ADVERTISEMENT

ಫ್ಲೋರೈಡ್‌ಮುಕ್ತ ನೀರು ಪೂರೈಕೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 4:30 IST
Last Updated 16 ಏಪ್ರಿಲ್ 2012, 4:30 IST

ಹರಪನಹಳ್ಳಿ: ಮಳೆಯ ಜೂಜಾಟಕ್ಕೆ ಸಿಲುಕಿ ಪಾತಾಳಕ್ಕೆ ಕುಸಿದಿರುವ ಅಂತರ್ಜಲದ ಪರಿಣಾಮ ಈ ಭಾಗದ ಜನರ ಕುಡಿಯುವ ನೀರು ವಿಷಕಾರಿಯಾಗಿದೆ. ಜನರ ಆರೋಗ್ಯಕ್ಕೆ ಕಂಟಕವಾಗಿರುವ ಫ್ಲೋರೈಡ್‌ಯುಕ್ತ ನೀರಿಗೆ ಅಂತ್ಯ ಹಾಡಿ, ಶಾಶ್ವತ ಫ್ಲೋರೈಡ್‌ಮುಕ್ತ ನೀರು ಪೂರೈಸಲು ಅವಿರತವಾಗಿ ಶ್ರಮಿಸುತ್ತಿದ್ದೇವೆ ಎಂದು ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಹೇಳಿದರು.

ಶುಕ್ರವಾರ ತಾಲ್ಲೂಕಿನ ಹರಿಯಮ್ಮನಹಳ್ಳಿ ಹಾಗೂ ನಿಚ್ಚವ್ವನಹಳ್ಳಿ ಗ್ರಾಮದಲ್ಲಿ ವಿವಿಧ ಯೋಜನೆ ಅಡಿ ನಿರ್ಮಿಸಲಾದ ರಸ್ತೆ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಚಿಗಟೇರಿ ಭಾಗದ 101ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆಗೆ ಈಗಾಗಲೇ ಮಂಜೂರಾತಿ ದೊರಕಿದ್ದು, ಟೆಂಡರ್ ಪ್ರಕ್ರಿಯೆಯ ಹಂತದಲ್ಲಿದೆ. ರೂ. 75.73ಲಕ್ಷ ಮೊತ್ತದ ಎರಡು ಯೋಜನೆಗಳು ಜಾರಿಯಾದರೆ ಈ ಭಾಗದ ಜನ ನೀರಿಗಾಗಿ ಪರಿತಪಿಸುತ್ತಿರುವ ಸಮಸ್ಯೆ ಕೊನೆಗೊಳ್ಳಲಿದೆ. ಶೀಘ್ರದಲ್ಲಿಯೇ ಎರಡು ಯೋಜನೆಗಳನ್ನು ಪೂರ್ಣಗೊಳಿಸಿ ಶುದ್ಧ ಶಾಶ್ವತ ನೀರು ಒದಗಿಸಲು ಪ್ರಯತ್ನಿಸಲಾಗುವುದು ಎಂದರು.

ವಸತಿರಹಿತ ಕುಟುಂಬಗಳ ತಲೆಯ ಮೇಲೊಂದು ಸೂರು ಒದಗಿಸುವ ಹಿನ್ನೆಲೆಯಲ್ಲಿ ಈಗಾಗಲೇ ತಾಲ್ಲೂಕಿನಾದ್ಯಂತ 4,500ಮನೆಗಳ ಹಂಚಿಕೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದ ವಸತಿರಹಿತರ ಸಮಸ್ಯೆ ನಿವಾರಣೆಗಾಗಿ 5,339 ಹಾಗೂ ಪಟ್ಟಣ ಪ್ರದೇಶದ ಕುಟುಂಬಗಳಿಗಾಗಿ 2ಸಾವಿರ ಮನೆಗಳ ಪ್ರಸ್ತಾವ ಸಲ್ಲಿಸಲಾಗಿದೆ.

ತಾಲ್ಲೂಕಿಗೆ 7ಸಾವಿರಕ್ಕೂ ಅಧಿಕ ಮನೆಗಳು ಮಂಜೂರಾಗುವ ವಿಶ್ವಾಸ ಇದೆ. ಒಟ್ಟಾರೆಯಾಗಿ ಜಿಲ್ಲೆಯನ್ನು ಗುಡಿಸಲುರಹಿತ ಜಿಲ್ಲೆಯಾಗಿ ಪರಿವರ್ತಿಸಲು ಸ್ಥಳೀಯ ಶಾಸಕರು ಹಾಗೂ ತಾವು ಪಣ ತೊಟ್ಟಿರುವುದಾಗಿ ತಿಳಿಸಿದರು.

ಶಾಸಕ ಜಿ. ಕರುಣಾಕರರೆಡ್ಡಿ ಮಾತನಾಡಿ, ತಾವು ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಬಳಿಕ ನೀರು, ಸೂರು, ರಸ್ತೆ, ಶಿಕ್ಷಣ ಸೇರಿದಂತೆ ಮೂಲಸೌಕರ್ಯಗಳ ಒದಗಿಸಲು ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಕಳೆದ ಮೂರೂವರೆ ವರ್ಷದ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆಗಳ ಅಭಿವೃದ್ಧಿಗಾಗಿ ರೂ. 80ಕೋಟಿ ಮೊತ್ತದ ಅನುದಾನ ಬಿಡುಗಡೆಯಾಗಿದೆ. ಪ್ರತಿ ಹಳ್ಳಿಗಳಿಗೂ ಉತ್ತಮ ರಸ್ತೆ ಸಂಪರ್ಕ ನಿರ್ಮಿಸಲಾಗಿದೆ. ಕೆಲ ಕಾಮಗಾರಿ ಪ್ರಗತಿಯಲ್ಲಿವೆ ಎಂದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಟಿ. ಪಾಂಡ್ಯಪ್ಪ, ಪಿಆರ್‌ಇ ಉಪವಿಭಾಗದ ಎಇಇ ಶಶಿಧರ, ಲೋಕೋಪಯೋಗಿ ಇಲಾಖೆಯ ಎಇಇ ಉಮಾಪತಿ, ಪಕ್ಷದ ಮುಖಂಡರಾದ ಆರುಂಡಿ ನಾಗರಾಜ, ಪಿ. ಮಹಾಬಲೇಶ್ವರಗೌಡ, ಡಾ.ರಮೇಶಕುಮಾರ, ಗಿರಿರಾಜರೆಡ್ಡಿ, ಬಾಗಳಿ ಕೊಟ್ರೇಶಪ್ಪ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.