ADVERTISEMENT

ಪಿಎಚ್.ಡಿ, ಎಂ.ಫಿಲ್ ಆಕಾಂಕ್ಷಿಗಳ ಭವಿಷ್ಯ ಅತಂತ್ರ

ದಾವಣಗೆರೆ ವಿಶ್ವವಿದ್ಯಾಲಯ: ಹೊಸ ಕೋರ್ಸ್‌ಗೆ ಸಿಬ್ಬಂದಿ ಕೊರತೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 10:54 IST
Last Updated 11 ಡಿಸೆಂಬರ್ 2012, 10:54 IST

ದಾವಣಗೆರೆ:`ತಮಸೋಮಾ ಜ್ಯೋತಿರ್ಗಮಯ' ಎಂಬ ಧ್ಯೇಯ ವಾಕ್ಯ ಹೊತ್ತ ಮಧ್ಯಕರ್ನಾಟಕದ ದಾವಣಗೆರೆ ವಿಶ್ವವಿದ್ಯಾಲಯ ಎರಡು ವರ್ಷದಿಂದ ಎಂ.ಫಿಲ್ ಮತ್ತು ಪಿಎಚ್.ಡಿ ಪ್ರವೇಶ ಪರೀಕ್ಷೆ ನಡೆಸದೇ ಅಭ್ಯರ್ಥಿಗಳನ್ನು ಅತಂತ್ರ ಸ್ಥಿತಿಗೆ ದೂಡಿದೆ.

2011-12ನೇ ಸಾಲಿನಲ್ಲಿ ವಿಶ್ವವಿದ್ಯಾಲಯ ತಾನು ಆರಂಭಿಸಿದ್ದ ನೂತನ ಕೋರ್ಸ್‌ಗಳಾದ ಕನ್ನಡ, ಇಂಗ್ಲಿಷ್ ಮತ್ತು ಸಮಾಜಶಾಸ್ತ್ರ ವಿಷಯಗಳು ಸೇರಿದಂತೆ ವಾಣಿಜ್ಯ, ಅರ್ಥಶಾಸ್ತ್ರ, ಎಂಬಿಎ, ಎಂಎಸ್‌ಡಬ್ಲ್ಯೂ, ಎಂಎಡ್, ಬಯೋ ಕೆಮಿಸ್ಟ್ರಿ ಮತ್ತು ಮೈಕ್ರೋಬಯಾಲಜಿ ವಿಷಯಗಳಲ್ಲಿ ಎಂ.ಫಿಲ್ ಮತ್ತು ಪಿಎಚ್.ಡಿಗಾಗಿ ಅರ್ಜಿ ಆಹ್ವಾನಿಸಿತ್ತು. ಎಂ.ಫಿಲ್ ಮತ್ತು ಪಿಎಚ್.ಡಿಗಾಗಿ ಒಟ್ಟು 1,614 ಅರ್ಜಿಗಳು ಬಂದಿದ್ದವು. ಆದರೆ, ಈ ಅಭ್ಯರ್ಥಿಗಳಿಗೆ ಇದುವರೆಗೂ ವಿವಿ ಪ್ರವೇಶ ಪರೀಕ್ಷೆ ನಡೆಸಿಲ್ಲ ಎಂಬುದು ವಿದ್ಯಾರ್ಥಿಗಳ ದೂರು.

ವಿವಿ ಅಸ್ತಿತ್ವಕ್ಕೆ ಬಂದು ಆರಂಭಿಸಿದ ಹೊಸ ಕೋರ್ಸ್‌ಗಳನ್ನು ಹೊರತುಪಡಿಸಿ ವಾಣಿಜ್ಯ, ಅರ್ಥಶಾಸ್ತ್ರ, ಎಂಬಿಎ, ಎಂಎಸ್‌ಡಬ್ಲ್ಯೂ, ಎಂಎಡ್, ಬಯೋಕೆಮಿಸ್ಟ್ರಿ ಮತ್ತು ಮೈಕ್ರೋ ಬಯಾಲಜಿ ವಿಷಯಗಳಲ್ಲಿ ಎಂ.ಫಿಲ್ ಮತ್ತು ಪಿಎಚ್.ಡಿ ಪ್ರವೇಶ ಪರೀಕ್ಷೆ ನಡೆಸಲಾಗಿದೆ. ಅಲ್ಲದೇ, ಈ ವಿಭಾಗಗಳಲ್ಲಿ ಈಗಾಗಲೇ ಸಂಶೋಧನೆ ಕಾರ್ಯ ಆರಂಭವಾಗಿದೆ ಎನ್ನುತ್ತವೆ ವಿವಿ ಮೂಲಗಳು.

