ADVERTISEMENT

ಪುರಸಭೆ: ರೂ 74.72ಲಕ್ಷ ಅವ್ಯವಹಾರ ಆರೋಪ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 6:35 IST
Last Updated 18 ಜನವರಿ 2012, 6:35 IST

ಹರಪನಹಳ್ಳಿ: ಪುರಸಭೆ ನಿವೇಶನ ಪ್ರಭಾವಿಗಳ ಪಾಲು. ಅಕ್ರಮ ಡೋರ್ ನಂಬರ್ ಸೇರ್ಪಡೆ. ಉದ್ಯಾನಕ್ಕೆ ಮೀಸಲಿಟ್ಟ ನಿವೇಶನದಲ್ಲಿ ಅಕ್ರಮ ಕಟ್ಟಡ ನಿರ್ಮಾಣ. ನಿರ್ಗಮಿತ ಅಧ್ಯಕ್ಷರ ಅವಧಿಯಲ್ಲಿ ತುಘಲಕ್ ದರ್ಬಾರ್; ್ಙ 74.72ಲಕ್ಷ ಅವ್ಯವಹಾರ. 2011ನೇ ಸಾಲಿನ ಜಮಾ-ಖರ್ಚಿನ ಅನುಮೋದನೆಗೆ ಕೌನ್ಸಿಲ್ ನಿರಾಕರಣೆ. ಅಧಿಕಾರಿ ಅಸಭ್ಯ ವರ್ತನೆಗೆ ಸದಸ್ಯರ ಆಕ್ರೋಶ, ಕ್ಷಮೆಯಾಚಿಸಿದ ಮುಖ್ಯಾಧಿಕಾರಿ...

-ಇವು ಮಂಗಳವಾರ ಪುರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ ಬಿ. ಮಹಬೂಬ್ ಸಾಹೇಬ್ ಅಧ್ಯಕ್ಷತೆಯಲ್ಲಿ ಅಪರೂಪಕ್ಕೆ ನಡೆದ ಸಾಮಾನ್ಯಸಭೆಯಲ್ಲಿ ಕಾವೇರಿದ ಚರ್ಚೆಗೆ ಗ್ರಾಸವಾದ ಪ್ರಮುಖ ಮುಖ್ಯಾಂಶಗಳು.
ಸಭೆ ಆರಂಭವಾಗುತ್ತಿದ್ದಂತಿಯೇ ಮೂರ‌್ನಾಲ್ಕು ತಿಂಗಳ ಹಿಂದೆ ನಡೆದ ಸಾಮಾನ್ಯಸಭೆಯ ನಡಾವಳಿಯ ಅನುಪಾಲನ ವರದಿಯ ಮೇಲಿನ ಚರ್ಚೆಯನ್ನು ಕೈಗೆತ್ತಿಕೊಳ್ಳಲಾಯಿತು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಫಲಾನುಭವಿಗಳ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಭೆ ಅನುಮೋದನೆ ನೀಡಿದೆ, ಆದರೆ, 4 ತಿಂಗಳು ಕಳೆದರೂ, ಫಲಾನುಭವಿ ಗಳಿಗೆ ಕಾಮಗಾರಿ ವರ್ಕ್‌ಆರ್ಡರ್ ವಿತರಿಸದೆ ವಿನಾಕಾರಣ ವಿಳಂಬ ಮಾಡಲಾಗುತ್ತಿದೆ. ಜನರನ್ನು ಕಚೇರಿಗೆ ಅಲೆದಾಡಿಸುತ್ತಿದ್ದೀರಿ ಎಂದು ಸದಸ್ಯರಾದ ಎಂ.ವಿ. ಅಂಜಿನಪ್ಪ, ಚಿಕ್ಕೇರಿ ಬಸಪ್ಪ ಇತರರು ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು.

