ADVERTISEMENT

ಪದವಿ ಪ್ರವೇಶ ಮಿತಿ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 4:50 IST
Last Updated 3 ಜುಲೈ 2013, 4:50 IST

ದಾವಣಗೆರೆ: ಸರ್ಕಾರಿ ಪದವಿ ಕಾಲೇಜುಗಳ ಪ್ರಸಕ್ತ ಸಾಲಿನ ಪ್ರವೇಶಕ್ಕೆ ಶೇ 50ರಷ್ಟು ಅವಕಾಶ ಕಲ್ಪಿಸುವಂತೆ ದಾವಣಗೆರೆ ವಿಶ್ವವಿದ್ಯಾಲಯ ತನ್ನ ವ್ಯಾಪ್ತಿಯ ಕಾಲೇಜುಗಳಿಗೆ ಆದೇಶಿಸಿದ್ದು, ಬಡ ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಗೆ ಸಿಲುಕಿದೆ.

ದಾವಣಗೆರೆ ವಿಶ್ವವಿದ್ಯಾಲಯ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿದೆ. ಈ ಅವಳಿ ಜಿಲ್ಲೆಗಳಲ್ಲಿ 25ಕ್ಕೂ ಹೆಚ್ಚು ಸರ್ಕಾರಿ ಪದವಿ ಕಾಲೇಜುಗಳು ಬಡ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಆಸರೆಯಾಗಿವೆ. ಪ್ರತಿವರ್ಷ ಬಿ.ಕಾಂ. ಬಿಎಸ್ಸಿ, ಬಿ.ಬಿ.ಎಂ, ಬಿ.ಎ. ಪದವಿ ತರಗತಿಗೆ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಳ್ಳುತ್ತಾ ಬಂದಿದ್ದಾರೆ. ಅದರಂತೆ ಎರಡು ಜಿಲ್ಲೆಯ ಕಾಲೇಜುಗಳಲ್ಲಿ ಜೂನ್ ತಿಂಗಳಿನಿಂದಲೇ ವಿದ್ಯಾರ್ಥಿಗಳಿಗೆ ಪ್ರವೇಶ ಅರ್ಜಿ ವಿತರಿಸಲಾಗಿದೆ. ಕಾಲೇಜು ಶುಲ್ಕ ಭರಿಸಿಕೊಳ್ಳುವ ಮೂಲಕ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ಕಾಲೇಜು ನೋಟಿಸ್ ಫಲಕದಲ್ಲಿ ಪ್ರಕಟಿಸಲಾಗಿದೆ. ಪ್ರವೇಶ ಪ್ರಕಿಯೆ ಶೇ 90 ರಷ್ಟು ಮುಗಿಯುತ್ತಾ ಬಂದ್ದ್ದಿದು; ಜುಲೈ 3ರಂದು ಪ್ರವೇಶಾತಿ ಕಡೆ ದಿನವಾಗಿದೆ.

ಎಲ್ಲ ಮುಗಿದ ನಂತರ ಜೂನ್ 27ರಂದು ದಾವಣಗೆರೆ ವಿಶ್ವವಿದ್ಯಾಲಯ ಶೇ 50 ಪ್ರವೇಶಾತಿ ನಿರ್ಬಂಧಿಸುವಂತೆ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿರುವುದು ಕಾಲೇಜು ಸಿಬ್ಬಂದಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.

2011-12ನೇ ಸಾಲಿನಲ್ಲಿ  ದಾವಣಗೆರೆ- ಚಿತ್ರದುರ್ಗ ಜಿಲ್ಲೆಗಳ ಸರ್ಕಾರಿ ಪಿಯು ಕಾಲೇಜುಗಳ ಪಿಯು ಉತ್ತೀರ್ಣಗೊಂಡ ವಿದ್ಯಾರ್ಥಿಗಳ ಸಂಖ್ಯೆ 5 ಸಾವಿರ ದಾಟುತ್ತದೆ. ಅವರಲ್ಲಿ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಪದವಿ ಪಡೆಯುವ ಕನಸು ಹೊತ್ತು ಬಂದ ಬಡ ವಿದ್ಯಾರ್ಥಿಗಳಿಗೆ ದಾವಣಗೆರೆ ವಿವಿ ಹೊರಡಿಸಿರುವ `ಶೇ 50ರಷ್ಟು ಪ್ರವೇಶ ಮಿತಿ ನಿರ್ಬಂಧ' ಆದೇಶ ಮಾರಕವಾಗುವಂತೆ ಕಾಣುತ್ತಿದೆ.

