ದಾವಣಗೆರೆ: ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರ ವಿರುದ್ಧ ತಡಮಾಡದೇ ಶಿಸ್ತು ಕ್ರಮ ಜರುಗಿಸಬೇಕು. ಯಾರನ್ನೂ ಕ್ಷಮಿಸಬಾರದು. ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಪಾರದರ್ಶಕತೆ ಅನುಸರಿಸಬೇಕು. ಆದಾಯದ ಶೇ 1ರಷ್ಟನ್ನು ಪಕ್ಷಕ್ಕೆ ದೇಣಿಗೆ ನೀಡಬೇಕು. ಪ್ರತಿ ನಾಯಕರೂ ಸಹ ಆಸ್ತಿ ಘೋಷಿಸಬೇಕು.
- ನಗರದ ಬಾಪೂಜಿ `ಬಿ~ ಸ್ಕೂಲ್‌ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರ ಜತೆ ಭಾನುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪದಾಧಿಕಾರಿಗಳು, ಶಾಸಕರು, ಸಂಸದರಿಂದ ಕೇಳಿಬಂದ ಒತ್ತಾಯಗಳಿವು.
ರಾಜ್ಯದಲ್ಲಿ ಬೇರೆ ಪಕ್ಷಗಳಿಗಿಂತ, ಕಾಂಗ್ರೆಸ್‌ಗೆ ಕಾಂಗ್ರೆಸ್‌ನಿಂದಲೇ ಭಯವಿದೆ. ಹಿರಿಯ ನಾಯಕರಿಗೆ ಹೊಣೆಗಾರಿಕೆ ಇಲ್ಲ. ಹಿರಿಯರು- ಕಿರಿಯರ ನಡುವೆ ಬಹಳಷ್ಟು ಅಂತರವಿದೆ. ಇದನ್ನು ಕಡಿಮೆಗೊಳಿಸಬೇಕು. ಈಚೆಗೆ `ಕಾಂಗ್ರೆಸ್ ನಡಿಗೆ ಜನರ ಬಳಿಗೆ~ ಕಾರ್ಯಕ್ರಮ ನಡೆಸಲಾಯಿತು. ರಾಜ್ಯಮಟ್ಟದ ನಾಯಕರು ಎನಿಸಿಕೊಂಡವರು ಸಮರ್ಪಕವಾಗಿ ಪಾಲ್ಗೊಳ್ಳಲಿಲ್ಲ.
ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಜಾರಿಗೆ ಕ್ರಮ ವಹಿಸಬೇಕು. ಪಕ್ಷದಲ್ಲಿರುವ ಸೂಕ್ಷಾತಿಸೂಕ್ಷ್ಮ ಜಾತಿಯ ಶಾಸಕ, ಜನಪ್ರತಿನಿಧಿಗೆ ದೆಹಲಿಗೆ ಬಂದು ನಾಯಕರ ಭೇಟಿಯಾಗುವ ಶಕ್ತಿ ಇಲ್ಲ. ಇಲ್ಲಿನ ನಾಯಕರು, ನಮ್ಮ ಸಮಸ್ಯೆ ಆಲಿಸುವುದಿಲ್ಲ. ಈ ಕೊರತೆ ನೀಗಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್, ಕೋಮುವಾದಿ ಮತ್ತು ಜಾತಿವಾದಿ ಪಕ್ಷಗಳ ವಿರುದ್ಧ ಹೋರಾಡಬೇಕಿದೆ. ಇದಕ್ಕಾಗಿ ಸಾಮೂಹಿಕ ನಾಯಕತ್ವ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಪಕ್ಷವನ್ನು ಭ್ರಷ್ಟಾಚಾರ ತಿನ್ನುತ್ತಿದೆ. ಹೀಗಾಗಿ, ಪಕ್ಷದ ನಿಯಮಗಳ ಪ್ರಕಾರ, ಶೇ 1ರಷ್ಟು ಆದಾಯ ಪಕ್ಷಕ್ಕೆ ದೇಣಿಗೆ ನೀಡಬೇಕು. ಪ್ರತಿ ಜಿಲ್ಲೆಯಲ್ಲಿಯೂ ಪಕ್ಷಕ್ಕೆ ಕಚೇರಿ ಮೊದಲಾದ ಮೂಲಸೌಕರ್ಯ ಕಲ್ಪಿಸಬೇಕು. ಆಗ, ವ್ಯಕ್ತಿಗಳ ವೈಭವೀಕರಣ ನಿಲ್ಲುತ್ತದೆ ಎಂದು ಸಲಹೆ ಬಂದಿತು.