ಕಚೇರಿಯ ದಾಖಲಾತಿಯನ್ನು ಕೆಲ ಪ್ರಭಾವಿ ಸದಸ್ಯರು ತಮ್ಮ ಇಚ್ಛಾನುಸಾರ ತಿದ್ದುಪಡಿ ಮಾಡಿಕೊಳ್ಳುತ್ತಿದ್ದಾರೆ. ಅಸೆಸ್‌ಮೆಂಟ್ ನೋಂದಣಿ ಪುಸ್ತಕವನ್ನು ಸದಸ್ಯರೊಬ್ಬರು ತಿದ್ದುಪಡಿ ಮಾಡುವ ಮೂಲಕ ಪುರಸಭೆಯ ಖಾಲಿ ನಿವೇಶನವನ್ನು ಅಕ್ರಮವಾಗಿ ಬೇನಾಮಿ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ. ಪುರಸಭೆಯ ವ್ಯಾಪ್ತಿಯ ಆಯಕಟ್ಟಿನ ಜಾಗದಲ್ಲಿ ಉದ್ಯಾನ ನಿರ್ಮಾಣದ ಉದ್ದೇಶಕ್ಕೆ ಮೀಸಲಿಟ್ಟಿರುವ ಜಾಗದಲ್ಲಿ, ಕೆಲ ಪ್ರಭಾವಿಗಳು ಅಕ್ರಮ ಡೋರ್ ನಂಬರ್ ಮಾಡಿಸಿಕೊಂಡಿದ್ದಾರೆ. ಸುಮಾರು 100-150ನಿವೇಶನದ ಅಕ್ರಮ ಭೂಕಬಳಿಕೆಯಾಗಿದೆ. ಈ ಅಕ್ರಮ ವ್ಯವಹಾರದಲ್ಲಿ ಅಧಿಕಾರಿಗಳು ಷಾಮೀಲಾಗಿದ್ದಾರೆ. ಇದಕ್ಕೆ ಪೂರಕವಾಗಿ ತಮ್ಮ ಬಳಿ ಅಗತ್ಯ ದಾಖಲೆಗಳು ಇವೆ. ಕೂಡಲೇ ಇಂತಹ ಅತಿಕ್ರಮಣದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸದಸ್ಯರಾದ ಎಚ್.ಕೆ. ಹಾಲೇಶ್, ಎಂ.ವಿ. ಅಂಜಿನಪ್ಪ, ಚಿಕ್ಕೇರಿ ಬಸಪ್ಪ, ಟಿ. ವೆಂಕಟೇಶ್ ಇತರರು ಅಧಿಕಾರಿಗಳ ಕಾರ್ಯವೈಖರಿ ಕುರಿತು ತೀವ್ರ ವಾಗ್ದಾಳಿ ನಡೆಸಿದರು.

ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತಿದ್ದರೇ, ಕೂಡಲೇ ಕಟ್ಟಡ ತೆರವುಗೊಳಿಸಿ ಎಂದು ಸದಸ್ಯ ಪಟೇಲ್ ಬೆಟ್ಟನಗೌಡ ಸಲಹೆ ನೀಡಿದರು. ಮಧ್ಯಪ್ರವೇಶಿಸಿದ ಮುಖ್ಯಾಧಿಕಾರಿ ಎಚ್.ಬಿ. ಜಟ್ಟಪ್ಪ ಒಂದೆರಡು ದಿನಗಳಲ್ಲಿ  ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಫೆಬ್ರುವರಿ 2011ರಿಂದ ಡಿಸೆಂಬರ್ 2011ರವರೆಗಿನ ಜಮಾ-ಖರ್ಚು ಚರ್ಚಿನ ಅನುಮೋದನೆಗೆ ಸಭೆ ಮುಂದೆ ಮಂಡಿಸುತ್ತಿದ್ದಂತೆಯೇ ಸಭೆ ಕಾವೇರಿದ ಚರ್ಚೆಯತ್ತ ಹೊರಳಿತು. ನಿರ್ಗಮಿತ ಅಧ್ಯಕ್ಷರ ಅವಧಿಯ ಜುಲೈ 2009ರಿಂದ ಮೇ 2011ರವರೆಗೆ ನಡೆದ ಜಮಾ-ಖರ್ಚಿನ ವ್ಯವಹಾರ ದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಸದಸ್ಯರಾದ ಅಂಜಿನಪ್ಪ, ಎಚ್.ಕೆ. ಹಾಲೇಶ್, ಪಟೇಲ್ ಬೆಟ್ಟನಗೌಡ, ಟಿ. ವೆಂಕಟೇಶ್, ಎಸ್.ಕೆ. ಸಲಾಂ,  ಶುಕೂರ್ ಸಾಹೇಬ್ ಇತರರು ಆರೋಪಿಸಿದರು.

ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಗೆ ಬಿಡುಗಡೆಯಾದ ್ಙ 5ಕೋಟಿ, ಎಸ್‌ಎಫ್‌ಸಿ ಯೋಜನೆ ಯ 2010-11ರಲ್ಲಿ ್ಙ 2.15ಲಕ್ಷ, ಎಸ್‌ಎಫ್‌ಸಿ 2011-12ರಲ್ಲಿ ್ಙ 35.40ಲಕ್ಷ ಹಾಗೂ 2010-11ನೇ ಸಾಲಿನ 13ನೇ ಹಣಕಾಸು ಯೋಜನೆ ಅಡಿ ್ಙ 25.02ಲಕ್ಷ ಅನುದಾನ ಸೇರಿದಂತೆ ಒಟ್ಟು ್ಙ 7.75ಕೋಟಿ ಅನುದಾನ ಬಿಡುಗಡೆಯಾಗಿದೆ. ಆದರೆ, ಪುರಸಭೆಯ ಖಾತೆಗೆ ಜಮೆಯಾದ ಅನುದಾನಕ್ಕಿಂತಲೂ, ಹೆಚ್ಚಿನ ಅನುದಾನ ಖರ್ಚಾಗಿರುವ ಮಾಹಿತಿ ಇದೆ. ಹೀಗಾಗಿ, ಸುಮಾರು ್ಙ 74.72ಲಕ್ಷ ಮೊತ್ತದ ಹಣ ವ್ಯತ್ಯಾಸ ಕಂಡುಬರುತ್ತಿದೆ. ಯಾವ ನಿಧಿಯಲ್ಲಿ ಎಷ್ಟೆಷ್ಟು ಹಣ ಖರ್ಚಾಗಿದೆ ಎಂಬುದರ ಕುರಿತು ತಿಳಿಯಲು ಸಾಧ್ಯವಾಗುತ್ತಿಲ್ಲ ಎಂದು ಯೋಜನಾ ನಿರ್ದೇಶಕರ ಕಚೇರಿಗೆ ಮುಖ್ಯಾಧಿಕಾರಿ ಸಲ್ಲಿಸಿರುವ ವರದಿಯ ಪ್ರತಿಯನ್ನು ಸದಸ್ಯರು ಸಭೆಯಲ್ಲಿ ಪ್ರದರ್ಶಿಸಿದರು.