`ನಾನು ಮಂಡಕ್ಕಿ ಭಟ್ಟಿಯಲ್ಲಿ ಕೂಲಿ ಮಾಡಿ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ಕನಿಷ್ಠ ಪ್ರಥಮ ದರ್ಜೆ ಸಹಾಯಕ ನೌಕರಿಯನ್ನಾದರೂ ಸಂಪಾದಿಸಿಕೊಳ್ಳಬೇಕು ಎಂಬ ಗುರಿ ಇದೆ. ಅದಕ್ಕಾಗಿ ಪದವಿ ಶಿಕ್ಷಣ ಪಡೆಯಬೇಕಿದೆ. ಆದರೆ, ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಸಿಗುವುದು ದುಸ್ತರವಾಗುತ್ತಿದೆ. ಕೂಲಿ ನಂಬಿದ ನಾವು ದೂರದ ಊರಿನ ಕಾಲೇಜುಗಳಿಗೆ ಅಥವಾ ಖಾಸಗಿ ಕಾಲೇಜುಗಳಿಗೆ ಹೆಚ್ಚು ವಂತಿಗೆ ನೀಡಿ ಶಿಕ್ಷಣ ಪಡೆಯುವಷ್ಟು ಶಕ್ತಿ ಇಲ್ಲ. ಈಗ ಹೆಚ್ಚುವರಿ ಸೀಟುಗಳಿಗೆ ರೂ 500 ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ. ದಾವಣಗೆರೆ ವಿಶ್ವವಿದ್ಯಾಲಯ ಇಂಥ ಅವಾಂತರ ಮಾಡಿ ಬಡ ಮಕ್ಕಳ ಹೊಟ್ಟೆ ಮೇಲೆ ಹೊಡೆಯುತ್ತಿದೆ' ಎಂದು ವಿದ್ಯಾರ್ಥಿ ಖಲೀಲ್ `ಪ್ರಜಾವಾಣಿ' ಗೆ ಪ್ರತಿಕ್ರಿಯಿಸಿದರು.

ತುಘಲಕ್ ನೀತಿ ಕೈಬಿಡಿ...
ಪದವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ ಯಾವೊಬ್ಬ ವಿದ್ಯಾರ್ಥಿಗೂ ಪ್ರವೇಶ ನಿರಾಕರಿಸುವಂತಿಲ್ಲ ಎಂದು 2010ರ ಸರ್ಕಾರಿ ಆದೇಶ ತಿಳಿಸುತ್ತದೆ. ಈಗ ನಾವು ಸರ್ಕಾರಿ ಆದೇಶ ಪಾಲಿಸಬೇಕೋ ಇಲ್ಲವೇ ವಿವಿಯ ಆದೇಶಕ್ಕೆ ಮನ್ನಣೆ ನೀಡಬೇಕೋ ಎಂಬುದೇ ಗೊಂದಲವಾಗಿದೆ. ಸರ್ಕಾರಿ ಆದೇಶ ಪಾಲಿಸಿ ಪ್ರವೇಶ ನೀಡಿದರೆ, ಉಳಿದ ಮಕ್ಕಳಿಗೆ ಪರೀಕ್ಷಾ ಪ್ರವೇಶಕ್ಕೆ ವಿವಿ ಆದೇಶ ಅಡ್ಡಗಾಲಾಗುತ್ತದೆ. ಪ್ರವೇಶ ಆರಂಭಕ್ಕೂ ಮುಂಚೆ ಈ ಆದೇಶ ಹೊರಡಿಸಿದ್ದರೆ, ಪಾಲಿಸಬಹುದಾಗಿತ್ತು. ಕೊನೆಹಂತದಲ್ಲಿ ಆದೇಶ ಹೊರಡಿಸುವುದು ಎಷ್ಟು ಸರಿ? ಇದೊಂದು ರೀತಿ `ತುಘಲಕ್' ನೀತಿಯಂತಿದೆ. ಇಂಥ ನೀತಿಯನ್ನು ವಿವಿ ಕೈಬಿಡಬೇಕು ಎಂದು ಹೆಸರು ಹೇಳಬಯಸದ ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲರೊಬ್ಬರು ಅಳಲು ತೋಡಿಕೊಂಡರು.

ಸರ್ಕಾರಿ ಆದೇಶ ಪಾಲಿಸಿದ್ದೇವೆ
ಮೂಲಸೌಲಭ್ಯಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವಂತೆ ಸರ್ಕಾರದಿಂದ ನಮಗೂ ಆದೇಶ ಬಂದಿದೆ. ನಾವು ಅದನ್ನು ಪಾಲಿಸಿದ್ದೇವೆ. ಹಾಗಾಗಿ, ಅಗತ್ಯಕ್ಕಿಂತ ಹೆಚ್ಚು ಪ್ರವೇಶ ನೀಡದಂತೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಹೆಚ್ಚುವರಿ ಪ್ರವೇಶ ಕಲ್ಪಿಸಿದರೆ, ಅಗತ್ಯ ಮೂಲ ಸೌಕರ್ಯದ ಕೊರತೆ ಇದೆ ಎಂದು ವಿದ್ಯಾರ್ಥಿಗಳೇ ಪ್ರತಿಭಟನೆ ನಡೆಸಿರುವ ನಿದರ್ಶನಗಳಿವೆ.

ಹೆಚ್ಚುವರಿ ಪ್ರವೇಶಾತಿಗೆ ವಿವಿ ವ್ಯಾಪ್ತಿಯ ಕಾಲೇಜುಗಳಿಂದ ಬಂದಿರುವ ಬೇಡಿಕೆಯನ್ನು ಪರಿಗಣಿಸಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಸಂಪೂರ್ಣ ಪ್ರವೇಶಾತಿ ಕಲ್ಪಿಸುವಂತೆ ಸರ್ಕಾರ ಆದೇಶಿಸಿದರೆ ವಿ.ವಿ. ಅದನ್ನು ಪಾಲಿಸುತ್ತದೆ.
- ಪ್ರೊ.ಇಂದುಮತಿ, ಕುಲಪತಿ, ದಾವಣಗೆರೆ ವಿಶ್ವವಿದ್ಯಾಲಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.