ದಾವಣಗೆರೆ: ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳತ್ತಲೂ ಆಸಕ್ತಿ ವಹಿಸಬೇಕು ಎಂದು ಮೇಯರ್ ಸುಧಾ ಜಯರುದ್ರೇಶ್ ಹೇಳಿದರು.
ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಶಿಬಿರ ಉದ್ಘಾಟಿಸಿ ಸೋಮವಾರ ಅವರು ಮಾತನಾಡಿದರು.
ದಾನಮ್ಮ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಬಿ.ಎಸ್. ನಾಡಿಗೇರ್ ಮಾತನಾಡಿ, ಮಕ್ಕಳಿಗೆ ಕನ್ನಡ ಚೆನ್ನಾಗಿ ಬಂದರೆ ಇಂಗ್ಲಿಷ್ ಕಲಿಕೆ ಸುಲಭವಾಗುತ್ತದೆ. ಕನ್ನಡ ಒತ್ತಕ್ಷರ, ವಾಕ್ಯ ರಚನೆ ಬಗ್ಗೆ ಗಮನಕೊಡಬೇಕು. ಭಾಷೆಯ ಸ್ಪಷ್ಟತೆ ಬಗ್ಗೆ ಅರಿವಿರಬೇಕು ಎಂದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ ಶೆಣೈ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಮಕ್ಕಳಿಗೆ ಪರಿಚಯಿಸಬೇಕು. ಪಾಲಿಕೆ ವತಿಯಿಂದ ಮಕ್ಕಳ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಮಕ್ಕಳ ಸಾಹಿತಿ ಬಿ.ಕೆ. ವಿಜಯಾ, ಶಾರದಾ ಮಹಾರುದ್ರಯ್ಯ ಇದ್ದರು. ವೇದಿಕೆ ಕಾರ್ಯಾಧ್ಯಕ್ಷ ಕೆ.ಎನ್. ಸ್ವಾಮಿ ಸ್ವಾಗತಿಸಿದರು. ಗೀತಾ ಬದರಿನಾಥ ಕಾರ್ಯಕ್ರಮ ನಿರೂಪಿಸಿದರು. ವೀಣಾ ಕೃಷ್ಣಮೂರ್ತಿ ಪ್ರಾರ್ಥಿಸಿದರು.
ತೋಟಗಾರಿಕೆ ತರಬೇತಿ
ತೋಟಗಾರಿಕೆ ಇಲಾಖೆಯ ವ್ಯಾಪ್ತಿಯ ಚಿತ್ರದುರ್ಗ ತಾಲ್ಲೂಕಿನ ಐನಳ್ಳಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಮೇ. 2ರಿಂದ 2013ರ ಫೆ. 28ರವರೆಗೆ ರೈತರ ಮಕ್ಕಳಿಗೆ 10 ತಿಂಗಳು ತೋಟಗಾರಿಕೆ ತರಬೇತಿ ಹಮ್ಮಿಕೊಳ್ಳಲಾಗಿದೆ.
ಅರ್ಜಿಗಳನ್ನು ಏ.11ರಿಂದ 23ರವರೆಗೆ ವಿತರಿಸಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸಲು ಏ. 27 ಅಂತಿಮ ದಿನಾಂಕವಾಗಿದ್ದು, ಅಂದೇ ಸಂದರ್ಶನ ನಡೆಸಲಾಗುವುದು. ಸಾಮಾನ್ಯ ಅಭ್ಯರ್ಥಿಗಳಿಗೆ ್ಙ 10, ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಗೆ ್ಙ 5 ಅರ್ಜಿ ಶುಲ್ಕ ನಿಗದಿಪಡಿಸಿದೆ.
ತರಬೇತಿ ಪ್ರವೇಶ ಬಯಸುವ ಅಭ್ಯರ್ಥಿಗಳು ಕನಿಷ್ಠ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಯ ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿ, ಸ್ವಂತ ಸಾಗುವಳಿ ಮಾಡುತ್ತಿರಬೇಕು. ಈ ಬಗ್ಗೆ ಅರ್ಜಿಯೊಂದಿಗೆ ಪಹಣಿಯನ್ನು ನೀಡಬೇಕು. ತರಬೇತಿ ಅವಧಿಯಲ್ಲಿ ಅಭ್ಯರ್ಥಿಯು ವಸತಿ ಗೃಹದಲ್ಲಿ ತಂಗುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ, ಅಧೀನ ಕಚೇರಿ ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.