ADVERTISEMENT

‘ಪ್ರತ್ಯೇಕ ಧರ್ಮ ವಿಷಯ ಹೊಸದಲ್ಲ’

ರಾಹುಲ್‌ ಜತೆ ಸಂವಾದದಲ್ಲಿ ಸಿದ್ದರಾಮಯ್ಯ ಉತ್ತರ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 8:12 IST
Last Updated 5 ಏಪ್ರಿಲ್ 2018, 8:12 IST

ದಾವಣಗೆರೆ: ಲಿಂಗಾಯತ ಪ್ರತ್ಯೇಕ ಧರ್ಮ ಹೊಸ ವಿಷಯ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ‍ಪಡಿಸಿದರು.ಜನಾಶೀರ್ವಾದ ಯಾತ್ರೆಯ ಎರಡನೇ ದಿನವಾದ ಬುಧವಾರ ನಗರದ ಎಸ್‌.ಎಸ್‌.ಸಾಂಸ್ಕೃತಿಕ ಭವನದಲ್ಲಿ ವರ್ತಕರ ಜತೆ ಸಂವಾದದಲ್ಲಿ ವಿದ್ಯಾರ್ಥಿನಿಯೊಬ್ಬಳು ಲಿಂಗಾಯತ ಧರ್ಮ ಪ್ರತ್ಯೇಕಗೊಳಿಸುವ ಅಗತ್ಯವಿತ್ತೇ ಎಂದು ಕೇಳಿದ ಪ್ರಶ್ನೆಗೆ ತಕ್ಷಣ ರಾಹುಲ್‌, ಅದಕ್ಕೆ ಸಿದ್ದರಾಮಯ್ಯ ಉತ್ತರಿಸುತ್ತಾರೆ ಎಂದು ಅವರಿಗೆ ಮೈಕ್‌ ಕೊಟ್ಟರು. ‘ಇದು ಹೊಸ ವಿಷಯವಲ್ಲ. 850 ವರ್ಷಗಳ ಹಿಂದೆಯೇ ಬಸವಣ್ಣ ಅವರ ಕಾಲದಲ್ಲಿ ಲಿಂಗಾಯತ ಧರ್ಮ ಅಸ್ತಿತ್ವದಲ್ಲಿತ್ತು. ಇದನ್ನೇನೂ ನಮ್ಮ ಸರ್ಕಾರ ಹೊಸದಾಗಿ ಮಾಡಿಲ್ಲ. ವೀರಶೈವ ಮಹಾಸಭಾದಿಂದ ನನ್ನನ್ನು ಸನ್ಮಾನಿಸುವ ಸಂದರ್ಭದಲ್ಲಿ ಪ್ರತ್ಯೇಕ ಧರ್ಮದ ಬಗ್ಗೆ ಮನವಿ ಕೊಡಲಾಗಿತ್ತು. ಮಾತೆ ಮಹಾದೇವಿ ಅವರೂ ಬೀದರ್‌ನಲ್ಲಿ ಸಭೆ ಮಾಡಿ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು ಎಂದು ಮನವಿ ಮಾಡಿದ್ದರು. ವಿರಕ್ತ, ಗುರು ಪರಂಪರೆಯವರು, ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ. ಜಾಮದಾರ ಮನವಿ ಕೊಟ್ಟರು. ಐದು ಪ್ರತ್ಯೇಕ ಪ್ರಸ್ತಾವಗಳು ಬಂದ ಕಾರಣ ಇದನ್ನು ಅಲ್ಪಸಂಖ್ಯಾತರ ಆಯೋಗಕ್ಕೆ ಒಪ್ಪಿಸಲಾಯಿತು. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ನೇತೃತ್ವದ ತಜ್ಞರ ಸಮಿತಿ ರಚಿಸಲಾಯಿತು. ಸಮಿತಿ ನೀಡಿದ ವರದಿಯನ್ನು ಸಂಪುಟ ಸಭೆ ಅಂಗೀಕರಿಸಿದ್ದು, ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ’ ಎಂದು ಮುಖ್ಯಮಂತ್ರಿ ದೀರ್ಘ ವಿವರಣೆ ನೀಡಿದರು.