ಅಭ್ಯರ್ಥಿ ಆಯ್ಕೆ ಸರಿಯಾಗಿರಲಿ
ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ಆಯ್ಕೆಯೂ ಸರಿಯಾಗಿರಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹೇಳಿದರು.
ನಗರದಲ್ಲಿ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ನಡೆದ ಮೊದಲ ಅಧಿವೇಶನದ ಸಂವಾದದಲ್ಲಿ ಭಾನುವಾರ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆಯಿಂದ ರಾಜಕೀಯ ಸ್ಥಿತ್ಯಂತರಗಳು ನಡೆದಿವೆ. ಆದ್ದರಿಂದ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳು ಒಳ್ಳೆಯವರಾಗಿದ್ದು, ಸಚ್ಚಾರಿತ್ರ್ಯ ಹೊಂದಿರಬೇಕು ಎಂದು ಅವರು ಸೂಚ್ಯವಾಗಿ ಹೇಳಿದರು.
ಬಿಜೆಪಿಯಲ್ಲಿ ಏನಾಗುತ್ತಿದೆ ಎಂಬುದನ್ನು ನೋಡುತ್ತಿದ್ದೀರಿ. ಅದೇ ರೀತಿ ನಮ್ಮಲ್ಲಿ ಆಂತರಿಕ ಭಿನ್ನಾಭಿಪ್ರಾಯ ಉಂಟಾಗಬಾರದು. ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆಯಬಹುದು. ಬಿಜೆಪಿ ಆಡಳಿತದಿಂದ ಜನಸಾಮಾನ್ಯ ಬೇಸತ್ತಿದ್ದಾನೆ. ಆದ್ದರಿಂದ ಕಾಂಗ್ರೆಸ್‌ಗೆ ಬೇರೆ ಹೋಲಿಕೆ ಬೇಡ. ಕಾಂಗ್ರೆಸ್‌ಗೆ ಆ ಪಕ್ಷವೇ ಸಾಟಿ ಎಂದರು.
ಕಾರ್ಯಕರ್ತರಲ್ಲಿ ಸಮಗ್ರವಾದ ಮಾಹಿತಿ ಇರುತ್ತದೆ. ಪಕ್ಷದ ಗ್ರಾಮಮಟ್ಟದ ಅಧ್ಯಕ್ಷನಿಂದ ಹಿಡಿದು ಬ್ಲಾಕ್, ಜಿಲ್ಲಾಮಟ್ಟದ ಪದಾಧಿಕಾರಿಗಳವರೆಗೆ ಎಲ್ಲರ ಬಳಿಯೂ ಒಳ್ಳೆಯ ಮಾಹಿತಿ ಇರುತ್ತದೆ. ಅದಕ್ಕಾಗಿ ಒಳ್ಳೆಯ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಬೇಕು ಎಂದು ಸೂಚಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಪ್ರಾತಿನಿಧ್ಯ ನೀಡುವ ಬಗ್ಗೆ ಚರ್ಚೆಗಳು ಕೇಳಿಬಂದವು. ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿದ ಬಗ್ಗೆ, ಕಾರ್ಯಕರ್ತರಲ್ಲಿನ ಗೊಂದಲ -ಹೀಗೆ ಹಲವಾರು ವಿಷಯಗಳು ಚರ್ಚೆಯಾದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.