ADVERTISEMENT

ಪ್ಲಾಸ್ಟಿಕ್‌ಮುಕ್ತ ಗ್ರಾಮಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 8:55 IST
Last Updated 17 ಅಕ್ಟೋಬರ್ 2012, 8:55 IST
ಪ್ಲಾಸ್ಟಿಕ್‌ಮುಕ್ತ ಗ್ರಾಮಕ್ಕೆ ಸಲಹೆ
ಪ್ಲಾಸ್ಟಿಕ್‌ಮುಕ್ತ ಗ್ರಾಮಕ್ಕೆ ಸಲಹೆ   

ನಾಯಕನಹಟ್ಟಿ: ಜಾಗತೀಕರಣದಿಂದ ಭೂಮಿ ನಿತ್ಯವೂ ಕಲುಷಿತಗೊಳ್ಳುತ್ತಿದ್ದು, ಇದರ ರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳು, ಸಾರ್ವಜನಿಕರು ಮುಂದಾಗಬೇಕಿದೆ ಎಂದು ಪ್ರಾಧ್ಯಾಪಕ ಡಾ.ಎಚ್.ಕೆ.ಎಸ್. ಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿ ಚಿತ್ರದುರ್ಗ ವಿಜ್ಞಾನ ಕೇಂದ್ರ ಹಾಗು ರೋಟರಿ ಸಂಸ್ಥೆ ಚಿತ್ರದುರ್ಗ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಏರ್ಪಡಿಸಿದ್ದ  ದಸರಾ ವಿಜ್ಞಾನ ಶಿಬಿರದಲ್ಲಿ ಪ್ಲಾಸ್ಟಿಕ್ ಉಪಯೋಗದಿಂದ ಆಗುವ ಹಾನಿಯ ಬಗ್ಗೆ ಅವರು ಪ್ರಾತ್ಯಕ್ಷಿಕೆ ನೀಡಿದರು.

ಪ್ಲಾಸ್ಟಿಕ್ ವಸ್ತುಗಳು ಭೂಮಿಯಲ್ಲಿ 150 ವರ್ಷಕ್ಕೂ ಹೆಚ್ಚುಕಾಲ ಇರುತ್ತವೆ. ಆದ್ದರಿಂದ ಪ್ಲಾಸ್ಟಿಕ್ ವಸ್ತು ಗಳನ್ನು ಭೂಮಿ ಮೇಲೆ ಎಸೆಯದೇ ಮರುಬಳಕೆ ಮಾಡಿ ಪರಿಸರವನ್ನು ಸಂರಕ್ಷಿಸಿ ಎಂದು ಸಲಹೆ ನೀಡಿದರು.
ಗ್ರಾಮಗಳನ್ನು ಸಂಪೂರ್ಣ ಪ್ಲಾಸ್ಟಿಕ್‌ಮುಕ್ತ ಗ್ರಾಮಗಳನ್ನಾಗಿ ಮಾಡಲು ಜನಪ್ರತಿನಿಧಿಗಳು ಆಸಕ್ತಿ ವಹಿಸಬೇಕು. ಶುಭ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಕಪ್‌ಗಳ ಬದಲು ಪೇಪರ್ ಕಪ್‌ಗಳನ್ನು ಬಳಸಲು ಸೂಚಿಸಬೇಕು ಎಂದು ಅವರು ಕರೆ ನೀಡಿದರು.

ಉದ್ಯಮಿ ಜಿ.ಜಿ. ರಾಜು ಮಾತನಾಡಿ, ವಿದ್ಯಾರ್ಥಿಗಳು ಪರಿಸರ ರಕ್ಷಣೆಯ ಬಗ್ಗೆ ಚಿಕ್ಕಂದಿನಲ್ಲಿಯೇ ತಿಳಿದುಕೊಂಡು ಮನೆಯಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ತಿಪ್ಪೇರುದ್ರಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಎಂ.ವೈ.ಟಿ. ಸ್ವಾಮಿ, ಕಾಕಸೂರಯ್ಯ, ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಶಂಕರಪ್ಪ, ಉದ್ಯಮಿ ಪ್ರಕಾಶ್, ರಾಜಕುಮಾರ್, ಎಂ.ಕೆ. ರವೀಂದ್ರ, ಎಪಿಎಂಸಿ ನಿರ್ದೇಶಕ ರಘುನಾಥ್ ಬಾಬು ಹಾಗು ವಿಜ್ಞಾನ ಕೇಂದ್ರದ ದಾಸೇಗೌಡ, ಶಿವಸ್ವಾಮಿ ಹಾಜರಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ 100 ವಿದ್ಯಾರ್ಥಿಗಳು ಶಿಬಿರದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.