ಮೋದಿ ಸರ್ಕಾರ ವಿರುದ್ಧ ವಾಗ್ದಾಳಿ: ಇದಕ್ಕೆ ಮೊದಲು ಸಂವಾದದಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದ ರಾಹುಲ್‌ ಗಾಂಧಿ, ಮೋದಿ ಸರ್ಕಾರದ
ಆರ್ಥಿಕ ನೀತಿಗಳನ್ನು ಕಟುವಾಗಿ ಟೀಕಿಸಿದರು.ಜಿಎಸ್‌ಟಿ ದೇಶದ ಪಾಲಿಗೆ ಹೊರೆಯಾಗಿದೆ. ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ವ್ಯವಸ್ಥೆ ಸರಳೀಕರಣಗೊಳಿಸಲಾಗುವುದು, ಏಕರೂಪದ ತೆರಿಗೆ ಇರುತ್ತದೆ ಎಂದು ಹೇಳಿದರು.ಮತ್ತೊಂದು ಪ್ರಶ್ನೆಗೆ ಉತ್ತರಿಸಿ ‘ನೋಟು ಅಮಾನ್ಯೀಕರಣದಿಂದ ದೇಶದ ಬ್ಯಾಂಕಿಂಗ್‌ ವ್ಯವಸ್ಥೆಗೆ ಪೆಟ್ಟಾಯಿತು. ಸಾವಿರಾರು ಕೋಟಿ ರೂಪಾಯಿ ಸಾಲ ಬಾಕಿಯಿಟ್ಟು ಉದ್ಯಮಿಗಳು ದೇಶಬಿಟ್ಟುಹೋಗಲು ಬ್ಯಾಂಕಿಂಗ್‌ ವ್ಯವಸ್ಥೆ ದುರ್ಬಲಗೊಂಡಿದ್ದೇ ಕಾರಣ’ ಎಂದರು.

ಶಾಸಕ ಶಿವಮೂರ್ತಿ ವಿರುದ್ಧ ದೂರು?

ADVERTISEMENT

ನಗರದ ಶಾಮನೂರು ರಸ್ತೆಯ ಬಾಪೂಜಿ ಅತಿಥಿ ಗೃಹದಲ್ಲಿ ಬುಧವಾರ ನಡೆದ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಶಾಸಕರು ಹಾಗೂ ಕೆಪಿಸಿಸಿ ಪದಾಧಿಕಾರಿಗಳ ಗುಪ್ತ ಸಭೆಯಲ್ಲಿ ಮಾಯಕೊಂಡ ಕ್ಷೇತ್ರದ ಟಿಕೆಟ್‌ ಕುರಿತಂತೆ ಚರ್ಚೆ ನಡೆಸಲಾಯಿತು.ಶಾಸಕ ಶಿವಮೂರ್ತಿ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ. ಅವರಿಗೆ ಟಿಕೆಟ್‌ ನೀಡಬಾರದು ಎಂದು ಆ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯೊಬ್ಬರು ಸಭೆಯಲ್ಲಿ ದೂರು ಸಲ್ಲಿಸಿದರು. ಈ ಬಗ್ಗೆ ಇಲ್ಲಿ ಚರ್ಚೆ ಬೇಡ ಎಂದು ಕಾಂಗ್ರೆಸ್‌ ಮುಖಂಡರು ಅವರನ್ನು ಕೂರಿಸಿದರು ಎಂದು ಮೂಲಗಳು ತಿಳಿಸಿವೆ.‘ಸಭೆಯಲ್ಲಿ ಪರ, ವಿರೋಧ ಚರ್ಚೆಗಳು ಆಗಿದ್ದು ನಿಜ. ಆದರೆ, ಪಕ್ಷದ ಒಗ್ಗಟ್ಟು ಒಡೆದು ಹೋಗುತ್ತದೆಂಬ ದೃಷ್ಟಿಯಿಂದ ನಾನು ಮಾತನಾಡಲಿಲ್ಲ. ವಿರೋಧಿಸುವವರು ಮೊದಲಿನಿಂದಲೂ ನನ್ನನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಹಾಗಾಗಿ, ಅದಕ್ಕೆ ಹೆಚ್ಚು ಮಹತ್ವ ಕೊಡಬೇಕಿಲ್ಲ. ಟಿಕೆಟ್‌ ಸಿಗುತ್ತದೆಂಬ ಪೂರ್ಣ ವಿಶ್ವಾಸ ನನಗಿದೆ’ ಎಂದು ಶಾಸಕ ಶಿವಮೂರ್ತಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.