ADVERTISEMENT

ಪ್ರಶಾಂತ್‌ಭೂಷಣ್ ಮೇಲೆ ಹಲ್ಲೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 8:20 IST
Last Updated 14 ಅಕ್ಟೋಬರ್ 2011, 8:20 IST

ಹರಪನಹಳ್ಳಿ: ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದರು ಎನ್ನಲಾದ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮೇಲೆ ಬುಧವಾರ ನಡೆದಿರುವ ಹಲ್ಲೆಯನ್ನು ಖಂಡಿಸಿ ಸ್ಥಳೀಯ ವಕೀಲರ ಸಂಘದ ಪದಾಧಿಕಾರಿಗಳು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸುವ ಮೂಲಕ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ನ್ಯಾಯಾಲಯದ ಕಲಾಪ ಆರಂಭವಾಗುತ್ತಿದ್ದಂತಿಯೇ ವಕೀಲರ ಸಂಘದ ಕಚೇರಿಯಲ್ಲಿ ತುರ್ತುಸಭೆ ನಡೆಸಿದ ಪದಾಧಿಕಾರಿಗಳು, ಘಟನೆಯನ್ನು ಖಂಡಿಸಿ, ನಂತರ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿಯಲು ನಿರ್ಧರಿಸಿದರು. ಬಳಿಕ ನ್ಯಾಯಾಲಯದ ಆವರಣದಿಂದ ಮಿನಿ ವಿಧಾನಸೌಧಕ್ಕೆ ತೆರಳಿ ಬಹಿರಂಗ ಸಭೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಕಣವಿಹಳ್ಳಿ ಮಂಜುನಾಥ ಮಾತನಾಡಿ, ಸುಪ್ರೀಂಕೋರ್ಟ್ ಆವರಣದಲ್ಲಿಯೇ ಹಿರಿಯ ವಕೀಲರ ಮೇಲೆ ಅಮಾನವೀಯವಾಗಿ ನಡೆಸಿರುವ ಹಲ್ಲೆ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವವನ್ನೇ ದಹಿಸುವ ಹೇಡಿಕೃತ್ಯ. ಇದೊಂದು ನಾಚಿಕೆಗೇಡಿನ ಸಂಗತಿಯಾಗಿದ್ದು, ದಾಳಿ ನಡೆಸಿದವರೂ ಎಷ್ಟೇ ಪ್ರಭಾವಿಗಳಾಗಿರಲಿ, ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಹಾಗೂ ವಕೀಲರ ಸಮೂಹ ನಿರ್ಭೀತಿಯಿಂದ ಕಾರ್ಯ ನಿರ್ವಹಿಸಲು ಸೂಕ್ತ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದ ಮನವಿಯನ್ನು ಉಪ ವಿಭಾಗಾಧಿಕಾರಿ (ಪ್ರೊಬೇಷನ್) ಬಿ. ಅನುರಾಧಾ ಅವರಿಗೆ ಸಲ್ಲಿಸಿದರು.

ಹಿರಿಯ ವಕೀಲರಾದ ಬಿ. ಕೃಷ್ಣಮೂರ್ತಿ, ಟಿ.ಎಚ್.ಎಂ. ವಿರೂಪಾಕ್ಷಯ್ಯ, ಮತ್ತಿಹಳ್ಳಿ ಅಜ್ಜಣ್ಣ, ಎ.ಕೆ. ಅಜ್ಜಪ್ಪ, ವಿ.ಜಿ. ಪ್ರಕಾಶ್‌ಗೌಡ, ಚಂದ್ರೇಗೌಡ, ಎಸ್.ಎಂ. ರುದ್ರಮುನಿಸ್ವಾಮಿ, ಇದ್ಲಿ ರಾಮಪ್ಪ, ಚನ್ನಬಸಯ್ಯ, ಬಂಡ್ರಿ ಆನಂದ್, ಮಲ್ಲಮ್ಮ, ಕವಿತಾ, ಪ್ರಸಾದ್ ದೊಡ್ಮನಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.