ADVERTISEMENT

ಪತ್ರಿಕೋದ್ಯಮ ಯಶಸ್ವಿಗೆ ಗಟ್ಟಿತನ ಅಗತ್ಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 10:35 IST
Last Updated 5 ಫೆಬ್ರುವರಿ 2011, 10:35 IST

ಹರಿಹರ: ಪತ್ರಿಕೋದ್ಯಮದಲ್ಲಿ ಖಚಿತ ಗುರಿ, ಸೃಜನಶೀಲತೆ, ಸಾಧಿಸುವ ಧೈರ್ಯ ಹಾಗೂ ಗಟ್ಟಿತನವಿದ್ದರೆ ಯಶಸ್ಸು ಶತಸಿದ್ಧ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗದ ಮುಖ್ಯಸ್ಥ ಡಾ.ಎನ್.ಎಸ್. ಅಶೋಕಕುಮಾರ್ ಅಭಿಪ್ರಾಯಪಟ್ಟರು.ನಗರದ ಎಸ್‌ಜೆವಿಪಿ ಸಭಾಂಗಣದಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಶುಕ್ರವಾರ ನಡೆದ ‘ಪ್ರಸ್ತುತ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ಸ್ಥಿತಿ’ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಪಿಯು ನಂತರ ಏನು ಎಂಬ ಪ್ರಶ್ನೆ ಎಲ್ಲಾ ವಿದ್ಯಾರ್ಥಿಗಳನ್ನು ಕಾಡುತ್ತದೆ. ದಿನನಿತ್ಯ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡರೆ, ಪಿಯು ನಂತರ ಏನು ಎಂಬ ಪ್ರಶ್ನೆಗೆ ಸಿದ್ಧ ಉತ್ತರ ದೊರೆಯುತ್ತದೆ. ನಿಮ್ಮ ಭವಿಷ್ಯ ಯಾವ ರಂಗದಲ್ಲಿ ಇದೆ ಎಂಬುದು ನಿಮ್ಮ ಹವ್ಯಾಸಗಳನ್ನು ಅವಲಂಭಿಸಿರುತ್ತದೆ. ಯಾವ ವಿಷಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಮಾಡಬೇಕು ಎಂಬ ವಿಷಯದಲ್ಲಿ ಇತರರು ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ನೀವೇ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ನಿಮ್ಮ ಭವಿಷ್ಯದ ಶಿಲ್ಪಿ ನೀವೇ ಎಂಬ ವಾಕ್ಯವನ್ನು ನೆನಪಿನಲ್ಲಿಟ್ಟುಕೊಂಡು ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.ತುರ್ತು ಪರಿಸ್ಥಿತಿಯ ನಂತರ ಪತ್ರಿಕೋದ್ಯಮ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ.

ಚೀನಾದಲ್ಲಿ 5,000, ನ್ಯೂಯಾರ್ಕ್‌ನಲ್ಲಿ 1,800 ಹಾಗೂ 300ಕ್ಕೂ ಕಡಿಮೆ ಎಫ್.ಎಂ. ರೇಡಿಯೋ ಹಾಗೂ ಟಿವಿ ಚಾನಲ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಅನ್ಯ ದೇಶಗಳಿಗೆ ಹೋಲಿಸಿದಾಗ ಭಾರತದಲ್ಲಿರುವ ಟಿವಿ ಹಾಗೂ ಎಫ್‌ಎಂ ಚಾನಲ್‌ಗಳ ಸಂಖ್ಯೆ ತೀರಾ ಕಡಿಮೆ. ಇತ್ತೀಚೆಗೆ ಕೇಂದ್ರ ಸರ್ಕಾರ, ನೂತನ 99 ಟಿವಿ ಚಾನಲ್‌ಗಳಿಗೆ, 300 ಎಫ್.ಎಂ. ರೇಡಿಯೋ ಚಾನಲ್ ಸ್ಥಾಪಿಸಲು ಪರವಾನಿಗೆ ನೀಡಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ದೇಶದಲ್ಲಿ ವಾರ್ಷಿಕ ` 26 ಸಾವಿರ ಕೋಟಿ ವಹಿವಾಟು ಹೊಂದಿದ ಪತ್ರಿಕೋದ್ಯಮದಲ್ಲಿ ಸೃಜನಶೀಲತೆ ಹೊಂದಿದ, ಭಾಷೆಯ ಮೇಲೆ ಉತ್ತಮ ಹಿಡಿತ ಸಾಧಿಸಿದ ಹಾಗೂ ಕಡಿಮೆ ಶಬ್ಧಗಳಲ್ಲಿ ಸಮಗ್ರ ವಿಷಯವನ್ನು ಕಟ್ಟಿಕೊಡುವ ಸಾಮರ್ಥ್ಯ ಹೊಂದಿದೆ. ಈ ಕ್ಷೇತ್ರದಲ್ಲಿ ಎಲ್ಲರಿಗೂ ಸಾಕಷ್ಟು ಅವಕಾಶಗಳಿವೆ ಎಂದರು.

ಕಾಲೇಜಿನ ಪ್ರಾಂಶುಪಾಲ ಎಚ್.ಎ. ಭಿಕ್ಷಾವರ್ತಿಮಠ ಮಾತನಾಡಿ, ನಿರಂತರ ಓದು ಉತ್ತಮ ಬರವಣಿಗೆಯ ಮೂಲವಾಗಿದೆ. ನಿಮ್ಮ ಸಾಮರ್ಥ್ಯವನ್ನು ನೀವೇ ಅರ್ಥ ಮಾಡಿಕೊಂಡು ಸೂಕ್ತ ಕೋರ್ಸ್‌ಗಳನ್ನು ಆಯ್ದುಕೊಳ್ಳಬೇಕು. ನಮ್ಮ ಯಶಸ್ಸಿಗೆ ನಾವೇ ಜವಾಬ್ದಾರರು ಎಂಬ ಸತ್ಯವನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ವಾಣಿ ಪ್ರಾರ್ಥಿಸಿದರು. ರೋಹಿಣಿ ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಟಿ.ಪಿ. ಗೀತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಮತಾ ವಂದಿಸಿದರು. ಉಮಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.