನಾಡಿದರು. ಎಚ್.ಎ. ಭಿಕ್ಷಾವರ್ತಿಮಠ ಉಪನ್ಯಾಸ ನೀಡಿದರು. ತಾಲ್ಲೂಕು ಪಂಚಾಯ್ತಿ ಸದಸ್ಯೆ ಮಲ್ಲಮ್ಮ ಶಿವರಾಜ್, ಎಚ್. ಕಡದಕಟ್ಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗಂಗಮ್ಮ ನಂದೀಶ್ ಇದ್ದರು.

ಚನ್ನೇಶ್ವರ ಗಾನ ಕಲಾ ಸಂಘದ ಕಲಾವಿದರು ಪ್ರಾರ್ಥಿಸಿದರು. ಬಿದರಗಡ್ಡೆ ಷಡಕ್ಷರಿ ಸ್ವಾಗತಿಸಿದರು. ಶಿವಯೋಗಿ ಕಂಬಾಳಿಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.