`ಕನ್ನಡ, ಇಂಗ್ಲಿಷ್ ಮತ್ತು ಸಮಾಜಶಾಸ್ತ್ರ ವಿಷಯಗಳಲ್ಲಿ ಸಂಶೋಧನೆ ಮಾಡಬೇಕೆಂಬ ಆಕಾಂಕ್ಷೆ ಹೊಂದಿದ್ದ ವಿದ್ಯಾರ್ಥಿಗಳು ದಾವಣಗೆರೆ ವಿವಿಯನ್ನು ನಂಬಿ ಅರ್ಜಿ ಹಾಕ್ದ್ದಿದಾರೆ. ಆದರೆ, ವಿವಿ ಇದುವರೆಗೂ ಪ್ರವೇಶ ಪರೀಕ್ಷೆ ನಡೆಸಿಲ್ಲ. ಇದನ್ನೇ ನಂಬಿ ಇತರ ವಿವಿಗಳಿಗೆ ಅರ್ಜಿ ಹಾಕಿರಲಿಲ್ಲ. ಈಗ ಇಲ್ಲಿಯೂ ಸಂಶೋಧನೆ ಕೈಗೊಳ್ಳದೇ, ಇತರ ವಿವಿಯಲ್ಲೂ ಸಂಶೋಧನೆ ಕೈಗೊಳ್ಳದೇ ಸಮಯ ಹಾಗೂ ಅರ್ಜಿ ಶುಲ್ಕ ವ್ಯರ್ಥವಾಗುವಂತಾಗಿದೆ.

ಅಲ್ಲದೇ, ಪ್ರಸ್ತಕ ಶೈಕ್ಷಣಿಕ ಸಾಲಿನಲ್ಲೂ ವಿವಿ ಎಂ.ಫಿಲ್, ಪಿಎಚ್.ಡಿಗೆ ಅರ್ಜಿ ಕರೆದಿದೆ. ಆದರೆ, ಅರ್ಜಿ ವಿತರಿಸಿಲ್ಲ. ಹಿಂದಿನ ವರ್ಷವೇ ಪರೀಕ್ಷೆ ನಡೆಸಿಲ್ಲ ಎಂದ ಮೇಲೆ ಹೊಸ ಅಭ್ಯರ್ಥಿಗಳಿಗೆ ಹೇಗೆ ಪ್ರವೇಶ ನೀಡುತ್ತಾರೆ? ಒಟ್ಟಾರೆ ವಿವಿ ಈ ವಿಷಯದಲ್ಲಿ ಸರಿಯಾದ ಮಾಹಿತಿ ನೀಡದೇ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟು ಮಾಡುತ್ತಿದೆ' ಎಂದು ದೂರುತ್ತಾರೆ ಸಂಶೋಧನಾರ್ಥಿ ಎಂ.ಟಿ. ನಾಗರಾಜ.

`ಮಾಹಿತಿ ಹಕ್ಕು ಕಾಯ್ದೆ ಅಡಿ ವಿವಿಗೆ ಮಾಹಿತಿ ಕೇಳಿದಾಗ 2012-13ನೇ ಸಾಲಿನಲ್ಲಿ ಎಂ.ಫಿಲ್, ಪಿಎಚ್.ಡಿಗೆ ಜಾಹೀರಾತು ನೀಡಿಲ್ಲ ಎಂದು ವಿವಿ ತಡವಾಗಿ ಉತ್ತರಿಸಿದೆ. ಆದರೆ, 2012ರ 29ನೇ ಜೂನ್‌ನಲ್ಲಿ ವಿವಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ. ಈಗಾಗಲೇ ರಾಜ್ಯದ ಇತರ ವಿವಿಗಳಲ್ಲಿ ಎಂ.ಫಿಲ್ ಮತ್ತು ಪಿಎಚ್.ಡಿ ಪ್ರವೇಶ ಪ್ರಕ್ರಿಯೆ ಮುಗಿದಿವೆ. ದಾವಣಗೆರೆ ವಿವಿಯನ್ನೇ ನಂಬಿದ್ದ ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ' ಎನ್ನುತ್ತಾರೆ ನಾಗರಾಜ.

ರೆಗ್ಯುಲರ್ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ವಿವಿ ಬಾಹ್ಯ ಅಭ್ಯರ್ಥಿಗಳಿಂದಲೂ ಸಂಶೋಧನೆಗಾಗಿ ಅರ್ಜಿ ಆಹ್ವಾನಿಸಿತ್ತು. ಬಾಹ್ಯ ಅಭ್ಯರ್ಥಿಗಳು ಇತರ ವಿವಿಗಳ ಮಾರ್ಗದರ್ಶಕರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ ಎಂದು ವಿವಿಯ ಜಾಹೀರಾತು ತಿಳಿಸಿತ್ತು. ಆದರೆ, ಬಾಹ್ಯ ವಿದ್ಯಾರ್ಥಿಗಳಿಗೂ ವಿವಿ ಪ್ರವೇಶ ಪರೀಕ್ಷೆ ನಡೆಸಿಲ್ಲ. ಇದರಿಂದ ಸಂಶೋಧನೆ ಕೈಗೊಳ್ಳಬೇಕಾಗಿದ್ದ ನಮ್ಮ ಕನಸು ನುಚ್ಚುನೂರಾಗಿದೆ. ವಿವಿ ಪ್ರವೇಶ ಪರೀಕ್ಷೆ ನಡೆಸಲಿ. ಇಲ್ಲವಾದಲ್ಲಿ ಅರ್ಜಿ ಶುಲ್ಕವನ್ನಾದರೂ ವಾಪಸ್ ನೀಡಲಿ ಎಂಬುದು ವಿದ್ಯಾರ್ಥಿಗಳ ಒತ್ತಾಯ.

