ADVERTISEMENT

ಪರಿಸರ ನಾಶ; ಜೀವಸಂಕುಲಕ್ಕೆ ಗಂಡಾಂತರ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 5:20 IST
Last Updated 6 ಜೂನ್ 2013, 5:20 IST

ಹರಪನಹಳ್ಳಿ: ಮನುಷ್ಯನ ವೈಭೋಗದ ಜೀವನಶೈಲಿ ಹಾಗೂ ಸ್ವಾರ್ಥ, ದುರಾಸೆ ಪರಮಾವಧಿಯ ಪರಿಣಾಮ ಪ್ರಾಕೃತಿಕ ಸಂಪತ್ತು ವಿನಾಶಕ್ಕೆ ತಲುಪಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಊಹಿಸಲು ಅಸಾಧ್ಯವಾದಷ್ಟು ಗಂಭೀರ ಸನ್ನಿವೇಶವನ್ನು ನಾವು ಮೈಮೇಲೆ ಎಳೆದುಕೊಂಡಂತೆ ಎಂದು ಸ್ಥಳೀಯ ಜೆಎಂಎಫ್‌ಸಿ ಕಿರಿಯ ವಿಭಾಗದ ನ್ಯಾಯಾಧೀಶ ಪ್ರಕಾಶ್ ಬನಸೋಡೆ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ಬಾಗಳಿ ಗ್ರಾಮದ ಆರ್‌ಎಚ್‌ಸಿ ಪ್ರೌಢಶಾಲಾ ಆವರಣದಲ್ಲಿ ಬುಧವಾರ ತಾಲ್ಲೂಕು ಉಚಿತ ಕಾನೂನು ಸೇವಾ ಸಮಿತಿ, ಅರಣ್ಯ, ಶಿಕ್ಷಣ ಇಲಾಖೆ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ `ವಿಶ್ವ ಪರಿಸರ ದಿನಾಚರಣೆ- 2013' ಸಮಾರಂಭದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಭಿವೃದ್ಧಿಯ ನೆಪದಲ್ಲಿ ನೈಸರ್ಗಿಕ ಸಂಪತ್ತನ್ನು ಕುರೂಪಗೊಳಿಸುತ್ತಿದ್ದೇವೆ. ಕಾರ್ಖಾನೆಗಳು ಹೊರಸೂಸುವ ವಿಷಗಾಳಿಯೂ ಪ್ರಕೃತಿಯ ಅಸಮಾತೋಲನಕ್ಕೆ ಕಾರಣವಾಗಿದೆ. ಭೂಮಿಯಲ್ಲಿ ಅತ್ಯಧಿಕ ಇಳುವರಿ ಬಿಸಿಲ್ಗುದುರೆಯ ಬೆನ್ನುಬಿದ್ದಿರುವ  ನಾವು ಅಗತ್ಯಕ್ಕಿಂತ ಅತಿಯಾದ ರಸಾಯನಿಕ ಗೊಬ್ಬರ ಉಪಯೋಗಿಸುತ್ತಿದ್ದೇವೆ. ಹೀಗಾಗಿ ಭೂಮಿಯ ಒಡಲಾಳವೂ ಭಂಜರುಗಟ್ಟಿದೆ. ಶುದ್ಧ ನೀರು, ಗಾಳಿ ಪ್ರತಿಯ ಮೂಲಭೂತ ಹಕ್ಕು.

ಮನುಷ್ಯ- ಪ್ರಾಕೃತಿಕ ಸಂಪತ್ತಿನ ನಡುವೆ ಇರುವ ಅವಿನೋಭಾವ ನೈಸರ್ಗಿಕ ಸಹಜ ಸಂಬಂಧದ ಕೊಂಡಿ ಕಳಚದಂತೆ ಪರಿಸರವನ್ನು ಉಳಿಸಿ- ಬೆಳೆಸಬೇಕಾದದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಹಾಗೂ ಕರ್ತವ್ಯವೂ ಹೌದು ಎಂದರು.

ಶಾಲೆಯ ಮುಖ್ಯೋಪಾಧ್ಯಾಯ ಹನುಮಂತರಾಯಪ್ಪ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಸಿ. ದೀಪಕ್, ವಲಯ ಅರಣ್ಯಾಧಿಕಾರಿ ಎಂ.ಡಿ . ಮೋಹನ್, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ. ಪೂಜಾರ್, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಆರ್. ಕೆಂಚನಗೌಡ, ವಕೀಲರ ಸಂಘದ ಅಧ್ಯಕ್ಷ ಪಿ. ಜಗದೀಶಗೌಡ, ಕಾರ್ಯದರ್ಶಿ ಟಿ. ವೆಂಕಟೇಶ್, ಉಪನ್ಯಾಸಕ ವಿ.ಎಚ್. ರಮೇಶ್, ವಕೀಲರಾದ ಸಿ. ಸಿದ್ದಪ್ಪ, ಹನುಮಂತಪ್ಪ, ಮಂಜುನಾಥ, ಶಿಕ್ಷಣ ಸಂಯೋಜಕ ಬಸವರಾಜಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.