ADVERTISEMENT

ಫೋಟೊ ಅಕಾಡೆಮಿ ಸ್ಥಾಪನೆಗೆ ಹೋರಾಟ ಅಗತ್ಯ

ಛಾಯಾಗ್ರಾಹಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಶಿಧರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 5:06 IST
Last Updated 4 ಸೆಪ್ಟೆಂಬರ್ 2013, 5:06 IST

ದಾವಣಗೆರೆ:  `ರಾಜ್ಯದಲ್ಲಿ ಫೋಟೊ ಅಕಾಡೆಮಿ ಸ್ಥಾಪನೆಗಾಗಿ ಛಾಯಾಗ್ರಾಹಕರು ಸರ್ಕಾರದ ವಿರುದ್ಧ ಸಾಂಘಿಕ ಹೋರಾಟ ನಡೆಸಬೇಕಿದೆ' ಎಂದು  ಛಾಯಚಿತ್ರಗ್ರಾಹಕ ಸಂಘ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಶಶಿಧರ್ ಕರೆ ನೀಡಿದರು.

ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣಮಂಟಪದಲ್ಲಿ ಮಂಗಳವಾರ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ರೇಣುಕಾ ಫೋಟೊ ಶಾಪ್, ಜಿಲ್ಲಾ ಛಾಯಾಗ್ರಾಹಕರ ಸಂಘ, ಫೋಟೊಗ್ರಾಫರ್ ಯೂತ್ ವೆಲ್‌ಫೇರ್ ಅಸೋಸಿಯೇಷನ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ `ಛಾಯಾ ಸಂಗ್ರಮ' ಕಾರ್ಯಕ್ರದಲ್ಲಿ ಅವರು ಮಾತನಾಡಿದರು.

`ರಾಜ್ಯದಲ್ಲಿ 11ಅಕಾಡೆಮಿಗಳನ್ನು ಸರ್ಕಾರ ಸ್ಥಾಪನೆ ಮಾಡಿದೆ. 12ನೇಯದಾಗಿ ಫೋಟೊ ಅಕಾಡೆಮಿ ಸ್ಥಾಪನೆಯಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಛಾಯಾಗ್ರಾಹಕರಿಗೆ ಸ್ಪಂದಿಸುತ್ತಿಲ್ಲ. ನಮ್ಮಲ್ಲಿ ಸಂಘಟನೆಯ ಕೊರತೆಯಿಂದಾಗಿ ಹೋರಾಟದ ಬಿಸಿ ಸರ್ಕಾರಕ್ಕೆ ತಟ್ಟಿಲ್ಲ. ಅಸಂಘಟಿತರಾಗಿರುವ ನಾವು ಗ್ರಾಮೀಣಮಟ್ಟದಿಂದ ಸಂಘಟನೆಯನ್ನು ಬಲಪಡಿಸಿಕೊಳ್ಳುವ ಹೋರಾಟಕ್ಕೆ ಸಜ್ಜಾಗಬೇಕಿದೆ.

ಕೇವಲ ಅಕಾಡೆಮಿಯಷ್ಟೇ ಅಲ್ಲ, ಸರ್ಕಾರ ಛಾಯಾಗ್ರಾಹಕರಿಗೆ ರಾಜ್ಯೋತ್ಸವ ಪ್ರಶಸ್ತಿಗೂ ಸಹ ಪರಿಗಣಿಸುತ್ತಿಲ್ಲ. ಕರ್ನಾಟದಲ್ಲಿ ವಿಶ್ವಪ್ರಸಿದ್ಧ ಛಾಯಾಗ್ರಾಹಕರಿದ್ದಾರೆ. ಆದರೆ, ಅಂತಹವರಿಗೆ ಸರ್ಕಾರ, ಸಂಘ-ಸಂಸ್ಥೆಗಳಿಂದ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ. ಪ್ರೋತ್ಸಾಹದ ಕೊರತೆಯಿಂದಾಗಿ ಪ್ರತಿಭಾನ್ವಿತರು ಸೃಜನಶೀಲತೆ ಕಳೆದುಕೊಂಡು ಕೇವಲ ವೃತ್ತಿಗಷ್ಟೇ ಸೀಮಿತಗೊಳ್ಳುತ್ತಿದ್ದಾರೆ' ಎಂದು ವಿಷಾದಿಸಿದರು.