ಜೂನ್ 17, 2009-  ಮೇ 30, 2011ರ ಅವಧಿಯಲ್ಲಾದ ಜಮಾ-ಖರ್ಚು ವಿವರದ ಸಂಪೂರ್ಣ ತನಿಖೆಯನ್ನು ಲೋಕಾಯುಕ್ತ ಸಂಸ್ಥೆಗೆ ಒಪ್ಪಿಸಿರುವ ಹಿನ್ನೆಲೆಯಲ್ಲಿ ಫೆ. 2011-ಡಿ. 2011ರ ಅವಧಿಯಲ್ಲಾದ ಪುರಸಭೆಯ ವಿವಿಧ ಯೋಜನೆಗಳ ಜಮಾ-ಖರ್ಚಿನ ವಿವರದ ಅನುಮೋದನೆ ನೀಡುವುದಕ್ಕೆ ಸಭೆ  ಖಡಾಖಂಡಿತವಾಗಿ ನಿರಾಕರಿಸಿತು. ಜತೆಗೆ, ಟೆಂಡರ್‌ರಹಿತವಾಗಿ ಕೈಗೆತ್ತಿಕೊಂಡಿರುವ ಯಾವುದೇ ಕಾಮಗಾರಿಯ ಅನುಮೋದನೆಯ ವಿಧೇಯಕವನ್ನು ಸಹ ಸಭೆ ತಿರಸ್ಕರಿಸಿತು.

ಕಚೇರಿಯ ಕಾಂಪೌಂಡ್ ಮತ್ತು ಗೇಟ್ ದುರಸ್ತಿಪಡಿಸಿದ ಗುತ್ತಿಗೆದಾರ ಎಸ್. ಇಲಿಯಾಸ್ ಅವರಿಗೆ ಪಾವತಿಸಿದ ್ಙ 39ಸಾವಿರ ಅನುದಾನ ಸೇರಿದಂತೆ ವಿವಿಧ ಟೆಂಡರ್‌ರಹಿತ ಕಾಮಗಾರಿ ಸಂಬಂಧಿಸಿದಂತೆ ಸಭೆಯಲ್ಲಿದ್ದ, ಎಂಜಿನಿಯರ್ ಮುರುಗೇಂದ್ರಪ್ಪ ಮುಖ್ಯಾಧಿಕಾರಿ ಸೂಚಿಸಿದ್ದಾರೆ. ಹೀಗಾಗಿ, ನಾನು ಗುತ್ತಿಗೆದಾರರಿಗೆ ಬಿಲ್ ಪಾವತಿಸಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದು, ಸದಸ್ಯರನ್ನು ಕೆರಳಿಸಿತು. ಮುರುಗೇಂದ್ರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದ ಸದಸ್ಯರನ್ನು ಮುಖ್ಯಾಧಿಕಾರಿ ಸಮಾಧಾನಪಡಿಸಿ, ಸದಸ್ಯರ ಕ್ಷಮೆಯಾಚಿಸಿದರು. ಸಭೆಯ ಗೌರವಕ್ಕೆ ಧಕ್ಕೆಯಾಗಿದ್ದರೇ ವಿಷಾದಿಸುತ್ತೇನೆ ಎಂದು ಮುರುಗೇಂದ್ರಪ್ಪ ಹೇಳಿದರು.

ಉಳಿದಂತೆ, ವಾಣಿಜ್ಯ ಬಳಕೆಯ ನೀರಿನ ಗ್ರಾಹಕರ ನಳಗಳಿಗೆ ಮೀಟರ್ ಅಳವಡಿಕೆ ಸೇರಿದಂತೆ ವಿವಿಧ ವಿಷಯಗಳಿಗೆ ಸಭೆ ಅನುಮೋದನೆ ನೀಡಿತು. ಉಪಾಧ್ಯಕ್ಷೆ ಸುಮಿತ್ರಾ ಬಾಪೂಜಿ, ಮುಖ್ಯಾಧಿಕಾರಿ ಎಚ್.ಬಿ. ಜಟ್ಟಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.