ವಿವಿ ಸ್ಪಷ್ಟನೆ
2011-12ನೇ ಸಾಲಿನಲ್ಲಿ ಹೊಸ ಕೋರ್ಸ್‌ಗಳ ವಿಷಯಗಳ ಎಂ.ಫಿಲ್, ಪಿಎಚ್.ಡಿ ಪ್ರವೇಶ ಪರೀಕ್ಷೆ ನಡೆಸಲಾಗಿಲ್ಲ. ಕಾರಣ ಸಿಬ್ಬಂದಿ ಕೊರತೆ. ಈ ವಿಭಾಗಗಳಲ್ಲಿ  ಅತಿಥಿ  ಉಪನ್ಯಾಸಕರಿದ್ದಾರೆ.  ಯುಜಿಸಿ ನಿಯಮಾವಳಿ  ಪ್ರಕಾರ, ಗೈಡ್  ಆಗುವವರು ಪಿಎಚ್.ಡಿ  ಪದವಿ ಪಡೆದಿದ್ದು ಕನಿಷ್ಠ  3 ವರ್ಷ  ಸೇವೆ  ಸಲ್ಲಿಸಿರಬೇಕು. ಮುಖ್ಯವಾಗಿ ಜರ್ನಲ್‌ಗಳಲ್ಲಿ ಲೇಖನಗಳು ಪ್ರಕಟವಾಗಿರಬೇಕು ಮತ್ತು ಪುಸ್ತಕಗಳನ್ನು ಹೊರತಂದಿರಬೇಕು.

ಅರ್ಹ ಮಾರ್ಗದರ್ಶಕರ ನೇಮಕಾತಿಗಾಗಿ ವಿವಿ ಕಾರ್ಯತತ್ಪರವಾಗಿದೆ. ಅಲ್ಲದೇ, ಇತರ ವಿವಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಅರ್ಹ ಮಾರ್ಗದರ್ಶಕರನ್ನು ಅಭ್ಯರ್ಥಿಗಳಿಗೆ ಕಲ್ಪಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಅಲ್ಲದೇ, ವಿವಿಗೆ ಪಿಎಚ್.ಡಿ ಸಂಯೋಜಕರ ನೇಮಕ ಆಗಬೇಕು. ಸರ್ಕಾರ ಸಿಬ್ಬಂದಿ ನೇಮಕ ಮಾಡದ ಹೊರತು ಕೆಲಸ ಮಾಡುವುದು ಕಷ್ಟ. ಇದಕ್ಕೆ ತುಸು ಕಾಲಾವಕಾಶ ಬೇಕು.

ಶೀಘ್ರದಲ್ಲೇ ಪ್ರವೇಶ ಪರೀಕ್ಷೆ ನಡೆಸಲಾಗುವುದು. 2012-13ನೇ ಸಾಲಿನಲ್ಲಿ ಅಭ್ಯರ್ಥಿಗಳಿಗೆ ಇನ್ನೂ ಅರ್ಜಿ ವಿತರಿಸಿಲ್ಲ. ಪತ್ರಿಕೆಯ ಜಾಹೀರಾತಿನಲ್ಲಿ ಅನ್ಯ ವಿವಿಗಳ ಅಧ್ಯಾಪಕರೊಂದಿಗೆ ಒಡಂಬಡಿಕೆ ಆಗಿ, ಬಾಹ್ಯಮಾರ್ಗದರ್ಶಕರು, ಮಾನ್ಯತೆ ಪಡೆದ ಮಾರ್ಗದರ್ಶಕರು ಮತ್ತು ಖಾಲಿ ಸ್ಥಾನಗಳು ದೊರಕಿದಲ್ಲಿ ಮಾತ್ರ ಸೀಟು ನೀಡಲಾಗುವುದು ಎಂದು ಸೂಚನೆ ನೀಡಲಾಗಿದೆ  ಎಂದು ದಾವಣಗೆರೆ ವಿವಿ ಕುಲಸಚಿವ (ಆಡಳಿತ) ಡಾ.ಡಿ.ಎಸ್. ಪ್ರಕಾಶ್ ಸ್ಪಷ್ಟನೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.