`ಛಾಯಾಗ್ರಾಹಕರ ಸಂಕಷ್ಟಗಳಿಗೆ ನೆರವಾಗಲು ರಾಜ್ಯದಲ್ಲಿ ಒಂದು ಛಾಯಾಗ್ರಾಹಕರ ಟ್ರಸ್ಟ್ ಸ್ಥಾಪನೆಯ ಚಿಂತನೆ ರಾಜ್ಯ ಸಂಘದ ಮುಂದಿದೆ. ಅದಕ್ಕಾಗಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರಿಗೆ ಮನವಿ ಮಾಡಲಾಗಿದೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಟ್ರಸ್ಟ್ ಸ್ಥಾಪನೆ ವಿಳಂಬವಾಗಿದೆ. ಸಂಘದ ಸದಸ್ಯರ ಸಹಕಾರ ಮತ್ತು ಪ್ರೋತ್ಸಾಹ ಸಕಾರಾತ್ಮಕವಾದಲ್ಲಿ ಮುಂದಿನ ದಿನಗಳಲ್ಲಿ ಛಾಯಾಗ್ರಾಹಕರ ಟ್ರಸ್ಟ್ ಸ್ಥಾಪನೆ ಮಾಡಲಾಗುವುದು' ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಚಲನಚಿತ್ರ ಹಿರಿಯ ನಟಿ ಗಿರಿಜಾ ಲೋಕೇಶ್ ಮಾತನಾಡಿ, `ಛಾಯಾಗ್ರಹಣ ಎಂಬುದು ತಾಂತ್ರಿಕ ಬದುಕು ಇದ್ದಂತೆ. ಅದನ್ನು ನಿಭಾಯಿಸಲು ತಪಸ್ಸಿನ ಏಕಾಗ್ರ ಶಕ್ತಿ ಅಗತ್ಯ. ಆ ಶಕ್ತಿಯನ್ನು ಛಾಯಾಗ್ರಾಹಕರು ಪಡೆದುಕೊಳ್ಳಬೇಕು. ಉತ್ತಮ ಛಾಯಾಗ್ರಾಹಕ ಒಂದು ಕಾಲದ ಕತೆಯ ಕನ್ನಡಿ ಮತ್ತು ಪ್ರತಿಬಿಂಬ ಇದ್ದಂತೆ. ಆದರೆ, ಈಗ ಕಲಾವಿದರ ಬದುಕು ತುಂಬಾ ದುಸ್ತರವಾಗಿದೆ.

ರಂಗಭೂಮಿ- ಚಲನಚಿತ್ರ ಎರಡೂ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅನೇಕ ಪ್ರತಿಭಾನ್ವಿತ ಕಲಾವಿದರು ಇಂದು ನಿರ್ಗತಿಕರಾಗಿದ್ದಾರೆ. ಅವರ ಬದುಕಿನತ್ತ ಸರ್ಕಾರ, ಸಂಘ-ಸಂಸ್ಥೆಗಳು ಕಣ್ಣೆತ್ತಿಯೂ ನೋಡುತ್ತಿಲ್ಲ. ಅಂತಹ ಹಲವು ಕಲಾವಿದರನ್ನು ಗುರುತಿಸಿ ಅವರ ವೈದ್ಯಕೀಯ ವೆಚ್ಚವನ್ನು ಭರಿಸುವ ಕಾರ್ಯ ಮಾಡುತ್ತಿದ್ದೇನೆ' ಎಂದರು.

ಹಿರಿಯ ಛಾಯಾಗ್ರಾಹಕ ಎಚ್.ಬಿ. ಮಂಜುನಾಥ್ ಮಾತನಾಡಿ, `ಛಾಯಾಗ್ರಾಹಕರು ಕಾಲಗಳನ್ನು ಸೆರೆಹಿಡಿದು ಬಣ್ಣಿಸುವ ಚತುರರಾಗಿದ್ದಾರೆ. ಅವರು ಎಂದೂ ದುಡ್ಡಿನ ಬೆನ್ನಿಗೆ ಬಿದ್ದವರಲ್ಲ. ಅವರ ಸೇವೆ ಸಮಾಜಕ್ಕೆ ಸಮರ್ಪಿತವಾಗಿದೆ' ಎಂದು ಹೇಳಿದರು.
ದಾವಣಗೆರೆ ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಪಿ.ಎಚ್. ಸುರೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.